ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲ ಕಟ್ಟಡ: ಸಮೀಕ್ಷೆಗೆ ಸೂಚನೆ

Last Updated 5 ಡಿಸೆಂಬರ್ 2012, 6:25 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಶಿಥಿಲಗೊಂಡಿರುವ ಶಾಲಾ ಕಟ್ಟಡಗಳ ಬಗೆಗೆ ಸಮೀಕ್ಷೆ ನಡೆಸಿ 15 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಿಕಾ ರಾಠೋಡ್ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ವೆಂಕಟರಾವ್ ಬಿರಾದಾರ್, ಶಿಥಿಲಗೊಂಡ ಶಾಲಾ ಕಟ್ಟಡಗಳ ಕುರಿತು ಗಮನ ಸೆಳೆದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಆರ್. ಬಸಪ್ಪ ಅವರಿಗೆ ಈ ಆದೇಶ ನೀಡಿದರು.

ಶಿಕ್ಷಣ ಇಲಾಖೆ ಅಧಿಕಾರಿಗಳು ಬೀಳುವ ಹಂತದಲ್ಲಿರುವ ಕಟ್ಟಡಗಳ ಸಮೀಕ್ಷೆ ನಡೆಸಬೇಕು. ಬಳಿಕ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು 15 ದಿನಗಳ ಒಳಗೆ ಅವುಗಳನ್ನು ಕೆಡಹಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

`ಮದಕಟ್ಟಿ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಶಾಲಾ ಕಟ್ಟಡಗಳು ಬೀಳುವ ಹಂತದಲ್ಲಿವೆ. ಮಕ್ಕಳು ಹಳೆಯ ಕಟ್ಟಡಗಳಲ್ಲಿ ಪಾಠ ಪ್ರವಚನ ಕೇಳುವಂತಾಗಿದೆ. ಕಟ್ಟಡ ಕುಸಿದು ಅವಘಡ ಸಂಭವಿಸಿದಲ್ಲಿ ಅದಕ್ಕೆ ಯಾರು ಹೊಣೆ' ಎಂದು ವೆಂಕಟರಾವ್ ಬಿರಾದಾರ್ ಪ್ರಶ್ನಿಸಿದರು. ಸದಸ್ಯರಾದ ಕಾಶಿನಾಥ ಜಾಧವ್, ಕುಶಾಲ್ ಪಾಟೀಲ್ ಗಾದಗಿ ಧ್ವನಿಗೂಡಿಸಿದರು.

ಸರ್ವ ಶಿಕ್ಷಣ ಅಭಿಯಾನದಡಿ ಈಗಾಗಲೇ ಹೆಚ್ಚಿನ ಕೋಣೆಗಳಿರುವ ಶಾಲೆಗಳಿಗೆ ಇನ್ನಷ್ಟು ಕೋಣೆಗಳನ್ನು ನೀಡಲಾಗಿದೆ. ಅವಶ್ಯಕತೆ ಇರುವ ಶಾಲೆಗಳನ್ನು ಕಡೆಗಣಿಸಲಾಗಿದೆ ಎಂದು ಸದಸ್ಯೆ ಸಂಗೀತಾ ಪಾಟೀಲ್ ದೂರಿದರು.

ಕೋಣೆಗಳಿದ್ದರೂ ಹತ್ತರ್ಗಾ ಶಾಲೆಗೆ ಹೆಚ್ಚುವರಿ ಕೋಣೆ ಮಂಜೂರು ಮಾಡಲಾಗಿದೆ. ಒಂದೇ ಕೊಠಡಿ ಇರುವ ಬಟಗೇರಾ ಶಾಲೆಗೆ ಹೊಸ ಕೊಠಡಿ ನೀಡಲಾಗಿಲ್ಲ ಎಂದು ಆಪಾದಿಸಿದರು. ಜಿಲ್ಲೆಗೆ ಈ ವರ್ಷ 84 ಹೆಚ್ಚುವರಿ ಕೋಣೆಗಳು ಮಂಜೂರಾಗಿವೆ. ಅವಶ್ಯಕತೆ ಇಲ್ಲದ ಕಡೆಗೆ ಕೋಣೆ ಮಂಜೂರು ಮಾಡಿರುವ ಬಗ್ಗೆ ಪರಿಶೀಲಿಸುವುದಾಗಿ ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿ ತಿಳಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲತಾ ಶಾಂತಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT