ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ-ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ಸಿಗರಿಗೆ ಧರ್ಮಸಂಕಟ...

Last Updated 16 ಏಪ್ರಿಲ್ 2013, 11:01 IST
ಅಕ್ಷರ ಗಾತ್ರ

ಸಿದ್ದಾಪುರ: ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ದೀಪಕ ಹೊನ್ನಾವರ ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಸಮಿತಿಯೂ ಸೇರಿದಂತೆ ಸ್ಥಳೀಯ ದೇಶಪಾಂಡೆ ಬಣದ ಕಾಂಗ್ರೆಸ್ಸಿಗರು ಧರ್ಮಸಂಕಟಕ್ಕೀಡಾಗಿದ್ದಾರೆ.

ತಾಲ್ಲೂಕಿನ ಕಾಂಗ್ರೆಸ್ ಪಕ್ಷದಲ್ಲಿ ಇದುವರೆಗೆ ಸಕ್ರೀಯವಾಗಿರುವ ದೇಶಪಾಂಡೆ ಬಣದವರು ಮುಂದೇನು ಮಾಡಬೇಕು ಎಂಬ ವಿಷಯದಲ್ಲಿ ಇಕ್ಕಟ್ಟಿಗೆ ಒಳಗಾಗಿರುವುದು ಸ್ಪಷ್ಟವಾಗಿದೆ. ಶಿರಸಿ-ಸಿದ್ದಾಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಷಯದಲ್ಲಿ ಭೀಮಣ್ಣ ಟಿ.ನಾಯ್ಕ ಅವರಿಗೆ ಪೂರ್ಣ ಬೆಂಬಲ ನೀಡಿದ್ದ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಸಮಿತಿ, ಭೀಮಣ್ಣ ಅವರ ನಿರ್ಧಾರಕ್ಕೆ  ಬದ್ಧರಾಗುವ ಮನಸ್ಥಿತಿಯಲ್ಲಿದ್ದರೆ ಆಶ್ಚರ್ಯವಿಲ್ಲ.

ತಾಲ್ಲೂಕಿನ ದೇಶಪಾಂಡೆ ಬಣದ ಪ್ರಮುಖರಾದ ಷಣ್ಮುಖ ಗೌಡರ್ ಮತ್ತು ಅವರ ಅನುಯಾಯಿಗಳು, ದೀಪಕ ಅವರ ಹೆಸರು ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡ ಕ್ಷಣದಲ್ಲಿಯೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿಯೇ ಸ್ಥಳೀಯ ತಾಲ್ಲೂಕು ಪಂಚಾಯ್ತಿಯ ಮಾಜಿ ಅಧ್ಯಕ್ಷ  ಸಿ.ಆರ್.ನಾಯ್ಕ ಕೆಳಗಿನಸಸಿ ಅವರ ಸಂಚಾಲಕತ್ವದಲ್ಲಿ  ಭೀಮಣ್ಣ ಟಿ.ನಾಯ್ಕ ಅಭಿಮಾನಿ ಬಳಗವೂ ರಚನೆಯಾಯಿತು. ಈ ಬಳಗದ ಆಶ್ರಯದಲ್ಲಿ  ಭೀಮಣ್ಣ ಅವರ ಪರವಾಗಿ ಪಟ್ಟಣದಲ್ಲಿ ಜಾಥಾವನ್ನೂ ನಡೆಸಲಾಯಿತು. ಆ ನಂತರ ತಾಲ್ಲೂಕಿನ ಬೇಡ್ಕಣಿಯ ಶನೇಶ್ವರ ದೇವಾಲಯದಲ್ಲಿ ಸಾವಿರದೊಂದು ತೆಂಗಿನಕಾಯಿ ಒಡೆಯುವ ಕಾರ್ಯಕ್ರಮ ಕೂಡ ನಡೆಯಿತು.

ಈ ಎಲ್ಲ ಚಟುವಟಿಕೆಗಳ ಮೂಲ ಉದ್ದೇಶ ಕಾಂಗ್ರೆಸ್‌ನ ರಾಜ್ಯ ಮುಖಂಡರ ಚಿತ್ತವನ್ನು ಇತ್ತ ಸೆಳೆಯುವುದಾಗಿತ್ತು. ಆದರೆ ಇವರುಗಳ ಈ ಎಲ್ಲ ನಡೆಗಳು ಕಾಂಗ್ರೆಸ್ ಹೈಕಮಾಂಡ್ ಮೇಲೆ ನಿರೀಕ್ಷಿತ ಪರಿಣಾಮ ಬೀರುವಲ್ಲಿ ವಿಫಲವಾದವು. ಭಾನುವಾರ ದೀಪಕ ಹೊನ್ನಾವರ ಅವರ  ಹೆಸರು ಅಧಿಕೃತವಾಗಿ ಘೋಷಣೆಯಾಗುತ್ತಿದ್ದಂತೆ ತಾಲ್ಲೂಕಿನ ದೇಶಪಾಂಡೆ ಬಣದವರು ಗರ ಬಡಿದಂತಾದರು.

ಭೀಮಣ್ಣ ನಡೆ ಏನು ?: `ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಸಮಿತಿ  ಹೈಕಮಾಂಡ್ ನಿರ್ಧಾರವನ್ನು ಪ್ರಶ್ನೆ ಮಾಡುವುದಿಲ್ಲ.  ಅಲ್ಲದೇ ಚುನಾವಣೆಯಲ್ಲಿ ತಟಸ್ಥ ನಿಲುವು ಹೊಂದುವ ಮಾರ್ಗವನ್ನು ಅನುಸರಿಸುವುದಿಲ್ಲ.  ಭೀಮಣ್ಣ ನಾಯ್ಕ ಕೂಡ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ಬಂಡಾಯದ ಕಹಳೆಯನ್ನೂ ಊದುವುದಿಲ್ಲ' ಎಂದು  ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಷಣ್ಮುಖ ಗೌಡರ್ ಸ್ಪಷ್ಟವಾಗಿಯೇ ಹೇಳುತ್ತಾರೆ.

  ಆದರೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಪ್ರಮುಖರೊಬ್ಬರನ್ನು `ಪ್ರಜಾವಾಣಿ' ಸಂಪರ್ಕಿಸಿದಾಗ, `ಭೀಮಣ್ಣ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುತ್ತಾರೆ' ಎಂದು ಹೇಳಿದ್ದು ಕುತೂಹಲಕ್ಕೆ ಕಾರಣವಾಗಿದೆ. ಈ ರೀತಿಯ  ವಿಭಿನ್ನ ಅಭಿಪ್ರಾಯಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದ್ದು, ಭೀಮಣ್ಣ ನಾಯ್ಕ ಅವರ ಮುಂದಿನ ನಡೆ ಏನು ಎಂಬುದು ಚರ್ಚೆಗೆ ಗ್ರಾಸವಾಗಿದೆ.

ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಹಿಡಿತ ಹೊಂದಿರುವ ದೇಶಪಾಂಡೆ ಬಣದ ಕಾಂಗ್ರೆಸಿಗರು ದೀಪಕ ಹೊನ್ನಾವರ ಅವರನ್ನು ಮುಕ್ತ ಮನಸ್ಸಿನಿಂದ ಬೆಂಬಲಿಸುವುದಂತೂ ಅಸಾಧ್ಯ. ಇದು ಅವರಿಗೆ ನಿಜವಾಗಿಯೂ ಧರ್ಮ ಸಂಕಟದ ಸಮಯವಾಗಿ ಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT