ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ವ್ಯಾಪಾರೀಕರಣ ನಿಯಂತ್ರಿಸಲು ಸಲಹೆ

Last Updated 8 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಶಿಕ್ಷಣದ ವ್ಯಾಪಾರೀಕರಣಕ್ಕೆ ಅವಕಾಶ ಮಾಡಿಕೊಟ್ಟಿರುವ ಖಾಸಗಿ ಕಾಲೇಜುಗಳಿಂದಾಗಿ ಶಿಕ್ಷಣದ ಗುಣಮಟ್ಟ ಕುಸಿದಿದ್ದು ಸರ್ಕಾರ ಈ ಸಂಬಂಧ ಪರಿಣಾಮಕಾರಿ ಕಾನೂನು ಜಾರಿಗೆ ತರಬೇಕಾದ ಅಗತ್ಯ ಇದೆ. ಕೇಂದ್ರ ಸರ್ಕಾರ, ಆರೋಗ್ಯ ಸಚಿವಾಲಯ, ಸಿಬಿಐನಂತಹ ಸರ್ಕಾರಿ ಸಂಸ್ಥೆಗಳು ಇಂತಹ ಅನೈತಿಕ ವ್ಯವಸ್ಥೆಯ ನಿಯಂತ್ರಣಕ್ಕೆ ಮುಂದಾಗಬೇಕು' ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.

`ಅಗತ್ಯ ಮೂಲ ಸೌಲಭ್ಯ ಇಲ್ಲವೆ ಸಿಬ್ಬಂದಿ ಇಲ್ಲದಿದ್ದರೂ ಖಾಸಗಿ ವೈದ್ಯಕೀಯ ಕಾಲೇಜುಗಳು ಹೆಚ್ಚಿನ ಸೀಟುಗಳಿಗಾಗಿ ಸದಾ ಬೇಡಿಕೆ ಇಡುತ್ತವೆ. ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ನೀಡಲು ಇಂತಹ ಕಾಲೇಜುಗಳು ವಿದ್ಯಾರ್ಥಿಗಳಿಂದ ಲಕ್ಷಾಂತರ ಇಲ್ಲವೆ ಕೆಲ ಬಾರಿ ಕೋಟ್ಯಂತರ ರೂಪಾಯಿ ಬೇಡಿಕೆ ಇಡುತ್ತಿರುವ ವರದಿಗಳಿವೆ' ಎಂದು ನ್ಯಾಯಮೂರ್ತಿಗಳಾದ ಕೆ.ಎಸ್. ರಾಧಾಕೃಷ್ಣನ್ ಹಾಗೂ ಎ.ಕೆ. ಸಿಕ್ರಿ ಅವರನ್ನೊಳಗೊಂಡ ಪೀಠ ಕಳವಳ ವ್ಯಕ್ತಪಡಿಸಿದೆ.

`ವೈದ್ಯಕೀಯ ಕಾಲೇಜುಗಳ ನಿಯಂತ್ರಣ ಸಂಸ್ಥೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ), ಎಂಜಿನಿಯರಿಂಗ್ ಕಾಲೇಜುಗಳ ನಿಯಂತ್ರಣ ಸಂಸ್ಥೆಯಾದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಇಲ್ಲವೆ ಕಾಲೇಜುಗಳ, ವಿಶ್ವವಿದ್ಯಾಲಯಗಳ ನಿಯಂತ್ರಣ ಮಾಡುವ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದಂತಹ ಸರ್ಕಾರಿ ಸಂಸ್ಥೆಗಳು ಈ ವಿಷಯದಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ಇತ್ತೀಚಿನ ವರ್ಷಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು ಲಂಚ ಪ್ರಕರಣವೊಂದರಲ್ಲಿ ಎಂಸಿಐ ಅಧ್ಯಕ್ಷರನ್ನು ಸಿಬಿಐ 2010ರಲ್ಲಿ ವಿಚಾರಣೆ ನಡೆಸಬೇಕಾಯಿತು.

ಹೀಗಾಗಿ ಈ ವಿಷಯದಲ್ಲಿ ಸಂಸತ್ ಸಮಗ್ರ ಮಸೂದೆ ಸಿದ್ಧಪಡಿಸಬೇಕು ಎಂಬುದು ನಮ್ಮ ಆಶಯ' ಎಂದು ಪೀಠ ಹೇಳಿದೆ. ಸೀಟುಗಳ ಸಂಖ್ಯೆ ಹೆಚ್ಚಳಕ್ಕೆ ಎಂಸಿಐ ಅನುಮತಿ ನಿರಾಕರಿಸಿರುವುದನ್ನು ಪ್ರಶ್ನಿಸಿ ಬರೇಲಿಯ ತಾಂತ್ರಿಕ ಕಾಲೇಜೊಂದರ ಆಡಳಿತ ಮಂಡಳಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಈ ಆದೇಶ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT