ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಾವಸ್ಥೆಯಲ್ಲಿ ಪೊಲೀಸ್ ವಸತಿ ಗೃಹಗಳು

Last Updated 25 ಜುಲೈ 2013, 6:52 IST
ಅಕ್ಷರ ಗಾತ್ರ

ಕಮಲನಗರ: ಹಗಲಿರುಳು ಎನ್ನದೇ ಅಪರಾಧಿಗಳ ಬೆನ್ನಟ್ಟಿ ಕಾನೂನು ಸುವ್ಯಸ್ಥೆಗಾಗಿ ದಿನವಿಡೀ ಕಾದಾಡಿ ತಮ್ಮ ವ್ಯಾಪ್ತಿ ಪ್ರದೇಶದ ಶಾಂತಿಗಾಗಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ವಸತಿ ಭದ್ರತೆ ಇಲ್ಲಂದಂತಾಗಿದೆ.

ಇಲ್ಲಿನ ಪೊಲೀಸ್ ವಸತಿ ಗೃಹಗಳನ್ನೊಮ್ಮೆ ನೋಡಿದ ಯಾರಿಗಾದರೂ ಈ ವಿಷಯ ಮನದಟ್ಟಾಗುತ್ತದೆ.
ಅನೇಕ ವರ್ಷಗಳ ಹಿಂದೆ ನಿರ್ಮಿಸಿದ ಪೊಲೀಸ್ ವಸತಿ ಗೃಹಗಳು ಈಗ ಶಿಥಿಲಾವಸ್ಥೆಯಲ್ಲಿದ್ದು, ಇಲ್ಲಿ ಸಂಸಾರ ನಡೆಸುತ್ತಿರುವ ಪೊಲೀಸ್ ಕುಟುಂಬಗಳು ಆತಂಕ ಎದುರಿಸುವಂತಾಗಿದೆ.

ಈಗ ಸುರಿಯುತ್ತಿರುವ ಮಳೆಯಿಂದ ವಸತಿ ಗೃಹಗಳ ಛಾವಣಿಗಳ ಮೇಲೆ ನೀರು ನಿಂತು ಮನೆಯ ಒಳಗಡೆ ಸೋರುವುದು, ಮಳೆ ನೀರು ಮನೆಯೊಳಗೆ ಬಾರದಂತೆ ತಡೆಯಲು ಬಕೆಟ್ ಹಿಡಿಯುವ ಕೆಲಸ. ನೀರಿನಿಂದ ಹಸಿ ಹಿಡಿದ ಗೋಡೆಗಳು, ಮೇಲ್ಛಾವಣಿಯಿಂದ ಪ್ಲಾಸ್ಟರ್ ಬೀಳುವ ಆತಂಕ. ಹೀಗೆ ಹತ್ತು ಹಲವಾರು ಸಮಸ್ಯೆಗಳು ಅಲ್ಲಿ ವಾಸವಿದ್ದ ಪೊಲೀಸ್ ಕುಟುಂಬಗಳ ತಲೆ ನೋವಿಗೆ ಕಾರಣವಾಗಿದೆ.

ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ವಸತಿ ಗೃಹಗಳು ಸೋರುವುದು ಇಲ್ಲಿ ಸಾಮಾನ್ಯವಾಗಿದೆ. ಆದರೆ ಈಗ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಮೇಲ್ಛಾವಣಿಯಿಂದ ಮನೆಯೊಳಗೆ ನೀರು ಸುರಿಯುವುದು ಹೆಚ್ಚಾಗಿದ್ದು, ಇದಕ್ಕಾಗಿ ಮೇಲ್ಛಾವಣಿ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡು ಸಂಸಾರ ನಡೆಸುವ ಅನಿವಾರ್ಯಯ ಪೊಲೀಸರು ಎದುರಿಸುತ್ತಿರುವುದು ಸಮಸ್ಯೆ ಗಾಂಭೀರ‌ತೆಗೆ ಹಿಡಿದ ಕನ್ನಡಿಯಾಗಿದೆ.

ಕಳೆದ ಸೋಮವಾರ ಸುರಿದ ಮಳೆಯಿಂದ ಮೇಲ್ಛಾವಣಿಯಿಂದ ಸುರಿಯುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿತ್ತು. ಮನೆಯಲ್ಲಿ ಒಣಗಿದ ಆರು ಅಡಿಯಷ್ಟೂ ಜಾಗವಿರಲಿಲ್ಲ. ಇಬ್ಬರು ಮಕ್ಕಳನ್ನು ಒಣಗಿದ ಜಾಗದಲ್ಲಿ ಮಲಗಿಸಿ, ಅವರ ಮೇಲೆ ಮಳೆ ನೀರು ತಾಗದಂತೆ ರಕ್ಷಿಸಲು ಕೊಡೆ ಹಿಡಿದು ನಾನು ನನ್ನ ಹೆಂಡತಿ ರಾತ್ರಿ ಇಡೀ ಆತಂಕದಲ್ಲಿ ಕಳೆದೆವೆು ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.

ಈಚೆಗೆ ಮೇಲ್ಛಾವಣಿ ಹಸಿ ಹಿಡಿದು ಪ್ಲಾಸ್ಟರ್ ಉದುರಿ ಬಿದ್ದ ಕಾರಣ ಪೊಲೀಸ್ ಒಬ್ಬರ ಪತ್ನಿಯ ತಲೆಗೆ ಗಾಯವಾಗಿತ್ತು ಎಂದು ತಿಳಿದು ಬಂದಿದೆ.

ಶಿಥಿಲಾವಸ್ಥೆಗೆ ತಲುಪಿರುವ ವಸತಿ ಗೃಹಗಳು ಯಾವಾಗ ಕುಸಿದು ಬೀಳುತ್ತವೆ ಎಂಬ ಆತಂಕದಲ್ಲಿ ಪತ್ನಿ ಮತ್ತು ಮಕ್ಕಳನ್ನು ತವರು ಮನೆಗೆ ಕಳುಹಿಸಿರುವುದಾಗಿ ಪೊಲೀಸರೊಬ್ಬರು ತಿಳಿಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಈ ವಸತಿ ಗೃಹಗಳು ರಿಪೇರಿಯನ್ನೇ ಕಂಡಿಲ್ಲ. ಇಲ್ಲಿ ಸರಿಯಾದ ಕಿಟಕಿ ಮತ್ತು ಬಾಗಿಲುಗಳ ವ್ಯವಸ್ಥೆ ಹಾಳಾಗಿದೆ. ಹೀಗಾಗಿ ಕಳ್ಳರನ್ನು ಕಾಯುವ ಪೊಲೀಸರು ತನ್ನ ಮನೆಯನ್ನೇ ಕಾಯುವ ಅನಿವಾರ್ಯ ಬಂದೊದಗಿದೆ.
ಒಟ್ಟಿನಲ್ಲಿ ಪೊಲೀಸ್ ವಸತಿ ಗೃಹಗಳಲ್ಲಿ ಹುಡುಕಿಕೊಂಡು ಹೋದರೆ ಹತ್ತಾರು ಸಮಸ್ಯೆಗಳು ಕಂಡು ಬರುವುದಂತು ಸತ್ಯ. ಹಗಲಿರುಳು ದುಡಿದು ಜನತೆಯನ್ನು ಕಾಯುತ್ತಿರುವ ಪೊಲೀಸರ ಪಾಡಂತೂ ಯಾರಿಗೂ ಹೇಳತೀರದು.

ಈಗಿರುವ ಶಿಥಿಲಾವಸ್ಥೆ ವಸತಿ ಗೃಹಗಳನ್ನೆಲ್ಲಾ ನೆಲ ಸಮಗೊಳಿಸಿ, ಆ ಪ್ರದೇಶದಲ್ಲಿ ಬೃಹತ್ ವಸತಿ ಸಮುಚ್ಛಯ ನಿರ್ಮಿಸುವ ಅಗತ್ಯವಿದೆ. ವಸತಿ ಗೃಹಗಳು ಸುಧಾರಣೆ ಕಾಣಲು ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ಮಂಜೂರು ಮಾಡಿಸಬೇಕು ಎಂಬುದು ಪೊಲೀಸರ ಜತೆಗೆ ಸಾರ್ವಜನಿಕರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT