ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶಿಕ್ಷಣಕ್ಕೆ ಬೇಕು ನೈತಿಕತೆ ಚೌಕಟ್ಟು'

Last Updated 6 ಸೆಪ್ಟೆಂಬರ್ 2013, 5:56 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಾಗತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಂತಹ ಶಿಕ್ಷಣ ಇಂದಿನ ಅಗತ್ಯ. ಇಂತಹ ಶಿಕ್ಷಣಕ್ಕೆ ನೈತಿಕತೆಯ ಚೌಕಟ್ಟು ಹಾಕಿಕೊಳ್ಳಬೇಕು ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕು ಶಿಕ್ಷಕರ ದಿನಾಚರಣೆ ಸಮಿತಿ ಆಶ್ರಯದಲ್ಲಿ ಗುರುವಾರ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಉತ್ತಮ ರಾಷ್ಟ್ರ ನಿರ್ಮಾಣ ಮಾಡಲು ಹಾಗೂ ಸೇವಾ ಕ್ಷೇತ್ರವಾಗಿದ್ದ ಶಿಕ್ಷಣ ಇಂದು ಉದ್ಯಮವಾಗಿ ಮಾರ್ಪಟ್ಟಿರುವುದು ಅತ್ಯಂತ ಅಪಾಯಕಾರಿ. ಶಿಕ್ಷಣ ವ್ಯವಸ್ಥೆ ಕೆಟ್ಟು ಹೋದರೆ ಇಡೀ ದೇಶ ಕೆಟ್ಟು ಹೋಗಲಿದೆ ಎಂದು ಎಚ್ಚರಿಸಿದರು.

ಉತ್ತಮ ಶಿಕ್ಷಣ ನೀಡುವ ಮೂಲಕ ಶ್ರೇಷ್ಠ ಜನಾಂಗ ರೂಪಿಸಬೇಕು. ಅದರ ವಾರಸುದಾರರು ನಾವಾಗಬೇಕು. ಎಲ್ಲ ಗುರುಗಳು ಶಿಕ್ಷಕರಾಗಲಾರರು, ಎಲ್ಲ ಶಿಕ್ಷಕರು ಗುರುಗಳಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಅವರನ್ನು ಬೆಳಕಿನೆಡೆಗೆ ಕೊಂಡೊಯ್ಯುವವರು ಗುರುಗಳಾಗುತ್ತಾರೆ. ಹಿಂದೆ ಬತ್ತಿಯಂತೆ ಉರಿದು ವಿದ್ಯಾರ್ಥಿಗಳಿಗೆ ಬೆಳಕು ನೀಡಿದ್ದರಿಂದ ಶಿಕ್ಷಕರಿಗೆ ಗುರುವಿನ ಸ್ಥಾನ ನೀಡಲಾಗಿತ್ತು ಎಂದರು.

ಉಪನ್ಯಾಸ ನೀಡಿದ ತ್ಯಾಗರಾಜ್, ಗುರುಶಕ್ತಿ ಅನನ್ಯವಾದುದು. ಶಿಕ್ಷಕರ ಜೀವನ ಹರಿಯುವ ನೀರಿನಂತಿರಬೇಕು. ವಿದ್ಯಾರ್ಥಿಗಳಿಗೆ ಪ್ರಚಲಿತ ವಿದ್ಯಾಮಾನಗಳನ್ನು ತಿಳಿಸುವುದರೊಂದಿಗೆ ಜ್ಞಾನದ ಹಸಿವು ಇಂಗಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.

ಶಿಕ್ಷಕರು ಮಾಡುವ ತಪ್ಪುಗಳು ಶೂನ್ಯವಾಗಿರಬೇಕು. ಉನ್ನತ ಕಾರ್ಯನಿರ್ವಹಣೆ ಯಲ್ಲಿರಬೇಕು. ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಮೇಲ್ವಿಚಾರಣೆಯಿಂದ ಕಾರ್ಯನಿರ್ವಹಿಸಲಾಗುತ್ತಿದೆಯೇ? ಇಲ್ಲವೇ? ಎಂಬುದರ ಕುರಿತು ಆತ್ಮಾವಾಲೋಕನ ಮಾಡಿಕೊಳ್ಳಬೇಕು. ಅಂತರ್‌ದೃಷ್ಟಿ ಬೆಳೆಸಿಕೊಂಡು ಶಿಕ್ಷಕ ವೃತ್ತಿ ಅಪ್ಪಿ, ಒಪ್ಪಿಕೊಂಡು ಪ್ರೀತಿಸುವುದನ್ನು ಕಲಿಯಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.

ತಾ.ಪಂ. ಪ್ರಭಾರ ಅಧ್ಯಕ್ಷ ಪುಟ್ಟೇಗೌಡ, ಜಿ.ಪಂ. ಸದಸ್ಯರಾದ ನಿರಂಜನ್, ಹೇಮಾವತಿ ದೇವೇಗೌಡ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಧರ್ಮಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಪಿ.ಹೊನಕೇರಿ, ಜಿ.ಪಂ. ಉಪಕಾರ್ಯದರ್ಶಿ ರಾಜಗೋಪಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಸುಂದರೇಶ್, ಉಮಾಮಹೇಶ್ವರಪ್ಪ, ಕುಂದೂರು ಅಶೋಕ್, ಅರುಣ್‌ಕುಮಾರಿ, ಕೃಷ್ಣೇಗೌಡ, ಚಂದ್ರೇಗೌಡ ವೇದಿಕೆಯಲ್ಲಿದ್ದರು.

ಕಾರ್ಯಕ್ರಮಕ್ಕೂ ಮೊದಲು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಒಕ್ಕಲಿಗರ ಸಮುದಾಯದವರೆಗೂ ರಾಧಾಕೃಷ್ಣನ್ ಅವರ ಭಾವಚಿತ್ರದೊಂದಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT