ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಾವಸ್ಥೆ ಜೋಪಡಿಗೆ ವಿದ್ಯುತ್ ಸಂಪರ್ಕ!

Last Updated 19 ಏಪ್ರಿಲ್ 2011, 7:05 IST
ಅಕ್ಷರ ಗಾತ್ರ

ಕುಶಾಲನಗರ: ಸರ್ಕಾರ ವಿವಿಧ ಯೋಜನೆಯಡಿ ಗಿರಿಜನರ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸುತ್ತಿದೆ. ಆದರೆ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳದ ಕಾರಣ ಗಿರಿಜನರ ಅಭಿವೃದ್ಧಿ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಬಳಿಯ ಸೂಳೆಬಾವಿ ಗಿರಿಜನ ಹಾಡಿಯಲ್ಲಿ ನಿದರ್ಶನವೊಂದು ಕಂಡುಬಂದಿದೆ.

ಸೂಳೆಬಾವಿ ಗಿರಿಜನ ಹಾಡಿಯಲ್ಲಿ ಸರಿಯಾಗಿ ಸೂರಿಲ್ಲದ ಹತ್ತು ಹುಲ್ಲಿನ ಜೋಪಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಗಿರಿಜನರಿಗೆ ಹೊಸ ಮನೆ ನಿರ್ಮಾಣಕ್ಕೆ ಮುನ್ನವೇ ಹುಲ್ಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಗಿರಿಜನರ ಆಕ್ಷೇಪಕ್ಕೆ ಕಾರಣವಾಗಿದೆ. ಗಿರಿಜರ ಅರಣ್ಯ ಹಕ್ಕುಗಳ ಮಸೂದೆಯನ್ವಯ ಹಾಡಿಯ ಜೇನುಕುರುಬರ ಕುಟುಂಬಗಳಿಗೆ ರೂ.1.10 ಲಕ್ಷ ವೆಚ್ಚದ ಮನೆ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ. ಅದರೆ ಐಗೂರು ಗ್ರಾ.ಪಂ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಕಾಟಾಚಾರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ ಎಂದು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜೆ.ಪಿ.ರಾಜು ದೂರಿದ್ದಾರೆ.

ಹುಲ್ಲಿನ ಜೋಪಡಿಗಳಿಗೆ ವೈರಿಂಗ್ ಕಾರ್ಯ ಪೂರೈಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಮಳೆ ಬಿದ್ದರೆ ಇಡೀ ಮನೆ ಶಾರ್ಟ್ ಸರ್ಕ್ಯೂಟ್‌ಗೆ ತುತ್ತಾಗಿ ಪ್ರಾಣಹಾನಿಯಾಗುವ ಸಂಭವವಿದೆ. ತಮಗೆ ಸರ್ಕಾರದಿಂದ ಹೊಸ ಮನೆ ನಿರ್ಮಿಸಿದ ನಂತರ ವಿದ್ಯುತ್ ಕೊಡಿ ಎಂದೂ ಕೇಳಿದರೂ ಗ್ರಾ.ಪಂ. ಒತ್ತಾಯದಿಂದ ವಿದ್ಯುತ್ ನೀಡಿದೆ. ಈಗ ವಿದ್ಯುತ್ ಸಂಪರ್ಕ ಪಡೆಯದಿದ್ದಲ್ಲಿ ಇನ್ನೂ 10 -12 ವರ್ಷಗಳ ತನಕ ಈ ಸೌಲಭ್ಯ ದೊರಕಲು ಸಾಧ್ಯವಿಲ್ಲ ಎಂದು ಹೆದರಿಸಿದರು. ಅದಕ್ಕೆ ನಾವು ವಿರೋಧ ವ್ಯಕ್ತಪಡಿಸದೇ ವಿದ್ಯುತ್ ಸಂಪರ್ಕ ಪಡೆದುಕೊಂಡೆವು ಎನ್ನುತ್ತಾರೆ ಹಾಡಿಯ ನಿವಾಸಿ ವಸಂತ್.

ಸರ್ಕಾರದ ವತಿಯಿಂದ ಮನೆ ನಿರ್ಮಿಸಿದ ನಂತರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂಬ ನಿಯಮವಿದ್ದರೂ ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ಮಳೆಗೆ ಸೋರುವ ಜೋಪಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಎಷ್ಟು ಸರಿ? ಎಂದು  ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ (ಕಾರ್ಡ್) ಯ ಕಾರ್ಯದರ್ಶಿ ವಿ.ಎಸ್.ರಾಯ್ ಡೇವಿಡ್ ಪ್ರಶ್ನಿಸಿದ್ದಾರೆ. ಗಿರಿಜನರಿಗೆ ಹೊಸ ಮನೆ ನಿರ್ಮಿಸುವ ಮುನ್ನವೇ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಆಸ್ಥೆ ವಹಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT