ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷೆಯಾದರೂ ಕರ್ತವ್ಯ ಮುಂದುವರಿಕೆ!

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಬೆಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದರೂ, ಕಾನೂನು ಮಾಪನಶಾಸ್ತ್ರ ಇಲಾಖೆ ಉಸ್ತುವಾರಿ ನಿಯಂತ್ರಕ ಸಿ.ಎಂ. ಮಲ್ಲಿಕಾರ್ಜುನ ಅವರನ್ನು ಸರ್ಕಾರ ಕರ್ತವ್ಯದಿಂದ ಅಮಾನತು ಮಾಡಿಲ್ಲ! ಕರ್ನಾಟಕ ನಾಗರಿಕ ಸೇವೆಗಳ ನಿಯಮಗಳಿಗೆ ವಿರುದ್ಧವಾಗಿ  ಕರ್ತವ್ಯದಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿದೆ.

ಮಲ್ಲಿಕಾರ್ಜುನ ಅವರನ್ನು ಕರ್ತವ್ಯದಿಂದ ಅಮಾನತು ಮಾಡುವಂತೆ ಕೋರಿ ಬೆಂಗಳೂರಿನ ಆರ್.ಎಸ್. ಸುದರ್ಶನ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿರುವ ಹೇಳಿಕೆ ಇದು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಸರ್ಕಾರಕ್ಕೆ ನೋಟಿಸ್ ಜಾರಿಗೆ ಗುರುವಾರ ಆದೇಶ ನೀಡಿದೆ.

`ಅರ್ಜಿಯಲ್ಲಿ ಹೇಳಿರುವುದು ನಿಜವಾದರೆ, ಈ ಅಧಿಕಾರಿಗೆ ಒಂದು ದಿನ ಕೂಡ ಕರ್ತವ್ಯದಲ್ಲಿ ಮುಂದುವರಿಯುವ ಅಧಿಕಾರ ಇಲ್ಲ' ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿತು. `ಮಲ್ಲಿಕಾರ್ಜುನ ಅವರು 2005ರಲ್ಲಿ ಇಲಾಖೆಯ ಉಪ ನಿಯಂತ್ರಕರಾಗಿ ಕರ್ತವ್ಯದಲ್ಲಿದ್ದರು. ಆ ಸಂದರ್ಭದಲ್ಲಿ, ಮಲ್ಲಿಕಾರ್ಜುನ ಅವರು 50 ಸಾವಿರ ರೂಪಾಯಿ ಲಂಚ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಲೋಕಾಯುಕ್ತದಲ್ಲಿ ದೂರು ದಾಖಲಾಯಿತು. ಅದರ ಅನ್ವಯ ತನಿಖೆ ನಡೆಯಿತು. ದೋಷಾರೋಪ ಪಟ್ಟಿ ದಾಖಲು ಮಾಡಲಾಯಿತು. ಆರೋಪಿ ಮಲ್ಲಿಕಾರ್ಜುನ ಅವರಿಗೆ ನ್ಯಾಯಾಲಯ 2012ರ ಜೂನ್ 30ರಂದು ಶಿಕ್ಷೆ ವಿಧಿಸಿದೆ' ಎಂದು ಅರ್ಜಿದಾರರು ಹೇಳಿದ್ದಾರೆ.

ಅರ್ಜಿ ಪ್ರಶ್ನಿಸಿ ಮಲ್ಲಿಕಾರ್ಜುನ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮಲ್ಲಿಕಾರ್ಜುನ ಅವರಿಗೆ ಶಿಕ್ಷೆ ವಿಧಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಕ್ಕೆ ತಡೆ ನೀಡಿಲ್ಲ. ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT