ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲ ನಂದಿ ದೇಗುಲಕ್ಕೆ ಜೀವ ಕಳೆ

Last Updated 6 ಸೆಪ್ಟೆಂಬರ್ 2011, 11:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶಿಥಿಲಾವಸ್ಥೆ ತಲುಪಿರುವ ಪ್ರಾಚೀನ ದೇವಾಲಯಗಳು ಮತ್ತು ಸ್ಮಾರಕಗಳ ನವೀಕರಣ ಮಡುವ  ಜೊತೆಗೆ ಗುಣಮಟ್ಟ ವೃದ್ಧಿಸುವ ನಿಟ್ಟಿನಲ್ಲಿ ಭಾರತೀಯ ಪುರಾತತ್ವ ಇಲಾಖೆ ಮಹತ್ವದ ಕಾರ್ಯಕೈಗೊಂಡಿದೆ. ನಾಡಿನ ವಿವಿಧೆಡೆ ಪ್ರಾಚೀನ ಸ್ಮಾರಕಗಳ ನವೀಕರಣ ಕಾರ್ಯವನ್ನು ಹಂತಹಂತವಾಗಿ ಕೈಗೊಳ್ಳುತ್ತಿದ್ದು, ಜಿಲ್ಲೆಯಲ್ಲಿನ ಐತಿಹಾಸಿಕ ಮಹತ್ವವುಳ್ಳ ಸ್ಮಾರಕಗಳನ್ನು ಮತ್ತು ದೇವಾಲಯಗಳನ್ನು ಈಗ ಅಭಿವೃದ್ಧಿಪಡಿಸುತ್ತಿದೆ.

ಸ್ಮಾರಕಗಳಿಗೆ ಧಕ್ಕೆಯಾಗದಂತೆ ಕಾಮಗಾರಿ ನಡೆಸಬೇಕಿರುವ ಹಿನ್ನೆಲೆಯಲ್ಲಿ ಇಲಾಖೆಯು ಪರಿಣಿತ ಕಲಾವಿದರು ಮತ್ತು ಕಾರ್ಮಿಕರನ್ನು ಆಯ್ಕೆ ಮಾಡಿಕೊಂಡಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಅವರು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಜಿಲ್ಲೆಯ ಪುರಾತನ ಸ್ಮಾರಕಗಳಲ್ಲಿ ಒಂದಾಗಿರುವ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದ ನವೀಕರಣ ಕಾರ್ಯ ಕೆಲ ದಿನಗಳಿಂದ ಪ್ರಗತಿಯಲ್ಲಿದೆ.

ಪ್ರಸಿದ್ಧ ನಂದಿ ಗಿರಿಧಾಮದ ತಪ್ಪಲಿ ನಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದ ಗೋಪುರ, ಗೋಡೆ ಮತ್ತು ಸುತ್ತಲಿನ ಆವರಣದಲ್ಲಿ ಸುಂದರ ಕಲ್ಲುಗಳ ಕಲಾಕೃತಿಗಳಿದ್ದು, ಶಿಥಿಲಾವಸ್ಥೆಗೆ ತಲುಪಿವೆ. ಕ್ರಿ.ಶ. 810ರಲ್ಲಿ ದೊರೆ ಬಾಣ ವಿದ್ಯಾಧರನ ರಾಣಿ ರತ್ನಾವಳಿ ಅವರು ಭೋಗನಂದೀಶ್ವರ ದೇವಾಲಯ ನಿರ್ಮಿಸಿದರು ಎಂದು ತಾಮ್ರದ ಶಾಸನ ಹೇಳುತ್ತದೆ. ದೇವಾಲಯದ ಕಲಾಕೃತಿಗಳಿಗೆ ಮತ್ತು ಆವರಣಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದಂತೆ ಸೂಕ್ಷ್ಮರೀತಿಯಲ್ಲಿ ನವೀಕರಣ ಕಾಮಗಾರಿ ನಡೆಸಲಾಗುತ್ತಿದೆ.

ಈ ದೇವಾಲಯದ ಇಡೀ ಆವರಣ ಭಾರತೀಯ ಪುರಾತತ್ವ ಇಲಾಖೆಗೆ ಸೇರಿದ್ದು, ಸ್ಥಳದ ಮಹತ್ವ ಕಾಯ್ದುಕೊಳ್ಳುವ ಉದ್ದೇಶದಿಂದ ಸುತ್ತಮುತ್ತಲಿನ 100ರಿಂದ 200 ಮೀಟರ್ ವ್ಯಾಪ್ತಿಯಲ್ಲಿ ನೂತನ ಕಟ್ಟಡಗಳನ್ನು ಕಟ್ಟಲು ಮತ್ತು ಗಣಿಗಾರಿಕೆ ಕೈಗೊಳ್ಳಲು ಅವಕಾಶ ನೀಡಲಾಗಿಲ್ಲ. ದೇವಾಲಯಕ್ಕೆ ಹಾನಿ ಮಾಡಿದರೆ, ವಿಕೃತಗೊಳಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಇಲ್ಲಿ ನೀಡಲಾಗಿದೆ.

`ಇಡೀ ದೇವಾಲಯವು ವಿಶಿಷ್ಟ ಬಗೆಯ ಪುರಾತನ ಕಲ್ಲುಗಳಿಂದ ಕೂಡಿದ್ದು, ಆವರಣದ ಸುತ್ತಲೂ ಪುಟ್ಟ ದೇಗುಲಗಳಿವೆ. ಪ್ರತಿ ದೇಗುಲದಲ್ಲೂ ಗರ್ಭಗೃಹ, ನವರಂಗಗಳಿವೆ. ಎಲ್ಲೆಡೆ ಪುಟ್ಟ ಪುಟ್ಟ ವಿಗ್ರಹಗಳನ್ನು ಕೆತ್ತಲಾಗಿದೆ.

ಎತ್ತರದ ಗೋಪುರದಲ್ಲೂ ವಿಗ್ರಹಗಳಿದ್ದು, ಎಲ್ಲವುಗಳನ್ನು ಸೂಕ್ಷ್ಮ ಕಾಮಗಾರಿ ಮೂಲಕ ನವೀಕರಣಗೊಳಿಸುತ್ತಿದ್ದೇವೆ. ಗುತ್ತಿಗೆಯಾಧಾರದಲ್ಲಿ ಕೆಲಸ ಮಾಡುವ ನಾವು ಇದನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ~ ಎಂದು ಕಾರ್ಮಿಕ ವೆಂಕಟಾಚಲಂ `ಪ್ರಜಾವಾಣಿ~ ಗೆ ತಿಳಿಸಿದರು.

ವೆಂಕಟಾಚಲಂ ಜೊತೆಗೆ 8 ರಿಂದ 10 ಕಲಾವಿದರು ಮತ್ತು ಕಾರ್ಮಿಕರು ಇದೇ ರೀತಿಯ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದು, ನಾಡಿನ ಐತಿಹಾಸಿಕ ಸ್ಥಳಗಳಾದ ಹಂಪಿ, ಶ್ರವಣಬೆಳಗೊಳ, ಮೈಸೂರು ಅರಮನೆ, ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್ ಅರಮನೆ ಮುಂತಾದ ಕಡೆ ಸೂಕ್ಷ್ಮ ಕಾಮಗಾರಿ ಒಳಗೊಂಡ ನವೀಕರಣವನ್ನು ಪೂರ್ಣಗೊಳಿಸಿದ್ದಾರೆ. ರವಿ, ಚಂದ್ರು, ವಿಜಯಕುಮಾರ್, ಮಂಜು, ಮಂಜುನಾಥ್, ಇಂದ್ರೇಶ್, ಬಸವ ಸೇರಿದಂತೆ ಬಹುತೇಕ ಕಾರ್ಮಿಕರು ಮೈಸೂರು ಜಿಲ್ಲೆಯವರು.

`ಸ್ಮಾರಕವೊಂದರ ನವೀಕರಣ ಕಾರ್ಯದ ಅವಧಿ ಮೂರು ತಿಂಗಳಿನಿಂದ ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ಆಗಿನ ಸ್ಮಾರಕಗಳ ನಿರ್ಮಾಣಕ್ಕೂ ಮತ್ತು ಈಗಿನ ನವೀಕರಣಕ್ಕೆ ತುಂಬ ವ್ಯತ್ಯಾಸವಿರುವ ಕಾರಣ ಹಲವು ಅಂಶಗಳನ್ನು ಮುಖ್ಯಾಗಿರಿಸಿಕೊಂಡ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT