ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ರಾಷ್ಟ್ರೀಕರಣವಾಗಲಿ:ಡಾ.ಚಂದ್ರಶೇಖರ ಕಂಬಾರ ಅಭಿಮತ

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಒಂದರಿಂದ ಹತ್ತನೇ ತರಗತಿವರೆಗಿನ ಶಿಕ್ಷಣ ರಾಷ್ಟ್ರೀಕರಣಗೊಳ್ಳಬೇಕು ಹಾಗೂ ಆಯಾ ರಾಜ್ಯದಲ್ಲಿ ಅಲ್ಲಿಯ ಸ್ಥಳೀಯ ಭಾಷೆಯಲ್ಲೇ ಶಿಕ್ಷಣವನ್ನು ನೀಡಬೇಕು~ ಎಂದು ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ಸಾಹಿತ್ಯ ಕ್ಷೇತ್ರದಲ್ಲಿ ಶಿಖರ ಪ್ರಾಯವಾದ ಪ್ರಶಸ್ತಿಗೆ ಭಾಜನರಾದ ಬಳಿಕ ಮೊದಲ ಸಲ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿರುವ ಅವರು, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹುಬ್ಬಳ್ಳಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

`ಸರ್ಕಾರ ನಡೆಸುವವರೇನೂ ಬ್ರಿಟಿಷರಲ್ಲ. ಒಂದುವೇಳೆ ಬ್ರಿಟಿಷರೇ ಆಗಿದ್ದರೆ ನಮ್ಮ ಹೋರಾಟಕ್ಕೆ ಹೆದರಿ ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡಿರುತ್ತಿದ್ದರು. ಆದರೆ, ಅಧಿಕಾರ ನಡೆಸುವವರು ನಮ್ಮವರೇ ಆಗಿದ್ದು, ಅವರು ನಮ್ಮ ಮಾತನ್ನು ಕೇಳುತ್ತಿಲ್ಲ. ಮುಂದೆಯೂ ಕೇಳುವ ವಿಶ್ವಾಸ ಸಹ ನಮಗಿಲ್ಲ. ಹಾಗೆಂದು ನಮ್ಮ ಪ್ರಯತ್ನವನ್ನು ಕೈಬಿಡುವುದಿಲ್ಲ~ ಎಂದು ಅವರು ಹೇಳಿದರು.

`ಖಾಸಗಿ ಶಾಲೆಗಳನ್ನು ನಡೆಸುವ ಬಹುತೇಕ ಮಂದಿ ರಾಜಕಾರಣಿಗಳೇ ಆಗಿರುವುದು ಕನ್ನಡ ಭಾಷಾ ಮಾಧ್ಯಮ ಅನುಷ್ಠಾನದ ಹಾದಿಯಲ್ಲಿ ಇರುವ ತೊಡಕಾಗಿದೆ~ ಎಂದು ತಿಳಿಸಿದರು. `ಕನ್ನಡ ಸಾಫ್ಟ್‌ವೇರ್ ಅಳವಡಿಕೆಗೆ ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ~ ಎಂದು ಡಾ. ಕಂಬಾರ ಒತ್ತಾಯಿಸಿದರು.

`ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮೂರು ವರ್ಷಕ್ಕೆ ಒಂದು ಯುಗ ಎಂಬ ಮಾತಿದೆ. ಈ ಮಾತಿನಂತೆ ಲೆಕ್ಕ ಹಾಕಿದಾಗ ತಮಿಳು ಭಾಷೆಗಿಂತ ಕನ್ನಡ ಐದು ಯುಗದಷ್ಟು ಹಿಂದಿದೆ. ಇಂಗ್ಲಿಷ್‌ನಲ್ಲಿ ಸಿಗುವ ಎಲ್ಲ ಮಾಹಿತಿ ಕನ್ನಡದಲ್ಲಿ ದೊರೆಯಬೇಕು ಎಂಬ ಅಭಿಲಾಷೆ ನಮ್ಮದಾಗಿದೆ. ಆದರೆ, ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ~ ಎಂದು ಅವರು ಮುನಿಸು ತೋರಿದರು.

`ಕನ್ನಡ ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತಹ ಕೆಲಸಕ್ಕೆ ಅಧಿಕಾರಿಗಳೇ ದೊಡ್ಡ ತೊಡರುಗಾಲು ಆಗಿದ್ದಾರೆ. ಸರ್ಕಾರ ಎರಡು ಕೋಟಿ ರೂಪಾಯಿ ಕೊಟ್ಟರೂ ಬಳಸಲು ಆಗಿಲ್ಲ. ಮೊದಲು 1028 ಜನ ತಂತ್ರಜ್ಞರು ಆಸಕ್ತಿ ತೋರಿದ್ದರು. ಈಗ ನಾಲ್ಕೈದು ಜನ ಮಾತ್ರ ಇದ್ದಾರೆ. ತಂತ್ರಾಂಶ ಖರೀದಿಯಲ್ಲಿ ಸರ್ಕಾರವೇ ಗಿರಾಕಿ ಆಗಿರುವುದರಿಂದ ಅದರ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸಿಕೊಳ್ಳದೆ ಬೇರೆ ಮಾರ್ಗವೇ ಇಲ್ಲ~ ಎಂದರು.

`ಕಾಲಹರಣ ಮಾಡಿದಷ್ಟು ದೊಡ್ಡ ಹಾನಿ ಎಂದು ಪೂರ್ಣಚಂದ್ರ ತೇಜಸ್ವಿ ಹೇಳಿದ್ದರು. ಅವರಿದ್ದಾಗ ನಾವು ಸರ್ಕಾರಿ ಕಚೇರಿಗಳಿಗೆ ಅಲೆದರೂ ಏನೂ ಕೆಲಸ ಆಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಮುಂದೆ ಹೋಗುವ ಲಕ್ಷಣವೇ ಕಾಣುತ್ತಿಲ್ಲ~ ಎಂದು ವಿಷಾದಿಸಿದರು.

`ಉದ್ದೇಶಿತ ಜನಪದ ವಿಶ್ವವಿದ್ಯಾಲಯ ದೇಶೀಯತೆಯನ್ನು ಮೈಗೂಡಿಸಿಕೊಂಡು ಬೆಳೆಯಬೇಕು~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾರ್ಯಕ್ರಮದ ನಂತರ ಅವರು ತಮ್ಮ ತವರು ಜಿಲ್ಲೆ ಬೆಳಗಾವಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT