ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷೆಯಲ್ಲೂ ಶಿಕ್ಷಣ ಪ್ರೀತಿ!

Last Updated 15 ಮೇ 2012, 19:30 IST
ಅಕ್ಷರ ಗಾತ್ರ

`ಪತ್ರಿಕೋದ್ಯಮ ನನಗೆ ಮೊದಲಿನಿಂದಲೂ ಆಸಕ್ತಿಯ ಕ್ಷೇತ್ರ. ಆರಂಭದ ದಿನಗಳಲ್ಲಿ ಇಲ್ಲಿ ಲಭ್ಯವಿದ್ದ ಎಲ್ಲಾ ಪುಸ್ತಕಗಳನ್ನು ಓದುತ್ತಿದ್ದೆ. ವ್ಯರ್ಥವಾಗಿ ಕಳೆದುಹೋಗುವ ಸಮಯವನ್ನು ಓದಿನಲ್ಲಿ ತೊಡಗಿಸಿಕೊಳ್ಳಬಹುದಲ್ಲ ಎಂಬ ಯೋಚನೆ ಬಂದಾಗ ಅಧಿಕಾರಿಗಳನ್ನು ವಿಚಾರಿಸಿದೆ. ಅವರೂ ಅಷ್ಟೇ ಆಸಕ್ತಿಯಿಂದ ಸ್ಪಂದಿಸಿದರು. ಈಗ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಅರ್ಥಶಾಸ್ತ್ರ ಮೊದಲ ವರ್ಷದಲ್ಲಿ ಓದುತ್ತಿದ್ದೇನೆ~.

ಮಾತು ಮುಗಿಸಿದ ಶಿವಕುಮಾರ್ ಸಮಾಧಾನದ ನಿಟ್ಟುಸಿರುಬಿಟ್ಟರು. ಅಂದಹಾಗೆ ಶಿವಕುಮಾರ್ ಕಳೆದ ಎಂಟು ವರ್ಷಗಳಿಂದ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಕೈದಿ.

ಜೀವಾವಧಿ ಶಿಕ್ಷೆಗೆ ಒಳಗಾಗಿರುವ 30ರ ಹರೆಯದ ಮಮತಾ ಕತೆಯೂ ಭಿನ್ನವಾಗಿಲ್ಲ. ಮೂರು ವರ್ಷ ಪದವಿ ಮುಗಿಸಿ ಕಳೆದ ವರ್ಷವಷ್ಟೇ ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ ಪಡೆದು ಇದೀಗ ಸಾರ್ವಜನಿಕ ಆಡಳಿತ (ಪಬ್ಲಿಕ್ ಅಡ್ಮಿನಿಸ್ಟ್ರೇಶನ್)ನ ಪ್ರಥಮ ವರ್ಷದ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.

ಕೊಲೆ ಕೇಸಿಗೆ ಸಂಬಂಧಿಸಿ ಬದುಕೆಲ್ಲ  ಜೈಲಿನಲ್ಲೇ ಕಳೆಯಬೇಕಾದ ಎಚ್.ಕೆ. ಹಾಲೇಶ್ ರಾಜ್ಯ ಮುಕ್ತ ವಿವಿಯಲ್ಲಿ ಎಂಬಿಎ ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದಾರೆ. ಇದೇ ಜೈಲಿನಲ್ಲಿ ಬಿ.ಕಾಂ. ಹಾಗೂ ಎಂ.ಕಾಂ., ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದಾರೆ.

`ಪಿಯು ಪರೀಕ್ಷೆಯಷ್ಟೇ ಬರೆದಿದ್ದ ನನಗೆ ಇಲ್ಲಿನ ಅಧಿಕಾರಿಗಳ ಪ್ರೋತ್ಸಾಹದಿಂದ ಈ ಎಲ್ಲಾ ಹಂತಗಳನ್ನು ದಾಟಲು ಸಾಧ್ಯವಾಯಿತು~ ಎನ್ನುತ್ತಾ ಕಣ್ತುಂಬಿಕೊಳ್ಳುತ್ತಾರೆ.

ಎಲ್ಲರಂತೆ ಸಮಾಜದಲ್ಲಿ ಬದುಕುತ್ತಿದ್ದಾಗ ಓದಬೇಕೆಂಬ ಹಂಬಲವಿದ್ದರೂ ಸಾಧ್ಯವಾಗಿರಲಿಲ್ಲ. ಸಂಸಾರ ನಿರ್ವಹಣೆಯೇ ಹೊರೆಯಾಗಿತ್ತು. ಕಾರಾಗೃಹ ಆ ಕನಸು ನನಸಾಗಲು ಸಹಾಯ ಮಾಡಿದೆ. ಮನೆ ಮಂದಿಯನ್ನು ಬಿಟ್ಟು ಒಂಟಿಯಾಗಿ ಬದುಕುತ್ತಿರುವ ನೋವನ್ನು ಮರೆಯಲೂ ಇದು ನೆರವಾಯಿತು ಎನ್ನುವಾಗ ಅವರೆಲ್ಲರ ಗಂಟಲಿನ ಪಸೆಯೂ ಒಣಗಿತ್ತು.

ಬೆಂಗಳೂರು ಮುಕ್ತ ವಿ.ವಿ. ಉಚಿತ ಶಿಕ್ಷಣ ಯೋಜನೆಯಡಿ 2005ರಿಂದ ಕೈದಿಗಳಿಗೂ ಪರೀಕ್ಷೆ ಬರೆಯುವ ಅವಕಾಶ ಲಭಿಸಿತು. ಮೊದಲ ವರ್ಷ ಬರೆದ 163 ವಿದ್ಯಾರ್ಥಿಗಳ ಪೈಕಿ ತೇರ್ಗಡೆಗೊಂಡವರು 20 ಮಂದಿ. ಇವರಲ್ಲಿ ಏಳು ಮಂದಿ `ವಿದ್ಯಾರ್ಥಿಗಳು~ ಉನ್ನತ ಶಿಕ್ಷಣವನ್ನೂ ಮುಗಿಸಿದರು. ಮೊತ್ತಮೊದಲ ಬಾರಿಗೆ ಕಾರಾಗೃಹದಲ್ಲಿ ಸಮಾಜಶಾಸ್ತ್ರ ವಿಭಾಗದಲ್ಲಿ ಉನ್ನತ ಶಿಕ್ಷಣ ಮುಗಿಸಿದಾತ ಅರವಿಂದ. ಆ ಬಳಿಕ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇದೀಗ ಗ್ರಂಥಾಲಯ ವಿಜ್ಞಾನಕ್ಕೆ ಸಂಬಂಧಿಸಿದ (ಬಿಇಎಲ್‌ಐಎಸ್‌ಇ) ಪರೀಕ್ಷೆ ಬರೆಯುತ್ತಿದ್ದಾನೆ. ಅದರೊಂದಿಗೆ ಕಾರಾಗೃಹದ ಆಸ್ಪತ್ರೆಯ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.

2009ರಲ್ಲಿ ಕಾರಾಗೃಹದಲ್ಲೇ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲು ಅನುಮತಿ ಸಿಕ್ಕ ಬಳಿಕ ಎಲ್ಲಾ ಪರೀಕ್ಷೆಗಳು ಜೈಲಿನ ಆವರಣದಲ್ಲೇ ನಡೆಯುತ್ತಿವೆ. ಸಂಪರ್ಕ ತರಗತಿಗಳು ನಡೆಯುವಾಗ ಸಮೀಪದ ಅಧ್ಯಯನ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಆರಕ್ಷಕ ಬೆಂಗಾವಲು ಪಡೆಯೊಂದಿಗೆ ಕರೆದೊಯ್ಯಲಾಗುತ್ತದೆ. ವಿಜಯನಗರ, ಮರಿಯಪ್ಪನಪಾಳ್ಯ, ಕೆಂಗೇರಿ ಹಾಗೂ ಚಾಮರಾಜಪೇಟೆ ಸರ್ಕಾರಿ ಕಾಲೇಜುಗಳಲ್ಲಿ ಈ ತರಗತಿಗಳು ನಡೆಯುತ್ತವೆ.

ಪ್ರವೇಶಾರ್ಥಿ ಹಾಗೂ ಪರೀಕ್ಷಾ ಶುಲ್ಕದ ವೆಚ್ಚಕ್ಕಾಗಿ ಕಾರಾಗೃಹ ಇಲಾಖೆ ಪ್ರತಿ ವರ್ಷ 1,50,000 ರೂಪಾಯಿ ನೀಡುತ್ತಿದೆ. ಸೋಮಶೇಖರಯ್ಯ ಉನ್ನತ ಶಿಕ್ಷಣ ವಿಭಾಗದ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಂಧಿ ವಿದ್ಯಾರ್ಥಿಗಳ ಓದಿಗೆ ನೆರವಾಗಲೆಂಬ ಕಾರಣಕ್ಕೆ ಅತಿಥಿ ಉಪನ್ಯಾಸಕರನ್ನು ಕರೆಯಿಸಿ ಪಾಠ ಹೇಳಿಸಿಕೊಳ್ಳುವುದುಂಟು ಎನ್ನುತ್ತಾರೆ ಗ್ರಂಥಾಲಯ ಸಹಾಯಕ ಸಿದ್ದಪ್ಪ. 
 ಕಳೆದ ವರ್ಷ ಒಟ್ಟು 35 ಮಂದಿ ಪದವಿ ಗಳಿಸಿದ್ದು ಅದರಲ್ಲಿ ಎಂಟು ಮಂದಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅದರಲ್ಲೂ ಆರು ಮಂದಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದದ್ದು ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು. ಈ ಬಾರಿ 33 ಮಂದಿ ಪರೀಕ್ಷೆ ಬರೆದಿದ್ದು 10 ಮಂದಿ ಸ್ನಾತಕೋತ್ತರ ಪದವಿಗೆ ಕಾದಿದ್ದಾರೆ.

ಕಾರಾಗೃಹದ ಎಡಿಜಿಪಿ ಗಗನ್‌ದೀಪ್, ಡಿಐಜಿ ರವಿ ಬಂಧಿ ವಿದ್ಯಾರ್ಥಿಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ. ಗ್ರಂಥಾಲಯದಲ್ಲೂ ಈ ವಿದ್ಯಾರ್ಥಿಗಳ ಓದಿಗೆ ಪ್ರಯೋಜನವಾಗುವ ಪುಸ್ತಕಗಳನ್ನು ತರಿಸಲಾಗಿದೆ. ಅವರ ಓದಿಗೆ ಅನುಕೂಲವಾಗುವಂತಹ ವಾತಾವರಣ ಸೃಷ್ಟಿಸಲಾಗಿದೆ ಎನ್ನುತ್ತಾರೆ ಜೈಲಿನ ಅಧಿಕಾರಿಗಳು.

ಅಕ್ಷರ ಜ್ಞಾನ ಇಲ್ಲದವರಿಗಾಗಿ ನಡೆಸುವ ಶಾಲೆ `ಸರಸ್ವತಿ ಮಂದಿರ~ದಲ್ಲಿ ಸುಮಾರು 150 ಬಂಧಿ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕ ಕೈದಿಗಳು ಅವರಿಗೆ ಪಾಠ ಹೇಳುತ್ತಾರೆ. ಹೀಗೆ ಶಿಕ್ಷಿತರಾದ ಕೈದಿಗಳು ಜೈಲಿನ ಕೆಲ ವಿಭಾಗಗಳಲ್ಲಿ ಕೆಲಸ ಪಡೆಯುತ್ತಾರೆ. ಅವರಿಗೆ ದಿನಕ್ಕೆ ರೂ.40 ಸಂಬಳ.

ಅಲ್ಲೇ ಇರುವ ಹಾಪ್‌ಕಾಮ್ಸ ಅಥವಾ ಬೇಕರಿ ತಿಂಡಿ ಕೊಳ್ಳಲು ಅವರಿಗೆ ತಿಂಗಳಿಗೆ 300 ರೂಪಾಯಿ ನೀಡಲಾಗುತ್ತದೆ. ಉಳಿದ ಹಣ ಅವರ ಖಾತೆಗೆ ಜಮೆಯಾಗುತ್ತದೆ. ಅನಿವಾರ್ಯವಾದಾಗ ಕೈದಿಯ ಕುಟುಂಬಸ್ಥರು ಆ ಹಣವನ್ನುಬಳಸಿಕೊಳ್ಳಬಹುದು.

ಸದಾ ಚಟುವಟಿಕೆ...

ಕೈದಿ ಕಮ್ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದೇವೆ. ಪತ್ರಿಕೋದ್ಯಮ ಹಾಗೂ ರಾಜ್ಯಶಾಸ್ತ್ರದ ಸ್ನಾತಕೋತ್ತರ ಪದವಿಗೇ ಹೆಚ್ಚಿನ ಬೇಡಿಕೆ. ಪರೀಕ್ಷಾ ಶುಲ್ಕವನ್ನು ನಾವೇ ಭರಿಸುತ್ತಿದ್ದು ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಅಲ್ಪಾವಧಿ ತರಬೇತಿಗಳಿಗೂ ಹೆಚ್ಚು ಒತ್ತು ನೀಡುತ್ತಿದ್ದು ಟೈಲರಿಂಗ್, ಊದುಬತ್ತಿ ತಯಾರಿಕೆ, ಬ್ಯಾಗ್ ತಯಾರಿಕೆಯಲ್ಲೂ ಮಂದಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೈದಿಗಳನ್ನು ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡುವುದೇ ನಮ್ಮ ಮುಖ್ಯ ಗುರಿ.

-ಕೃಷ್ಣಕುಮಾರ್, ಕಾರಾಗೃಹ ಅಧೀಕ್ಷಕರು


 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT