ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶಿಕ್ಷಣದ ಗುಣಮಟ್ಟ ಮೇಲ್ದರ್ಜೆಗೆ ಏರಬೇಕು'

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಬೆಂಗಳೂರು: `ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಇನ್ನಷ್ಟು ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ರಾಜ್ಯದ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜೆಗೇರಿಸುವ ಕೆಲಸ ಆಗಬೇಕು' ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಸಲಹೆ ನೀಡಿದರು.

ಸಾ- ಮುದ್ರ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಯವನಿಕಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ `ಸಾ-ಮುದ್ರ-ನಿರ್ಮಾಣ್ ಯುವ ಪುರಸ್ಕಾರ' ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ನಾವು ಸ್ಪರ್ಧಾತ್ಮಕ ಜಗತ್ತಿನಲ್ಲಿ ಇದ್ದೇವೆ. ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲದ ಕೌಶಲವನ್ನು ಹೆಚ್ಚಿಸುವ ಕೆಲಸ ಆಗಬೇಕು. ಯುವಜನರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸ್ಪರ್ಧಾತ್ಮಕ ಸಮಾಜವನ್ನು ನಿರ್ಮಾಣ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕು' ಎಂದು ಅವರು ತಿಳಿಸಿದರು.

ಹೈಕೋರ್ಟ್ ನ್ಯಾಯಮೂರ್ತಿ ಶ್ರೀಧರ ರಾವ್ ಅಧ್ಯಕ್ಷತೆ ವಹಿಸಿ, `ಈಗಿನ ಶಿಕ್ಷಣ ಕೌಶಲಕ್ಕೆ ಹೆಚ್ಚು ಒತ್ತು ನೀಡಿ ಹಣ ಸಂಪಾದನೆಯ ಮಾರ್ಗವನ್ನು ಹೇಳಿಕೊಡುತ್ತದೆ. ಆದರೆ, ವಿದ್ಯಾರ್ಥಿಗಳಲ್ಲಿ ಇತರರನ್ನು ಗೌರವಿಸುವ ಮನೋಭಾವ, ತಾಳ್ಮೆ ಕಂಡುಬರುತ್ತಿಲ್ಲ. ಅವಿಭಕ್ತ ಕುಟುಂಬಗಳು ಮರೆಯಾಗಿರುವುದು ಈ ಎಲ್ಲ ಸಮಸ್ಯೆಗಳಿಗೆ ಕಾರಣ' ಎಂದು ಅಭಿಪ್ರಾಯಪಟ್ಟರು. 

ರಾಜ್ಯ ಯುವಜನ ಸೇವಾ ಇಲಾಖೆಯ ನಿರ್ದೇಶಕ ಎಂ.ಕೆ. ಬಲದೇವಕೃಷ್ಣ ಮಾತನಾಡಿ, `ರಾಜ್ಯದಲ್ಲಿ 16ರಿಂದ 30 ವರ್ಷ ಪ್ರಾಯದವರು 1.86 ಕೋಟಿ ಮಂದಿ ಇದ್ದಾರೆ. ಯುವಜನರಿಗೆ ನೆರವಾಗಲು ರಾಜ್ಯದಲ್ಲಿ ಯುವನೀತಿಯನ್ನು ಜಾರಿಗೆ ತರಲಾಗುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ ಯುವಜನರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು' ಎಂದರು.

ಈ ಸಂದರ್ಭ ಯುವ ಸಾಧಕರಾದ ಕುಸುಮಾ ಜೈನ್, ಸಂದೇಶ್ ಬಿ.ಜಿ, ಎ.ಪಿ.ಗಗನ್ ಉಲ್ಲಾಲ್‌ಮಠ್, ಚೈತನ್ಯ ಹೆಗಡೆ, ಪ್ರಿಯಾಂಕಾ ಸಿ. ಪ್ರಕಾಶ್, ಅಕ್ಷತಾ ಶೆಟ್ಟಿ, ಸಂತೋಷ್ ಕುಮಾರ್ ಎನ್, ಅಬ್ರಾರ್ ಅಹಮದ್, ಪ್ರವೀಣ ಕುಮಾರ್ ಅವರಿಗೆ ಯುವ ಪುರಸ್ಕಾರ ಪ್ರದಾನ ಮಾಡಲಾಯಿತು.

ಪುರಸ್ಕಾರವು ಪ್ರಶಸ್ತಿ, ಪ್ರಶಸ್ತಿ ಪತ್ರ ಹಾಗೂ 5,555 ರೂಪಾಯಿ ಒಳಗೊಂಡಿದೆ.

ನಿವೃತ್ತ ನ್ಯಾಯಮೂರ್ತಿ ಕೆ. ಜಗನ್ನಾಥ ಶೆಟ್ಟಿ, ಪತ್ರಕರ್ತ ವಿಶ್ವೇಶ್ವರ ಭಟ್, ಲಲಿತಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು. ಕೃಷ್ಣಸೆಟ್ಟಿ, ಕರ್ನಾಟಕ ಜ್ಞಾನ ಆಯೋಗದ ಕಾರ್ಯದರ್ಶಿ ಡಾ.ಎಂ.ಕೆ. ಶ್ರೀಧರ್, ಅಲ್ ಅಮೀನ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ವೈ. ಅಜೀಜ್ ಅಹಮದ್, ಸಂಗೀತ ವಿದ್ವಾಂಸ ಮೈಸೂರು ಸುಬ್ರಹ್ಮಣ್ಯ, ನಿರ್ಮಾಣ್ ಶೆಲ್ಟರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ. ಲಕ್ಷ್ಮೀನಾರಾಯಣ್, ಪ್ರತಿಷ್ಠಾನದ ಸದಸ್ಯ ಡಾ.ಕೆ.ಇ.ರಾಧಾಕೃಷ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT