ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶಿಕ್ಷಣ ಹಕ್ಕು ಕಾಯ್ದೆ ಯಶಸ್ವಿ ಜಾರಿ'

Last Updated 1 ಜೂನ್ 2013, 9:43 IST
ಅಕ್ಷರ ಗಾತ್ರ

ಬಳ್ಳಾರಿ: ಬೇಸಿಗೆ ರಜೆಯ ನಂತರ ಶುಕ್ರವಾರ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳು ಆರಂಭವಾದವು.

ವಿದ್ಯಾರ್ಥಿಗಳು ಹರ್ಷದಿಂದಲೇ ಶಾಲೆಗೆ ತೆರಳಿ ತರಗತಿಗಳಲ್ಲಿ ಕುಳಿತರು. ಕೆಲವು ಶಾಲೆಗಳಲ್ಲಿ ಮೊದಲ ದಿನ ಹಾಜರಾತಿ ಪ್ರಮಾಣ ಕಡಿಮೆ ಇತ್ತಾದರೂ, ಇನ್ನು ಕೆಲವೆಡೆ ಹಾಜರಾತಿ ಗಮನಾರ್ಹವಾಗಿತ್ತು.

ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶ: ಜಿಲ್ಲೆಯಲ್ಲಿ ಶಿಕ್ಷಣ ಹಕ್ಕಿನ ಕಾಯ್ದೆ ಯಶಸ್ವಿಯಾಗಿ ಜಾರಿಯಾಗಿದ್ದು. ಜಿಲ್ಲೆಯ 467 ಖಾಸಗಿ ಶಾಲೆಗಳಲ್ಲಿರುವ 4,826 ಸ್ಥಾನಗಳಿಗೆ 2013-14ನೇ ಶೈಕ್ಷಣಿಕ ಸಾಲಿಗೆ 12 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಡಿಡಿಪಿಐ) ಟಿ.ನಾರಾಯಣಗೌಡ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಶಿಕ್ಷಣ ಹಕ್ಕು ಕಾಯ್ದೆ ಅಡಿ 4,759 ಸೀಟುಗಳನ್ನು ತುಂಬಲಾಗಿದ್ದು, ಬಾಕಿ ಇರುವ 67 ಸ್ಥಾನಗಳನ್ನು ಕೆಲವೇ ದಿನಗಳಲ್ಲಿ ಭರ್ತಿ ಮಾಡಲಾಗುವುದು ಎಂದು ಅವರು ತಿಳಿಸಿದರು.ಕಳೆದ ಶೈಕ್ಷಣಿಕ ಸಾಲಿಗೆ ಹೋಲಿಸಿದಲ್ಲಿ ಈ ಬಾರಿ ಶಿಕ್ಷಣ ಹಕ್ಕಿನ ಅಡಿ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

ಕಳೆದ ಸಾಲಿನಲ್ಲಿ 2,693 ವಿದ್ಯಾರ್ಥಿಗಳು ಶಿಕ್ಷಣ ಹಕ್ಕು ಅಡಿ ಪ್ರವೇಶ ಪಡೆದಿದ್ದರು ಎಂದು ಅವರು ಮಾಹಿತಿ ನೀಡಿದರು. ಪಾಲಕರು ಮತ್ತು ಪೋಷಕರಲ್ಲಿ ಶಿಕ್ಷಣ ಹಕ್ಕು ಕುರಿತ ಜಾಗೃತಿ ಮೂಡಿದೆ. ಆದರೂ ಜಿಲ್ಲೆಯ 30 ಖಾಸಗಿ ಶಾಲೆಗಳಲ್ಲಿ ಯಾವುದೇ ವಿದ್ಯಾರ್ಥಿ ಅರ್ಜಿ ಸಲ್ಲಿಸಿಲ್ಲ ಎಂದು ಅವರು ವಿವರಿಸಿದರು.

2013-14ನೇ ಶೈಕ್ಷಣಿಕ ಸಾಲಿನ ಪ್ರಾಥಮಿಕ ಪೂರ್ವ ತರಗತಿಗಳಿಗೆ ಇಲ್ಲಿಯವರೆಗೆ 876 ಸ್ಥಾನಗಳು ಭರ್ತಿಯಾಗಿದ್ದು, ಅವುಗಳಲ್ಲಿ 263 ಅನುಸೂಚಿತ ಜಾತಿಗೆ ಸೇರಿದ ವಿದ್ಯಾರ್ಥಿಗಳು, 53 ಜನ ಅನುಸೂಚಿತ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು, ಹಿಂದುಳಿದ ವರ್ಗಗಳ 562 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 1ನೇ ತರಗತಿಗೆ 3883 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಇವರಲ್ಲಿ 1165 ವಿದ್ಯಾರ್ಥಿಗಳು ಅನುಸೂಚಿತ ಜಾತಿಗೆ, 233 ಅನುಸೂಚಿತ ಪಂಗಡಗಳ ಹಾಗೂ 2485 ವಿದ್ಯಾರ್ಥಿಗಳು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ್ದಾರೆ ಎಂದು ಅವರು ವಿವರಣೆ ನೀಡಿದರು.

ಅಲ್ಲದೆ ಸರ್ಕಾರ ಪ್ರತಿವರ್ಷ ಪ್ರತಿ ವಿದ್ಯಾರ್ಥಿಗೆ ಟ್ಯೂಷನ್ ಶುಲ್ಕವೆಂದು ರೂ.11,848 ನೀಡಲಿದೆ ಎಂದು ಅವರು ತಿಳಿಸಿದರು.

ಶುಕ್ರವಾರ ಜಿಲ್ಲೆಯಾದ್ಯಂತ ಶಾಲೆಗಳು ಆರಂಭವಾಗಿದ್ದು, ಮೊದಲ ದಿನವೇ ಸಮವಸ್ತ್ರ, ಪಠ್ಯಪುಸ್ತಕ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಮಧ್ಯಾಹ್ನದ ಬಿಸಿಯೂಟ ಪೂರೈಕೆಯೂ ಆಗುತ್ತಿದೆ ಎಂದು ಅವರು ಹೇಳಿದರು.

ಪ್ರಭಾತ್ ಫೇರಿ, ಸಿಹಿಯೂಟ
ಕಂಪ್ಲಿ: ಇಲ್ಲಿಗೆ ಸಮೀಪದ ಚಿನ್ನಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಾಲಾ ಆರಂಭ ದಿನವಾದ ಶುಕ್ರವಾರ ಸಮವಸ್ತ್ರ ಧರಿಸಿ ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಿ ನಂತರ `ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ' ಎನ್ನುವ ಘೋಷಣೆಗಳೊಂದಿಗೆ ಗ್ರಾಮದಲ್ಲಿ ಪ್ರಭಾತಫೇರಿ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ. ಬಾಬುಸಾಹೇಬ್ ಪ್ರಭಾತಫೇರಿಗೆ ಚಾಲನೆ ನೀಡಿ, ತಪ್ಪದೆ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕರಲ್ಲಿ ಮನವಿ ಮಾಡಿದರು.

ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಟಿ. ನಾಗರಾಜ, ಪಿ. ಹುಸೇನ್‌ಸಾಬ್, ಟಿ. ಹೊನ್ನೂರಪ್ಪ, ಎಸ್. ಬಸಪ್ಪ, ಟಿ. ಶ್ರೀನಿವಾಸ, ಎಸ್. ವಿರೂಪಾಕ್ಷಿ, ಎಸ್. ಗಣೇಶ್, ಟಿ. ಶೇಷಪ್ಪ, ಎಸ್. ಸ್ವಾಮಿ, ಗ್ರಾ.ಪಂ ಮಾಜಿ ಸದಸ್ಯ ಎಸ್. ನಾಗರಾಜ, ಮುಖ್ಯಗುರು ಮಲ್ಲಯ್ಯ ಆರ್. ಮಠ, ಶಿಕ್ಷಕರಾದ ಜಿ. ಸಂಗನಗೌಡ, ಕೆ.ಬಿ. ಕುಮಾರ್, ಬಿ. ಹನುಮಂತಪ್ಪ, ನಿಂಗಪ್ಪ ಅಂಗಡಿ ಹಾಜರಿದ್ದರು. ಎಲ್ಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಿದ ನಂತರ ಶಾಲಾ ಪ್ರಾರೋಭೋತ್ಸವ ಅಂಗವಾಗಿ ವಿಶೇಷವಾಗಿ ತಯಾರಿಸಿದ್ದ ಸಿಹಿ ಅಡಿಗೆಯನ್ನು ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಮಕ್ಕಳಿಗೆ ಉಣಬಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT