ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಾವಸ್ಥೆಯಲ್ಲಿ ಮಿನಿ ವಿಧಾನಸೌಧ

Last Updated 3 ಜುಲೈ 2013, 5:22 IST
ಅಕ್ಷರ ಗಾತ್ರ

ತರೀಕೆರೆ: ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ ಎಂಬಂತೆ, ಅಧಿಕಾರ ಮತ್ತು ರಾಜಕೀಯ ಶಾಹಿಗಳ ಅಜ್ಞಾನದಿಂದ ತಾಲ್ಲೂಕು ಮಿನಿ ವಿಧಾನಸೌಧ ಕಟ್ಟಡ ಸಂಪೂರ್ಣ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದೆ.

ಎಲ್ಲ ಕಚೇರಿಗಳು ಒಂದೆಡೆ ಇದ್ದು ನಾಗರಿಕರಿಗೆ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ಈಗ್ಗೆ 15 ವರ್ಷಗಳ ಹಿಂದಿನ ಸರ್ಕಾರ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಮಿನಿ ವಿಧಾನಸೌಧ ಸ್ಥಾಪಿಸುವ ಪ್ರಯತ್ನ ಯಶಸ್ವಿ ಕಂಡರೂ ಕಳಪೆ ಕಾಮಗಾರಿ, ಸಮರ್ಪಕ ನಿರ್ವಹಣೆ ಇಲ್ಲದೇ ಮಿನಿ ವಿಧಾನಸೌಧ ಕಟ್ಟಡ ಶಿಥಿಲಾವಸ್ಥೆ ತಲುಪಿರುವುದು ಆಡಳಿತಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಮಿನಿ ವಿಧಾನ ಸೌಧದ ಉದ್ದೇಶ ಸಂಪೂರ್ಣವಾಗಿ ಯಶಸ್ಸು ಕಂಡಿಲ್ಲ. ಕಟ್ಟಡದಲ್ಲಿ ಬಹುತೇಕ ಕಂದಾಯ ಇಲಾಖೆ ಕಚೇರಿಗಳಿಗೆ ಮಾತ್ರ ಸ್ಥಳಾವಕಾಶ ದೊರೆತಿದೆ.

ಕಟ್ಟಡ ಎರಡು ಮಹಡಿಗಳನ್ನು ಹೊಂದಿದ್ದು, ಕೆಳಭಾಗದಲ್ಲಿ ತಹಶೀಲ್ದಾರ್ ಕಚೇರಿ, ಖಜಾನೆ ಮತ್ತು ಉಪನೋಂದಣಾಧಿಕಾರಿ ಕಚೇರಿ ಇದ್ದರೆ, ಮೇಲ್ಭಾಗದ ಮೊದಲ ಹಂತದಲ್ಲಿ ಉಪವಿಭಾಗಾಧಿಕಾರಿ ಕಚೇರಿ, ಸರ್ವೆ ಇಲಾಖೆ, ಆಹಾರ ಶಾಖೆ, ಕಾರ್ಮಿಕ ಇಲಾಖೆ, ಮತ್ತು ಅಳತೆ ಮತ್ತು ತೂಕ ಇಲಾಖೆ ಕಾರ್ಯನಿರ್ವಹಿಸುತ್ತಿದೆ.

ಕಟ್ಟಡ ನಿರ್ಮಿಸಿ ಕೆಲವೇ ವರ್ಷಗಳಲ್ಲಿ ಕಟ್ಟಡದ ಮೇಲ್ಛಾವಣಿ ಹಾಳಾಗಿ, ಅತಿ ಚಿಕ್ಕ ಮಳೆ ಬಂದರೂ ಎಲ್ಲ ಕೊಠಡಿಗಳಲ್ಲೂ ನೀರು ನಿಲ್ಲುವ ಪರಿಸ್ಥಿತಿ ಇದೆ. ನಿತ್ಯ ನೀರನ್ನು ಹೊರ ಹಾಕಿ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ನೌಕರರದ್ದು. ಕಟ್ಟಡದ ಕಾರಿಡಾರ್‌ನಲ್ಲಿ ಮಳೆಯ ನೀರು ಸಂಗ್ರಹವಾಗಿ ಮೆಟ್ಟಿಲುಗಳ ಮೇಲೆ ಹರಿಯುವ ಕಾರಣ ನಾಗರಿಕರು ಕಚೇರಿಗಳಿಗೆ ಮೆಟ್ಟಿಲು ಹತ್ತಿ ಕಾರಿಡಾರ್‌ನಲ್ಲಿ ಓಡಾಡುವುದೇ ದುಸ್ತರವಾಗಿದೆ. ಕಚೇರಿಗೆ ಬರುವ ನಾಗರಿಕರು ಕುಳಿತುಕೊಳ್ಳಲು ಕಲ್ಲುಬೆಂಚಿನ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯದ, ಕ್ಯಾಂಟೀನ್ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ ಇಲ್ಲ.

110 ವರ್ಷಗಳ ಇತಿಹಾಸ ಹೊಂದಿ ಈಗಲೂ ಗಟ್ಟಿತನ ಹೊಂದಿರುವ ಹಳೇ ತಾಲ್ಲೂಕು ಕಚೇರಿ ಕಟ್ಟಡದ ಮುಂದೆ ಈ ನೂತನ  ಮಿನಿ ವಿಧಾನ ಸೌಧ ಕಟ್ಟಡ ಹೇಸಿಗೆ ಬರುವಂತಿದೆ ಎಂಬುದು ನಾಗರಿಕರ ಅನಿಸಿಕೆ.

ಇನ್ನಾದರೂ ಕಟ್ಟಡದ ಸಮರ್ಪಕ ನಿರ್ವಹಣೆ ಮಾಡುವ ಮೂಲಕ ಕಟ್ಟಡವನ್ನು ಉಳಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿ, ಕಚೇರಿಗೆ ಬರುವ ನಾಗರಿಕರಿಗೆ ಮೂಲ ಸೌಲಭ್ಯ ಒದಗಿಸಲಿ ಎಂಬುದು ನಾಗರಿಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT