ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ದಸಂಸ ಧರಣಿ

Last Updated 22 ಮೇ 2012, 8:30 IST
ಅಕ್ಷರ ಗಾತ್ರ

ಮೈಸೂರು:  ಶಿಕ್ಷಣ ಹಕ್ಕು ಕಾಯ್ದೆ ಯನ್ನು ಕಡ್ಡಾಯವಾಗಿ ಜಾರಿಗೊಳಿ ಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

ಖಾಸಗಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿಯ ಮಕ್ಕಳನ್ನು ಶಾಲೆಯಿಂದ ಹೊರಗಿಡುವ ಹುನ್ನಾರ ಬಹು ದಿನಗಳಿಂದ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಮೀಸಲಾತಿಯನ್ನು ಪಾಲಿಸ ದಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಇಲ್ಲವೆ ಸಂಸ್ಥೆಯ ಅನುಮತಿಯನ್ನು ರದ್ದುಪಡಿಸ ಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ.25 ಮೀಸಲಾತಿಯನ್ನು ಪರಿಶಿಷ್ಟ ಜಾತಿಯವರಿಗೆ ಕಡ್ಡಾಯ ವಾಗಿ ನೀಡಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.

ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸುವ ಯೋಜನೆ ಯನ್ನು ರೂಪಿಸಬೇಕು. ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚ ಬಾರದು. ಶಾಲೆಗಳ ಗುಣಮಟ್ಟ ಹೆಚ್ಚಿ ಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಮಕ್ಕಳು ಶಾಲೆಯಲ್ಲಿ ಕಡ್ಡಾಯ ವಾಗಿ ಕಲಿಯುವ ನಿಟ್ಟಿನಲ್ಲಿ ಹೋಬಳಿ ಗೊಂದು ವಸತಿ ಶಾಲೆ ತೆರೆಯಬೇಕು.

ಶಾಲೆ ಹಾಗೂ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ಕಟ್ಟಲು ಹಾಗೂ ಶಿಕ್ಷಕರ ಕೊರತೆ ನಿವಾರಿಸಲು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಉನ್ನತ ಶಿಕ್ಷಣ ಪಡೆದ ಶಿಕ್ಷಕರನ್ನು ನೇಮಿಸ ಬೇಕು. ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚು ಹಣ ಬಿಡುಗಡೆ ಮಾಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಬೆಳ್ತೂರು ಮಹದೇವ, ಉಪಾಧ್ಯಕ್ಷರಾದ ಟಿ.ರಾಮು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರುಗೇಶ್, ಸಹ ಕಾರ್ಯದರ್ಶಿ ಉದಯ ಶಂಕರ್ ಧರಣಿಯ ನೇತೃತ್ವ ವಹಿಸಿದ್ದರು.

ಖಾಸಗಿ ಶಾಲೆಗಳಲ್ಲಿ ಸೀಟು ನೀಡಲು ಆಗ್ರಹ
ಮೈಸೂರು: ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ ಮಕ್ಕಳಿಗೆ ಮೀಸಲಿಡಲಾದ ಶೇ.25 ಮೀಸಲಾತಿ ಸೀಟನ್ನು ಕಡ್ಡಾಯವಾಗಿ ನೀಡಬೇಕು ಎಂದು ಪೋಷಕರ ಕ್ರಿಯಾ ಸಮಿತಿ ಆಗ್ರಹಿಸಿತು.

`ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಮೀಸಲಾತಿ ಯೋಜನೆಯಡಿ ಪೋಷಕರು ತಮ್ಮ ಮಕ್ಕಳಿಗೆ ಸೀಟನ್ನು ಪಡೆದುಕೊಳ್ಳಬೇಕು. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕರಪತ್ರಗಳನ್ನು ಹಂಚಲಾಗುವುದು~ ಎಂದು ಸಮಿತಿ ಗೌರವ ಅಧ್ಯಕ್ಷ ಎಸ್.ಜಯಪ್ರಕಾಶ್ ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

`ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮೀಸಲಾತಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಇದು ಜನರಿಗೆ ಸಮರ್ಪಕವಾಗಿ ಮುಟ್ಟಬೇಕಾಗಿದ್ದಲ್ಲಿ ಅಧಿಕಾರಿಗಳು ಶ್ರಮಿಸಬೇಕು. ಸಮಿತಿ ವತಿಯಿಂದ ಮುಂದಿನ ವಾರ ಪೋಷಕರ ಸಭೆ ಕರೆದು ಇದರ ಸಾಧಕ- ಬಾಧಕಗಳ ಕುರಿತು ಚರ್ಚೆ ನಡೆಸಲಾಗುವುದು~ ಎಂದು ತಿಳಿಸಿದರು.

`ರೂ.3.5 ಲಕ್ಷ ಆದಾಯ ಮಿತಿ ಇರುವ ಕುಟುಂಬದ ಮಕ್ಕಳು ಸೀಟುಗಳನ್ನು ಪಡೆದುಕೊಳ್ಳಬಹುದು. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಆದಾಯ ಮಿತಿ ಕಡಿಮೆ ಮಾಡಿದರೆ ಅರ್ಹ ಬಡ ವಿದ್ಯಾರ್ಥಿಗಳಿಗೆ ಅನುಕೂಲ ವಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳ ಜೊತೆಗೂಡಿ ಚರ್ಚೆ ನಡೆಸಿ ಹೋರಾಟ ನಡೆಸಲಾಗುವುದು~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಪರೀಕ್ಷೆಯನ್ನು ಮನಬಂದಂತೆ ನಡೆಸಲಾಗುತ್ತಿದೆ. ಸಂಸ್ಥೆಗಳು ಪರೀಕ್ಷೆ ನಡೆಸುವುದಕ್ಕೆ ಅವಕಾಶ ನೀಡದೆ ಪದವಿಪೂರ್ವ ಶಿಕ್ಷಣ ಮಂಡಳಿಯೇ ಪರೀಕ್ಷೆ ನಡೆಸಬೇಕು. ಶಿಕ್ಷಣ ಸಂಸ್ಥೆಗಳು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿಲ್ಲ.
 
ಶಿಕ್ಷಣವನ್ನು ವ್ಯಾಪಾರ ದೃಷ್ಟಿಯಲ್ಲಿ ನೋಡುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು~ ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಶ್ರೀನಾಥ್, ಪ್ರೇಮ, ಅನಿಲ್‌ಕುಮಾರ್, ಗೋಪಾಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT