ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಬಿರದಿನ್ನಿ: ಮೂಲ ಸೌಕರ್ಯದಿಂದ ದೂರ

Last Updated 8 ಜೂನ್ 2011, 6:10 IST
ಅಕ್ಷರ ಗಾತ್ರ

ಕಂಪ್ಲಿ: ತುಂಗಭದ್ರಾ ನದಿ ಪಕ್ಕದಲ್ಲಿಯೇ ಹರಿಯುತ್ತಿದ್ದರೂ `ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ~ ಎನ್ನುವ ಸ್ಥಿತಿ ಪಟ್ಟಣದ 20ನೇ ವಾರ್ಡ್ ಶಿಬಿರದಿನ್ನಿ ಸಾರ್ವಜನಿಕರದ್ದು.

ಶಿಬಿರದಿನ್ನಿ ಬಲಭಾಗದ ನೂತನ ಲೇಔಟ್‌ನಲ್ಲಿ 200ಕ್ಕೂ ಹೆಚ್ಚು ಕೃಷಿ ಕೂಲಿ ಕಾರ್ಮಿಕರು ಗುಡಿಸಲುಗಳನ್ನು ಹಾಕಿಕೊಂಡು ವಾಸಿಸುತ್ತಿದ್ದಾರೆ. ಒಂಭತ್ತು ತಿಂಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಇಲ್ಲಿ ಸಾಮಾನ್ಯವಾಗಿದೆ.

ಇಡೀ ಕಾಲೊನಿಗೆ ಒಂದು ಭಾಗದಲ್ಲಿ ಎರಡು ಕೊಳಾಯಿಗಳಿದ್ದು, ದಾರದ ಎಳೆಯಂತೆ ನೀರು ಬೀಳುವುದರಿಂದ ಒಂದು ಕೊಡ ಭರ್ತಿಯಾಗಲು ಬರೋಬ್ಬರಿ 15 ನಿಮಿಷ ಬೇಕಾಗುತ್ತದೆ. ನೀರಿಗಾಗಿ ಕೆಲವರು ಕೂಲಿ ಕೆಲಸ ಬಿಟ್ಟು ನಳಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಜಗಳ ಆಡಿ ಕೊಡಗಳಿಗೆ ನೀರು ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲಿಯ ನಿತ್ಯದ ಗೋಳು.

ಬೆಳಿಗ್ಗೆ 6ಕ್ಕೆ ನೀರು ಬಿಟ್ಟಲ್ಲಿ ನೀರು ಹಿಡಿದು ಹಾಕಿ ಕೂಲಿ ಕೆಲಸಕ್ಕೆ ತೆರಳಬಹುದು. ಆದರೆ 10 ಗಂಟೆಗೆ ಬಿಡಲಾಗುತ್ತದೆ. ಈ ಬಗ್ಗೆ ಪುರಸಭೆ ಗಮನಕ್ಕೆ ತಂದಿದ್ದರೂ ಸಮಸ್ಯೆ ಸರಿಪಡಿಸುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರುತ್ತಾರೆ. ನಳದಲ್ಲಿ ದಾರದಂತೆ ನೀರು ಬೀಳುವುದರಿಂದ ಕಿತ್ತಾಟ, ಮಾಂಗಲ್ಯ ಹರಿದುಕೊಂಡಿರುವುದು ಹಲವಾರು ಬಾರಿ ನಡೆದಿದೆ ಎಂದು ಬಾರಿಕರ ಹುಲಿಗೆಮ್ಮ ಹೇಳುತ್ತಾರೆ.

ಸೈಕಲ್ ಇದ್ದವರು ಕೊಡಗಳನ್ನು ಹಾಕಿಕೊಂಡು ದೂರದಿಂದ ನೀರು ತರುತ್ತಾರೆ. ವಯಸ್ಸಾದ ನಾವು ಎಲ್ಲಿಂದ ತರೋದು ಎಂದು ವಡ್ರು ದುರುಗಮ್ಮ ಪ್ರಶ್ನಿಸುತ್ತಾರೆ. ಕಾಲೊನಿಯಲ್ಲಿ ಏಕೈಕ ಕೈಪಂಪ್ ಇದೆ. ಹರಸಾಹಸ ಮಾಡಿ ಹೊಡೆದರೆ ನಾಲ್ಕು ಕೊಡ ನೀರು ದೊರೆಯುತ್ತವೆ. ಕನಿಷ್ಠ ಕೈಪಂಪ್ ಅನ್ನು ಆದರೂ ದುರಸ್ತಿ ಮಾಡಬಹುದಲ್ಲ ಎಂದು ಪುರಸಭೆಯವರನ್ನು ಕೇಳಿದರೆ ನಕಾರಾತ್ಮಕ ಉತ್ತರ ದೊರೆತಿದೆ ಎಂದು ವಾರ್ಡಿನ ನಾಗರಿಕರು ತಿಳಿಸುತ್ತಾರೆ.

ಶಿಬಿರದಿನ್ನಿ ಬಲಭಾಗದಲ್ಲಿ ವಾಸಿಸುವ ಕೃಷಿ ಕೂಲಿ ಕಾರ್ಮಿಕರು ಕುಡಿಯುವ ನೀರಿಗಾಗಿ ನಿತ್ಯ ಹಪಹಪಿಸುತ್ತಿದ್ದರೆ, ಎಡಭಾಗದಲ್ಲಿ ಮಾತ್ರ ನೀರಿನ ಕೊರತೆಯೇ ಇಲ್ಲ. ಈಗೇಕೆ ತಾರತಮ್ಯ ಮಾಡುತ್ತಿದ್ದಾರೆ ಪುರಸಭೆಯವರು ಎಂದು ಬಡ ಕೂಲಿ ಕಾರ್ಮಿಕರು ಪ್ರಶ್ನಿಸುತ್ತಾರೆ.

`ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ~ ಈ ಧೋರಣೆಯನ್ನು ಸರಿಪಡಿಸದಿದ್ದಲ್ಲಿ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ ವಾರ್ಡಿನ ಮಹಿಳೆಯರು. ವಾರ್ಡಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಮಹಿಳಾ ಶೌಚಾಲಯ ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿದ್ದು, ವಾರ್ಡಿನ ಮಹಿಳೆಯರು ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯಾಸ್ತದ ನಂತರ ಬಯಲನ್ನೇ ಆಶ್ರಯಿಸಬೇಕಾದ ದುಃಸ್ಥಿತಿ.

ಕುಡಿಯುವ ನೀರಿನ ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ಶಿಬಿರದಿನ್ನಿ ಎಡಭಾಗದಲ್ಲಿ ವಾಸಿಸುವ ವಾರ್ಡಿನ ಸದಸ್ಯೆಯನ್ನು ಜನತೆ ಹೋಗಿ ಕೇಳಿದರೆ ನೀವ್ಯಾರು ನಮ್ಮ ಮನೆ ಮುಂದೆ ಬರೋಕೆ. ಈಗಾಗಲೇ ನಿಮಗೆ ಎರಡು ಲಕ್ಷ ಬೆಲೆ ಬಾಳುವ ಸೈಟನ್ನು ಕೊಟ್ಟಿದ್ದೀವಿ. ಇನ್ನೇನು ನಿಮಗೆ ಕೊಡಬೇಕು ಎಂದು ಗದರುತ್ತಾರೆ.

ಅವರು ಮನೆಗೆ ಹೋಗಿ ಅವಮಾನ ಮತ್ತು ಫಜೀತಿ ಅನುಭವಿಸುವುದಕ್ಕಿಂತ ನಮಗೆ ಕಷ್ಟನೋ ಸುಖನೋ ಈಗ ಬರುವ ಹನಿ ಹನಿ ನೀರನ್ನು ಕುಡಿದು ಬದುಕುತ್ತೀವಿ ಎಂದು ಮನದಾಳದ ಮಾತುಗಳನ್ನು ಹೇಳುತ್ತಾರೆ ವಾರ್ಡಿನ ಮಹಿಳೆಯರು. ಇಡೀ ಲೇಔಟ್‌ನಲ್ಲಿ ಎತ್ತ ನೋಡಿದರೂ ಗುಡಿಸಲುಗಳು. ಇವರಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಪುರಸಭೆ ಆಡಳಿತ ಮಂಡಳಿ ಚಿಂತನೆ ಮಾಡುವುದರ ಜೊತೆಗೆ ಕನಿಷ್ಠ ಮೂಲಸೌಕರ್ಯಗಳಿಗಾದರೂ ಪ್ರಥಮ ಆದ್ಯತೆ ನೀಡಲಿ ಎನ್ನುವುದು ವಾರ್ಡಿನ ಜನತೆ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT