ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಹಕ್ಕು ಕಾಯ್ದೆ ಜಾರಿ: ರಾಜ್ಯಗಳ ಧೋರಣೆಗೆ ಅಸಮಾಧಾನ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಪ್ರಮುಖ ರಾಜ್ಯಗಳು ಶಿಕ್ಷಣ ಹಕ್ಕು (ಆರ್‌ಟಿಇ)ಕಾಯ್ದೆಯನ್ನು ಜಾರಿಗೊಳಿಸಲು ಹಿಂಜರಿಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್,  ಒಂದು ವೇಳೆ ಕಾಯ್ದೆಯನ್ನು ದೇಶದಾದ್ಯಂತ ಜಾರಿಗೊಳಿಸಲು ಸಾಧ್ಯವಾಗದೇ ಹೋದರೆ ಅದೊಂದು `ಐತಿಹಾಸಿಕ ವೈಫಲ್ಯ~ವಾಗಲಿದೆ ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ ಬುಧವಾರ ರಾಜ್ಯಗಳ ಶಿಕ್ಷಣ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಶಿಕ್ಷಣದ ಹಕ್ಕು ಕಾಯ್ದೆಯನ್ನು ಇನ್ನೂ ಜಾರಿಗೆ ತರದ ರಾಜ್ಯಗಳ ಹೆಸರುಗಳನ್ನು ಸಿಬಲ್ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಆರ್‌ಟಿಇ ಕಾಯ್ದೆಯನ್ನು ಕಳೆದ ವರ್ಷ ಅಂಗೀಕರಿಸಲಾಗಿತ್ತು. ಇದುವರಗೆ 20 ರಾಜ್ಯಗಳು ಕಾಯ್ದೆಯನ್ನು ಜಾರಿಗೆ ತಂದಿವೆ. ಪ್ರಮುಖ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳ ರಾಜ್ಯಗಳು ಇನ್ನೂ ಕಾಯ್ದೆಯನ್ನು  ಜಾರಿಗೊಳಿಸಿಲ್ಲ ಎಂದರು.

ಆರ್‌ಟಿಇ ಕಾಯ್ದೆಯಿಂದಾಗುವ ಪ್ರಯೋಜನಗಳ ಕುರಿತಂತೆ ದೇಶದಾದ್ಯಂತ ಜಾಗೃತಿ ಮೂಡಿಸುವ ಮತ್ತು ಕಾಯ್ದೆಗೆ ಉತ್ತೇಜನ ನೀಡುವ ಮಾರ್ಗೋಪಾಯಗಳ ಕುರಿತು ಸಿಬಲ್ ಅವರು ವಿವಿಧ ರಾಜ್ಯಗಳ ಶಿಕ್ಷಣ ಸಚಿವರಿಗೆ ಈ ಸಂದರ್ಭದಲ್ಲಿ ಮಾಹಿತಿಯನ್ನು  ನೀಡಿದರು. ಶಾಲೆಗಳಲ್ಲಿ ಆರ್‌ಟಿಇಗೆ ಉತ್ತೇಜನ ನೀಡುವ ಸಲುವಾಗಿ ರಾಷ್ಟ್ರದಾದ್ಯಂತ ಕೇಂದ್ರ ಸರ್ಕಾರ ಅಭಿಯಾನ ಆರಂಭಿಸಲಿದ್ದು,  ನವೆಂಬರ್ 11ರಂದು ಹರಿಯಾಣದ ನುಹ್, ಮೆವತ್‌ನಲ್ಲಿ ಚಾಲನೆ ನೀಡಲಾಗುವುದು.  ದೇಶದ ಒಟ್ಟು 13 ಲಕ್ಷ ಶಾಲೆಗಳಲ್ಲಿ ಈ ಅಭಿಯಾನ ನಡೆಯಲಿದೆ ಎಂದು ಕಪಿಲ್ ಸಿಬಲ್ ಹೇಳಿದರು.

ಆರ್‌ಟಿಇ ಕಾಯ್ದೆಯನ್ನು ಜಾರಿಗೊಳಿಸಿರುವ ರಾಜ್ಯಗಳಿಗೆ ಹೊಸ  ಶಾಲೆಗಳನ್ನು ಆರಂಭಿಸಲು ಮತ್ತು ಇತರ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ ಅನುದಾನ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT