ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಗುಟ್ಕಾ ಮಾರಾಟ ಜೋರು!

Last Updated 20 ಸೆಪ್ಟೆಂಬರ್ 2013, 8:17 IST
ಅಕ್ಷರ ಗಾತ್ರ

ಶಿರಸಿ: ಎರಡೂವರೆ ತಿಂಗಳ ಹಿಂದಷ್ಟೇ ರಾಜ್ಯ ದಾದ್ಯಂತ ನಿಷೇಧಿಸಿರುವ ಗುಟ್ಕಾ ಮತ್ತೆ ಪೇಟೆಯಲ್ಲಿ ಇಣುಕಿದೆ.
ಆರೋಗ್ಯಕ್ಕೆ ಹಾನಿಕಾರಕವಾಗಿರುವ ಗುಟ್ಕಾ ನಿಷೇಧಿಸಿ ರಾಜ್ಯ ಸರ್ಕಾರದ ಆದೇಶ ಹೊರಬಿದ್ದ ಒಂದು ವಾರದಲ್ಲಿ ನಗರದ ಬಹುತೇಕ ಪಾನ್‌ ಅಂಗಡಿಗಳಲ್ಲಿ ಗುಟ್ಕಾ ಮುಂಬಾಗಿಲಿನಿಂದ ಹಿಂದಕ್ಕೆ ಸರಿದಿತ್ತು. ಕಾಯಂ ಗ್ರಾಹಕರಿಗೆ ಮಾತ್ರ ಅಂಗಡಿಕಾರರು ನಂಬಿಕೆಯ ಮೇಲೆ ದುಪ್ಪಟು ದರಕ್ಕೆ ಹಿಂಬಾಗಿಲಿನಲ್ಲಿ ಗುಟ್ಕಾ ನೀಡುತ್ತಿದ್ದರು. ಇದೇ ಅವಧಿಯಲ್ಲಿ ಅಧಿಕಾರಿಗಳು ಕೆಲ ಅಂಗಡಿಗಳ ದಾಳಿ ನಡೆಸಿ ಗುಟ್ಕಾ ಪ್ಯಾಕ್‌ಗಳನ್ನು ವಶಪಡಿಸಿಕೊಂಡಿದ್ದರು.

ನಂತರ ಗುಟ್ಕಾ ಪ್ಯಾಕೆಟ್‌ಗಳ ನೇರ ಮಾರಾಟ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಯಾಗಿತ್ತು. ಆದರೂ ಗುಟ್ಕಾ ತಿನ್ನುವ ಚಟ ಹೊಂದಿದವರಿಗೆ ಮಾತ್ರ ಎಂದಿಗೂ ಗುಟ್ಕಾ ಕೊರತೆಯಾಗಲೇ ಇಲ್ಲ! ಬ್ಲಾಕ್‌ನಲ್ಲಿ ಸಿಗುವ ಗುಟ್ಕಾದ ದರ ದುಪ್ಪಟು ಆಗಿದ್ದರಿಂದ ತಿನ್ನುವ ಪ್ರಮಾಣ ಮಾತ್ರ ಇಳಿಕೆಯಾಗಿತ್ತು.

ಚೌತಿ ಹಬ್ಬದ ಈಚೆಗೆ ನಗರದಲ್ಲಿ ಗುಟ್ಕಾ ಮತ್ತೆ ದೊಡ್ಡ ಪ್ರಮಾಣದಲ್ಲಿ ಮಾರಾಟ ವಾಗುತ್ತಿದೆ. ಪದ್ಮಶ್ರೀ, ಸ್ಟಾರ್‌ ಮಾರ್ಕಿನ ಗುಟ್ಕಾ ಸ್ಯಾಚೆಗಳು ಗುಟ್ಕಾ ಪ್ರಿಯರ ಕಿಸೆಯಲ್ಲಿ ಮಿಂಚುತ್ತಿವೆ. ಪದ್ಮಶ್ರೀ ಗುಟ್ಕಾ ಚೀಟಿಯ ಮುದ್ರಿತ ಬೆಲೆ ₨1.50 ಇದೆ. ಆದರೆ ಇವೆರಡು ಮಾರ್ಕಿನ ಗುಟ್ಕಾಗಳು ₨10ಕ್ಕೆ ಮೂರು ಸ್ಯಾಚೆಯಂತೆ ದೊರೆಯುತ್ತಿವೆ.

ಗುಟ್ಕಾ ನಿಷೇಧದ ನಂತರ ಕೆಲ ಅಂಗಡಿಗಳಲ್ಲಿ ತಂಬಾಕು ಮತ್ತು ಅಡಿಕೆ ಪ್ರತ್ಯೇಕ ಪೌಚ್‌ನಲ್ಲಿ ಲಭ್ಯವಾಗುತ್ತಿದೆ. ರಾಜಾರೋಷವಾಗಿ ಈ ಪೌಚ್‌ಗಳು ಮಾರಾಟವಾಗುತ್ತವೆ. ಆದರೆ ಗುಟ್ಕಾ ಸ್ಯಾಚೆಗಳು ಪರಿಚಯ ಇದ್ದವರಿಗೆ, ಕಾಯಂ ಗಿರಾಕಿಗಳಿಗೆ ಮಾತ್ರ ಲಭ್ಯ!

ನಗರದಲ್ಲಿ ಉತ್ಪಾದನೆಯಾಗುವ ವಿಳಾಸ ವಿರುವ ಗುಟ್ಕಾ ಪ್ಯಾಕ್‌ ಒಂದನ್ನು ಹೆಸರು ಹೇಳಲಿಚ್ಛಿಸದ ಪ್ರಜ್ಞಾವಂತರೊಬ್ಬರು ‘ಪ್ರಜಾವಾಣಿ’ಗೆ ಒದಗಿಸಿದರು. ಈ ಪ್ಯಾಕ್‌ ಮೇಲೆ ಉತ್ಪಾದನಾ ದಿನಾಂಕವಾಗಲಿ, ಅವಧಿ ಕೊನೆಗೊಳ್ಳುವ ದಿನಾಂಕವಾಗಲಿ ಮುದ್ರಣವಾ ಗಿಲ್ಲ. ಕೇವಲ ವಿಳಾಸವನ್ನು ಮಾತ್ರ ಮುದ್ರಿಸ ಲಾಗಿದೆ.

‘ಯುವ ಜನರನ್ನು ದುಶ್ಚಟಕ್ಕೆ ಸೆಳೆದಿರುವ ಗುಟ್ಕಾ ಬಂದಾಯಿತೆಂದು ನಿಟ್ಟುಸಿರು ಬಿಟ್ಟಿದ್ದೆವು. ಈಗ ಮತ್ತೆ ಗುಟ್ಕಾ ಮಾರಾಟ ಜೋರಾಗಿದೆ. ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ  ಗುಟ್ಕಾ ತಿಂದು ಎಸೆದ ಚೀಟಿಗಳು ಕಾಣುತ್ತಿವೆ. ಗುಟ್ಕಾ ನಿಷೇಧ ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ’ ಎಂದು ಶಿರಸಿಯ ರಮಾಕಾಂತ ಹೆಗಡೆ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT