ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಗ್ರಾಮದೇವತೆಗಳ ಜಾತ್ರೆ

Last Updated 1 ಜೂನ್ 2011, 9:20 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವವನ್ನು           ಮಂಗಳವಾರ ವಿಜೃಂಭಣೆಯಿಂದ ನೆರವೇರಿಸಿದರು.

 ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಗ್ರಾಮ ದೇವರುಗಳಾದ ಬಸವಣ್ಣ, ಆಂಜನೇಯ, ಗಾಣಲಿಂಗೇಶ್ವರ, ಸಪ್ಲಮ್ಮ, ಮುನೇಶ್ವರ, ಗಂಗಮ್ಮ, ಪಟಾಲಮ್ಮ, ವೀರಸೊಣ್ಣಮ್ಮ, ಮಾರಮ್ಮ ಮತ್ತು ಕರಗದಮ್ಮ ದೇವರುಗಳಿಗೆ ಪೂಜೆ ಸಲ್ಲಿಸಿದರು. ಗ್ರಾಮದ ಹೆಣ್ಣುಮಕ್ಕಳು ದೀಪದಾರತಿಗಳನ್ನು ಹೊತ್ತುಕೊಂಡು ಪ್ರಮುಖ ಬೀದಿಗಳಲ್ಲಿ ತಮಟೆಯ ವಾದ್ಯದೊಂದಿಗೆ ಮೆರವಣಿಗೆ ನಡೆಸಿ ಒಂದೊಂದು ದೇವರಿಗೂ ಆರತಿ ಬೆಳಗಿ ಪೂಜಿಸಿದರು.

ಸೋಮವಾರದಿಂದ ಆರಂಭಗೊಂಡ ಜಾತ್ರಾ ಮಹೋತ್ಸವವು ಬುಧವಾರ ಕೊನೆಗೊಳ್ಳಲಿದೆ. ಗ್ರಾಮವನ್ನು ಜಾತ್ರೆಗಾಗಿ ಸುಣ್ಣ ಬಣ್ಣಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್ ದೀಪಗಳಿಂದ ಪ್ರತಿಯೊಂದು ಬೀದಿಯನ್ನೂ ಅಲಂಕರಿಸಲಾಗಿತ್ತು. ಅಗ್ನಿಕುಂಡವನ್ನು ಪಟಾಲಮ್ಮ ದೇವಾಲಯದ ಬಳಿ ಮಂಗಳವಾರ ರಾತ್ರಿ ನಡೆಸಲಾಗುತ್ತದೆ.

`ವಿವಿಧ ಗ್ರಾಮಗಳಿಂದ ನೂರಾರು ಭಕ್ತಾದಿಗಳು ಹಾಗೂ ಗ್ರಾಮದ ಬಂಧುಗಳು ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗ್ರಾಮದ ಹೆಣ್ಣುಮಕ್ಕಳು ಮದುವೆಯ ನಂತರ ತವರಿನಿಂದ ಹೊಸದ್ಯಾವರ(ಉಡುಗೊರೆ) ಪಡೆದುಕೊಳ್ಳಲು ಈ ಗ್ರಾಮ ದೇವತೆಗಳ ಜಾತ್ರೆ ಶುಭ ಸಂದರ್ಭ. ಗ್ರಾಮ ಅಭಿವೃದ್ಧಿಯಾಗಲಿ, ಒಳ್ಳೆಯ ಮಳೆ ಬೆಳೆಯಾಗಲಿ ಮತ್ತು ಗ್ರಾಮಸ್ಥರಿಗೆ ಶುಭವಾಗಲಿ ಎಂಬ ಉದ್ದೇಶದಿಂದ ಗ್ರಾಮ ದೇವತೆಗಳ ಪೂಜಾ ಉತ್ಸವ ಹಮ್ಮಿಕೊಳ್ಳಲಾಗುತ್ತದೆ. ನಮ್ಮ ಗ್ರಾಮದಲ್ಲಿ ಮೂವತ್ತು ವರ್ಷಗಳಿಂದ ಈ ಉತ್ಸವ ನಡೆಯದೆ ಈಗ ನಡೆಯುತ್ತಿರುವುದರಿಂದ ಇದಕ್ಕೆ ಎಲ್ಲಿಲ್ಲದ ಉತ್ಸಾಹ ಮತ್ತು ಸಂಭ್ರಮಗಳು ಎಲ್ಲರಲ್ಲೂ ಕಂಡುಬರುತ್ತವೆ~ ಎಂದು ಗ್ರಾಮದ ಹಿರಿಯ ವೆಂಕಟೇಶಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT