ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ ಕೆರೆಗೆ ಬಂದ ಅತಿಥಿಗಳು!

Last Updated 1 ಫೆಬ್ರುವರಿ 2011, 16:35 IST
ಅಕ್ಷರ ಗಾತ್ರ


ಶಿಡ್ಲಘಟ್ಟ: ಚಳಿಯ ಜೊತೆಜೊತೆಗೆ ಬಿಸಿಲೇರುತ್ತಿರುವ ಈ ಮಾಸದಲ್ಲಿ ದೂರದೂರದ ಊರುಗಳಿಂದ ಅತಿಥಿಗಳು ಶಿಡ್ಲಘಟ್ಟಕ್ಕೆ ಬರುತ್ತಿದ್ದಾರೆ. ಶಿಡ್ಲಘಟ್ಟದ ಹೊರವಲಯದ ಅಮ್ಮನಕೆರೆಯಲ್ಲಿ ನಿಧಾನವಾಗಿ ನೀರು ಬತ್ತುತ್ತಿರುವ ಹೊತ್ತಿಗೆ ಬರುತ್ತಿರುವ ಅತಿಥಿಗಳು ಅಪರೂಪದ ಪಕ್ಷಿಗಳು ಪುಟ್ಟ ನೀರಿನ ಹೊಂಡದಲ್ಲೇ ಹೆಚ್ಚು ಕಾಲ ಕಳೆಯಲು ಬಯಸುತ್ತಿವೆ.ಕೆಲ ದಿನಗಳ ಮಟ್ಟಿಗೆ ಬೇರೊಂದು ಸ್ಥಳದಲ್ಲಿ ವಾಸವಿರುವ ಮತ್ತು ಆಹಾರ ಹುಡುಕಿಕೊಳ್ಳುವ ಉದ್ದೇಶದಿಂದ ಇಲ್ಲಿ ಬಂದಿರುವ ಹಕ್ಕಿಗಳ ಹೆಸರುಗಳು ಕೂಡ ವಿಶಿಷ್ಟವಾದದ್ದು.

‘ವೂಲಿ ನೆಕ್ಡ್ ಸ್ಟಾರ್ಕ್’, ‘ಮಾರ್ಷ್ ಸ್ಯಾಂಡ್ ಪೈಪರ್’ ಮತ್ತು ‘ಕಾಮನ್ ಸ್ಯಾಂಡ್ ಪೈಪರ್’ ಎಂಬ ಹೆಸರಿನ ಈ ಪಕ್ಷಿಗಳು ನೀರಿನಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಮುನ್ನಡೆಯವುದನ್ನು ನೋಡುವುದೇ ಚೆಂದ.

‘ವೂಲಿ ನೆಕ್ಡ್ ಸ್ಟಾರ್ಕ್’ ಅಥವಾ ಬಿಳಿ ಕತ್ತಿನ ಸ್ಟಾರ್ಕ್ ಎಂಬ ಹಕ್ಕಿಯ ಮೈಯೆಲ್ಲಾ ಕಪ್ಪು ಬಣ್ಣವಿದ್ದರೆ, ಕತ್ತು ಮಾತ್ರ ಬೆಳ್ಳನೆ ಬಿಳಿಯಾಗಿರುತ್ತದೆ. ಗೊಡಸಾಗಿರುವ ಇದರ ಕೊಕ್ಕು ಕಪ್ಪು ಬಣ್ಣದಿಂದ ಕೂಡಿದ್ದರೆ, ಕಾಲುಗಳು ಮಾತ್ರ ಕೆಂಪು ಬಣ್ಣ. ಸುಮಾರು 85 ಸೆಂಟಿ ಮೀಟರ್ ಎತ್ತರದ ಈ ಹಕ್ಕಿ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಕಂಡು ಬರುತ್ತದೆ. ಮೀನು, ಕಪ್ಪೆ, ಶಂಖದಹುಳ, ಏಡಿ ಮೊದಲಾದ ಜಲಚರಗಳನ್ನು ತನ್ನ ಇಕ್ಕಳದಂತಹ ಕೊಕ್ಕಿನಲ್ಲಿ ಹಿಡಿದು ತಿನ್ನುತ್ತದೆ.

‘ಮಾರ್ಷ್ ಸ್ಯಾಂಡ್ ಪೈಪರ್’ ಇತರ ಹಕ್ಕಿಗಳಿಗಿಂತ ಕೊಂಚ ಭಿನ್ನ. ತಿಳಿ ಕಂದು ಬಣ್ಣದ ಬಿಳಿ ಹಾಗೂ ಕಪ್ಪು ಮಚ್ಚೆಗಳ ಈ ಹಕ್ಕಿಯ ಎತ್ತರ ಸುಮಾರು 25 ಸೆಂ.ಮೀ. ಚೂಪಾದ ಕಪ್ಪು ಕೊಕ್ಕು ಮತ್ತು ತಿಳಿ ಹಸಿರಿನ ಕಾಲುಗಳನ್ನು ಹೊಂದಿರುವ ಈ ಹಕ್ಕಿ ಚಳಿಗಾಲದಲ್ಲಿ ಮಾತ್ರ ಭಾರತಕ್ಕೆ ಭೇಟಿ ನೀಡುತ್ತದೆ. ಸಣ್ಣ ಜಲಚರಗಳು ಇದರ ಆಹಾರ.

ಈ ಎರಡೂ ಹಕ್ಕಿಗಿಳಿಗಿಂತ ಕೊಂಚ ಭಿನ್ನ ಮತ್ತು ವಿಶಿಷ್ಟತೆಯಿಂದ ಕೂಡಿರುವ ಹಕ್ಕಿ ‘ಕಾಮನ್ ಸ್ಯಾಂಡ್ ಪೈಪರ್’. ಕಂದು ಬಣ್ಣದ ಚೂಪು ಕೊಕ್ಕಿನ ಈ ಹಕ್ಕಿ ಚಳಿಗಾಲದಲ್ಲಿ ಆಗಮಿಸಿ, ದೀರ್ಘ ಕಾಲದವರೆಗೆ ಇರುವಂತದ್ದು. ಇತರ ಹಕ್ಕಿಗಳಿಗಿಂತ ಬೇಗನೇ ಬಂದರೂ ಎಲ್ಲ ಹಕ್ಕಿಗಳು ಹೋದ ನಂತರವಷ್ಟೇ ತನ್ನ ಪ್ರಯಾಣ ಬೆಳೆಸುತ್ತದೆ.

‘ಶಿಡ್ಲಘಟ್ಟ ಹಿಂದುಳಿದ ತಾಲ್ಲೂಕು. ಯಾವುದೇ ರೀತಿಯ ಅಭಿವೃದ್ಧಿಕಾರ್ಯಗಳು ಇಲ್ಲಿ ನಡೆಯುವುದಿಲ್ಲ ಎಂಬ ಮಾತಿದೆ. ಅದರೆ ಆಹಾರ ಹುಡುಕಿಕೊಂಡು ಬರುವ ದೂರದಿಂದ ಬರುವ ಈ ಹಕ್ಕಿಗಳನ್ನು ನೋಡಿದಾಗ ಸಂತೋಷವಾಗುತ್ತದೆ. ಆಗಾಗ್ಗೆ ಕಾಣಸಿಗುವ ಬೆಳ್ಳಕ್ಕಿ, ಕುಂಡೆ ಕುಸ್ಕ, ಕೊಳಬಕ ಮುಂತಾದ ಹಕ್ಕಿಗಳ ಜೊತೆಗೆ ಹೊರಪ್ರದೇಶದ ಹಕ್ಕಿಗಳನ್ನು ನೋಡುವುದೇ ಸೊಗಸು’ ಎನ್ನುತ್ತಾರೆ ಪರಿಸರವಾದಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT