ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ಕೇಸರೀಕರಣ: ಆರೋಪ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಬಿಜೆಪಿ ಸರ್ಕಾರ ಶಿಕ್ಷಣವನ್ನು ಕೇಸರಿಕರಣಗೊಳಿಸುತ್ತಿದೆ~ ಎಂದು ಹಿಂದುಳಿದ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
`5 ಮತ್ತು 8 ನೇ ತರಗತಿಯ ಪಠ್ಯಗಳ ಕರಡು ಪ್ರತಿ ಲಭ್ಯವಿದ್ದು, ಅದರಲ್ಲಿ ಕೇವಲ ವೈದಿಕ ಧರ್ಮದ ಮತ್ತು ಆರ್‌ಎಸ್‌ಎಸ್‌ನ ವಿಚಾರಗಳನ್ನು ತುಂಬಿಸಲಾಗಿದೆ.
 
ಈ ಪುಸ್ತಕದ ಮುಖಪುಟದಲ್ಲಿ ಸಮಿತಿಯ ಸದಸ್ಯರ ಹೆಸರು ಅಥವಾ ಯಾವ ಇಸವಿಯಲ್ಲಿ ಸಮಿತಿಯ ರಚನೆ ಆಯಿತು ಎಂಬ ವಿವರಣೆಗಳೇ ಇಲ್ಲ~ ಎಂದು ಹೇಳಿದರು.ಪುಸ್ತಕಗಳಲ್ಲಿ  ಕಿತ್ತೂರು ರಾಣಿ ಚನ್ನಮ್ಮ, ಬುದ್ಧ ಹೀಗೆ ಎಲ್ಲ ಮಹನೀಯರ ಬಗ್ಗೆ ಬರೆಯುವಾಗ ಏಕವಚನವನ್ನು ಬಳಸಿ ಬರೆಯಲಾಗಿದೆ. ಎಲ್ಲೂ ಅವರ ಬಗ್ಗೆ ಬಹುವಚನವನ್ನು ಬಳಸದೆ ಅವಮಾನ ಮಾಡಲಾಗಿದೆ~ ಎಂದರು.

`ಹಿಂದೂ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾತ್ರ ವಿವರಣೆಯನ್ನು ನೀಡಲಾಗಿದೆಯೇ ಹೊರತು ಅದರಲ್ಲಿ ಮಸೀದಿ, ಚರ್ಚ್, ಬುದ್ಧವಿಹಾರಗಳ ಬಗ್ಗೆ ಯಾವುದೇ ವಿವರಣೆಗಳಿಲ್ಲ. ವಚನ ಸಾಹಿತ್ಯದ ಬಗ್ಗೆ ಹೇಳುವಾಗ  ಎಲ್ಲೂ ಬಸವಣ್ಣ, ಅಂಬಿಗರ ಚೌಡಯ್ಯ, ಜೇಡರ ದಾಸಿಮಯ್ಯ, ಮಡಿವಾಳ ಮಾಚಯ್ಯ ಇವರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. 12 ನೇ ಶತಮಾನದಲ್ಲಿ ಅಲ್ಲಮಪ್ರಭು ಅನುಭವ ಮಂಟಪ ಸ್ಥಾಪಿಸಿದರು ಎಂದು ಮಾತ್ರ ಹೇಳಲಾಗಿದೆ. ದಾಸ ಸಾಹಿತ್ಯದ ಬಗ್ಗೆ ಹೇಳುವಾಗ ಕನಕದಾಸ, ಪುರಂದರದಾಸರ ಉಲ್ಲೇಖವಿಲ್ಲ.

  ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಹೀಗೆ ಸ್ವಾತಂತ್ರ್ಯಪೂರ್ವ ಭಾರತದ ನಕ್ಷೆಯನ್ನು ಎರಡೂ ಪಠ್ಯಗಳಲ್ಲಿ ಚಿತ್ರಿಸಿ ಮಕ್ಕಳಲ್ಲಿ ತಪ್ಪು ಅಭಿಪ್ರಾಯ ಬರುವಂತೆ ಚಿತ್ರಿಸಲಾಗಿದೆ~ ಎಂದರು. ಸುಮಾರು 15 ಕೋಟಿ ರೂಪಾಯಿ ಹಣವನ್ನು ವೆಚ್ಚ ಮಾಡಿ ಈ ಪುಸ್ತಕಗಳನ್ನು ಮುದ್ರಿಸಲು ಈಗ ಟೆಂಡರ್ ಕರೆಯಲಾಗಿದೆ. ಚಿಕ್ಕ ಮಕ್ಕಳ ತಲೆಯಲ್ಲಿ ಜಾತಿ, ಧರ್ಮದ ವಿಷಬೀಜವನ್ನು ಬಿತ್ತುವ ಕಾರ್ಯ ಇದಾಗಿದೆ~ ಎಂದು ಖಂಡಿಸಿದರು.

`ಶಿಕ್ಷಣ ಕ್ಷೇತ್ರ ಯಾವ ಪಕ್ಷದ ಅಧೀನಕ್ಕೂ ಒಳಪಡಬಾರದು. ಅದೊಂದು ಸ್ವತಂತ್ರ ಸಮಿತಿಯಾಗಬೇಕು. ಈ ರೀತಿ ರಚನೆಯಾದ ಸ್ವತಂತ್ರ ಸಮಿತಿಯಲ್ಲಿ ನಿರ್ದಾಕ್ಷಿಣ್ಯವಾಗಿ, ನಿರ್ಭಯವಾಗಿ, ಯಾವುದೇ ಪಕ್ಷದ ಬೆಂಬಲವಿಲ್ಲದೆ, ಪಕ್ಷಾತೀತ ಮನೋಭಾವವುಳ್ಳವರು ಈ ಸಮಿತಿಯಲ್ಲಿರಬೇಕು~  ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.

`ಸಂವಿಧಾನದಲ್ಲಿ ಧಾರ್ಮಿಕ ಬೋಧನೆಯನ್ನು ನಿಷೇಧಿಸಲಾಗಿದೆ. ಆದರೆ ಪಠ್ಯದಲ್ಲಿ ಕೇವಲ ವೈದಿಕ ಧರ್ಮದ, ಸಂಘ ಪರಿವಾರದ ವಿಚಾರ ಲಹರಿಗಳನ್ನು ತುಂಬಲಾಗಿದೆ. ಇದರ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು~ ಎಂದು ಪ್ರಗತಿಪರ ಸಂಘಟನೆಗಳ ಸದಸ್ಯ ಎ.ಕೆ.ಸುಬ್ಬಯ್ಯ ಹೇಳಿದರು.

`ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ಇದರ ಕುರಿತು ಫೆಬ್ರುವರಿ 14 ರಂದು ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಬಹಿರಂಗ ಸಭೆ ನಡೆಸಲಾಗುವುದು. ಇದರಲ್ಲಿ ಸಾರ್ವಜನಿಕರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು~ ಎಂದು ಸಮಿತಿಯ ಅಧ್ಯಕ್ಷ ಎಂ.ವೆಂಕಟಸ್ವಾಮಿ ಹೇಳಿದರು.

ಗೋಷ್ಠಿಯಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಪ್ರಗತಿಪರ ಸಂಘಟನೆಗಳ ಸದಸ್ಯರುಗಳಾದ ಕೆ.ಎಲ್.ಅಶೋಕ್, ಸರ್ದಾರ್ ಅಹಮದ್ ಖುರೇಷಿ, ಕುಮಾರ್ ಸಮತಳ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT