ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ

Last Updated 21 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಎನ್ನಬಹುದಾದ ಒಂದು ಕಮಾನು ಸೇತುವೆ, ಐದು ಸುರಂಗ ಮಾರ್ಗಗಳು ಮತ್ತು ಮೂರು ಆಧುನಿಕ ಬೃಹತ್ ರಸ್ತೆ ಮೇಲ್ಸೇತುವೆಗಳನ್ನು ಒಳಗೊಂಡ `ಬೈಪಾಸ್ ಎಕ್ಸ್‌ಪ್ರೆಸ್ ಹೈವೇ~ ಮಂಗಳೂರು ಮಾರ್ಗದ ಶಿರಾಡಿ ಘಾಟ್‌ನಲ್ಲಿ ನಿರ್ಮಾಣವಾಗಲಿದೆ.

ಜಪಾನ್ ಸರ್ಕಾರದ `ಜಪಾನ್ ಅಂತರರಾಷ್ಟ್ರೀಯ ಕನ್ಸಲ್ಟೆನ್ಸಿ ಏಜೆನ್ಸಿಯ (ಜೈಕಾ) ತಜ್ಞರು ಇತ್ತೀಚೆಗೆ ಸಕಲೇಶಪುರದ ಶಿರಾಡಿ ಘಾಟ್ ಪ್ರದೇಶದಲ್ಲಿ ಸ್ಥಳ ಪರಿಶೀಲಿಸಿದ್ದಾರೆ. ಯೋಜನೆ ಜಾರಿ ಯೋಗ್ಯ ಎಂದು ವರದಿ ನೀಡಿದ್ದಾರೆ. ಅನುಷ್ಠಾನಕ್ಕೆ ಸರ್ಕಾರವೂ ಉತ್ಸುಕವಾಗಿದೆ.

ಮಳೆಯಿಂದ ಶಿರಾಡಿ ಘಾಟ್ ಪ್ರದೇಶದಲ್ಲಿ ರಸ್ತೆ ಪದೇ ಪದೇ ಹಾಳಾಗಿ, ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ 48ರ ಸಕಲೇಶಪುರದ ಮಾರನಹಳ್ಳಿಯಿಂದ ಗುಂಡ್ಯವರೆಗೆ ಒಟ್ಟು 18.5 ಕಿ.ಮೀ. ಉದ್ದದ ಚತುಷ್ಪಥ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇದಕ್ಕೆ ಸುಮಾರು 4,800 ಕೋಟಿ ರೂಪಾಯಿ ಖರ್ಚಾಗುವ ಸಾಧ್ಯತೆ ಇದೆ.

ಈಗಿರುವ ಸಂಚಾರ ದಟ್ಟಣೆ ಸಾಕೆ?
ಕೇವಲ 18.5 ಕಿ.ಮೀ. ಉದ್ದದ ಚತುಷ್ಪಥ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣಕ್ಕೆ ರೂ 4800 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ರಸ್ತೆಗೆ ಇಷ್ಟೊಂದು ದೊಡ್ಡ ಮೊತ್ತದ ಹೂಡಿಕೆ ಸಾಧುವೇ? ಈ ಬಗ್ಗೆಯೂ ಜೈಕಾ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಇಂತಹ ಯೋಜನೆಗಳು ಆರ್ಥಿಕವಾಗಿ ಕಾರ್ಯ ಸಾಧುವಾಗಬೇಕಾದರೆ ಕನಿಷ್ಠ 10 ಸಾವಿರ ವಾಹನಗಳು ಪ್ರತಿನಿತ್ಯ ಸಂಚರಿಸಬೇಕಾಗುತ್ತದೆ. ಅದೂ ದೂರಕ್ಕೆ ಸಂಚರಿಸುವ ವಾಹನಗಳಾಗಿರಬೇಕು ಎಂದು ಅದು ಹೇಳಿದೆ. ಆದರೆ, ಗುಂಡ್ಯ- ಸಕಲೇಶಪುರ ನಡುವೆ ಪ್ರತಿನಿತ್ಯ ಅಂದಾಜು 8000 ವಾಹನಗಳು ಸಂಚರಿಸುತ್ತಿರುವ ಮಾಹಿತಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒದಗಿಸಿದೆ. ಅದರಲ್ಲಿ ದೂರಕ್ಕೆ ಸಂಚರಿಸುವ ವಾಹನಗಳೆಷ್ಟು, ಸ್ಥಳೀಯವಾಗಿ ಸಂಚರಿಸುವ ವಾಹನಗಳೆಷ್ಟು ಎಂಬುದನ್ನು ವಿಭಜಿಸಿ ತಿಳಿಸಿಲ್ಲ. ಈ ಸಂಚಾರ ದಟ್ಟಣೆ ಜತೆಗೆ ಸರಕುಸಾಗಣೆ ವಾಹನಗಳಿಗೆ ಹೆಚ್ಚಿನ ಒತ್ತುಕೊಡಬೇಕು. ಇದಕ್ಕೆ ಪೂರಕವಾಗಿ ತಮಿಳುನಾಡಿನ ಬಂದರುಗಳನ್ನು ಮಂಗಳೂರು ಬಂದರಿಗೆ ಸಂಪರ್ಕ ಕಲ್ಪಿಸಬೇಕು. ಹಾಗೆ ಮಾಡಲು ಮಂಗಳೂರಿನ ಬಂದರುಗಳನ್ನು ಅಭಿವೃದ್ಧಿಪಡಿಸಿ, ಸರಕುಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದೂ ಅದು ಸಲಹೆ ಮಾಡಿದೆ. ಇದು ಸಾಧ್ಯವಾದರೆ ಯೋಜನೆ ಕಾರ್ಯಸಾಧು ಆಗಲಿದೆ ಎಂದು ತಿಳಿಸಿದೆ.

 ರಾಜ್ಯದ ಬಂದರು ಅಭಿವೃದ್ಧಿಗೆ ವಿಶೇಷ ಒತ್ತು ನೀಡುವುದರಿಂದ ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳ ಸರಕುಸಾಗಣೆಗೆ ಈ ರಸ್ತೆ ಪ್ರಮುಖ ಸಂಪರ್ಕ ಸೇತುವೆಯಾಗಲಿದೆ. ಆ ಮೂಲಕವೂ ಯೋಜನೆಯನ್ನು ಯಶಸ್ವಿಗೊಳಿಸಬಹುದು ಎಂದು ಜೈಕಾ ವರದಿಯಲ್ಲಿ ತಿಳಿಸಿದೆ. ಜೈಕಾ ಅಧಿಕಾರಿಗಳು ನವ ಮಂಗಳೂರು ಬಂದರಿಗೂ ಭೇಟಿ ನೀಡಿ, ಅಲ್ಲಿನ ಕಾರ್ಯಚಟುವಟಿಕೆಗಳ ಬಗ್ಗೆ ಅಧ್ಯಯನ ನಡೆಸಿದ್ದು, ಹೆದ್ದಾರಿ ಯೋಜನೆಗೆ ಪೂರಕವಾಗಿ ಬಂದರು ಅಭಿವೃದ್ಧಿಗೂ ಸಹಕಾರ ನೀಡುವುದಾಗಿ ಹೇಳಿದ್ದಾರೆ.


ದ್ವಿಪಥದ ರಸ್ತೆಗಾದರೆ ಇದರಲ್ಲಿ ಅರ್ಧದಷ್ಟು ಖರ್ಚಾಗಲಿದೆ ಎಂದೂ ಜೈಕಾ ತನ್ನ ವರದಿಯಲ್ಲಿ ತಿಳಿಸಿದೆ.
ಸಕಲೇಶಪುರ- ಗುಂಡ್ಯ ನಡುವೆ ಈಗಿರುವ 26 ಕಿ.ಮೀ. ಉದ್ದದ ಹೆದ್ದಾರಿಯನ್ನು ಅಗಲ ಮಾಡುವುದು ಕಷ್ಟಸಾಧ್ಯ. ಅರಣ್ಯ ಪ್ರದೇಶವಾದ ಕಾರಣ ಪರಿಸರಕ್ಕೂ ಹಾನಿ. ಸುರಂಗ ಮಾರ್ಗದಿಂದ ಪರಿಸರಕ್ಕೆ ಅತಿ ಕಡಿಮೆ ಪ್ರಮಾಣದಲ್ಲಿ ಹಾನಿಯಾಗಲಿದೆ. ಈ ಪ್ರದೇಶದ ಒಟ್ಟು ಅಂತರದಲ್ಲಿ ಸುಮಾರು 9ರಿಂದ 10 ಕಿ.ಮೀ. ಕಡಿಮೆ ಆಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಖಾಸಗಿ ಸಹಭಾಗಿತ್ವ: `ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಕೇಂದ್ರ ಭೂಸಾರಿಗೆ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಅನುಷ್ಠಾನಕ್ಕೆ ಜಪಾನ್ ಸರ್ಕಾರದ ಆರ್ಥಿಕ ಮತ್ತು ತಾಂತ್ರಿಕ ನೆರವು ಕೊಡಿಸುವಂತೆಯೂ ಕೋರಲಾಗಿದೆ. ಒಂದೆರಡು ತಿಂಗಳಲ್ಲಿ ಇದಕ್ಕೆ ಜಪಾನ್ ಸರ್ಕಾರದಿಂದ ಪ್ರತಿಕ್ರಿಯೆ ಬರಬಹುದು~ ಎಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ `ಪ್ರಜಾವಾಣಿ~ಗೆ ತಿಳಿಸಿದರು.

`ಗಿರಿ ಶಿಖರಗಳಲ್ಲಿ ಹೆದ್ದಾರಿ ನಿರ್ಮಾಣ ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರನ್ನೂ ಕಾಡುತ್ತದೆ. ಶಿರಾಡಿ ಘಾಟ್ ಪ್ರದೇಶ ಸಮುದ್ರ ಮಟ್ಟದಿಂದ ಸುಮಾರು 850 ಅಡಿ ಎತ್ತರದಲ್ಲಿದೆ. ಉದ್ದೇಶಿತ ಹೆದ್ದಾರಿಯನ್ನು ಸುಮಾರು 700 ಮೀಟರ್ ಎತ್ತರದಿಂದ ಇಳಿಜಾರು ರೂಪದಲ್ಲಿ ನಿರ್ಮಿಸಬೇಕಾಗಿದೆ. ಇದೊಂದು ಸವಾಲಿನ ಯೋಜನೆ. ಅಗತ್ಯ ತಂತ್ರಜ್ಞಾನ ಒದಗಿಸುವಂತೆ ಜೈಕಾವನ್ನು ಕೋರಲಾಗಿದೆ~ ಎಂದೂ ಅವರು ವಿವರಿಸಿದರು.

ಜೈಕಾ ಪರಿಣತಿ: ಪರ್ವತ ಶ್ರೇಣಿಗಳಲ್ಲಿ ಸುರಂಗ ಮಾರ್ಗ ಹಾಗೂ ಎತ್ತರಿಸಿದ ರಸ್ತೆ ಮೇಲ್ಸೇತುವೆ ನಿರ್ಮಿಸುವಲ್ಲಿ ಜಪಾನ್ ಎತ್ತಿದ ಕೈ. ಇದೇ ರೀತಿಯ ಯೋಜನೆಯೊಂದನ್ನು ಅದು ಯಶಸ್ವಿಯಾಗಿ ತನ್ನ ನೆಲದಲ್ಲಿ ಕಾರ್ಯರೂಪಕ್ಕೆ ತಂದಿದೆ. 11 ಕಿ.ಮೀ. ಉದ್ದದ `ಕನೇತ್ಸು~ ಸುರಂಗ ಮಾರ್ಗವನ್ನು ಜೈಕಾ ನಿರ್ಮಿಸಿದೆ. ಇದು ಸುಮಾರು 1100 ಮೀಟರ್ ಆಳದಲ್ಲಿ ಹಾದು ಹೋಗಿದ್ದು, ವಿಶ್ವದ 11ನೇ ಅತಿ ಉದ್ದದ ಸುರಂಗ ಮಾರ್ಗ ಎಂದೂ ಪ್ರಸಿದ್ಧಿ ಪಡೆದಿದೆ.
 

ಹೆದ್ದಾರಿ ಎಲ್ಲಿ ಹಾದು ಹೋಗುತ್ತದೆ?
ಈಗಿರುವ ರೈಲ್ವೆ ಮಾರ್ಗ ಮತ್ತು ರಸ್ತೆ ಮಾರ್ಗದ ಮಧ್ಯ ಭಾಗದಲ್ಲಿ ಉದ್ದೇಶಿತ ಎಕ್ಸ್‌ಪ್ರೆಸ್ ಹೆದ್ದಾರಿ ಹಾದು ಹೋಗಲಿದೆ. ಇದರ ನಿರ್ಮಾಣಕ್ಕೆ ಕನಿಷ್ಠ ಆರು ವರ್ಷ ಬೇಕಾಗುತ್ತದೆ ಎಂದೂ ಹೇಳಲಾಗಿದೆ.

ಮಾರನಹಳ್ಳಿ ಸಮುದ್ರ ಮಟ್ಟದಿಂದ 700 ಮೀಟರ್ ಎತ್ತರದಲ್ಲಿದ್ದರೆ ಗುಂಡ್ಯ 155 ಮೀಟರ್ ಎತ್ತರದಲ್ಲಿದೆ. ಇವೆರಡೂ ತುದಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವುದಕ್ಕೆ ಪ್ರತಿ ನೂರು ಮೀಟರ್‌ಗೆ ಕನಿಷ್ಠ ಶೇ 3.5ರಷ್ಟು ಇಳಿಜಾರು ಕಲ್ಪಿಸಬೇಕಾಗುತ್ತದೆ. ಇದರಿಂದ ವಾಹನ ಸಂಚಾರಕ್ಕೆ ತಾಂತ್ರಿಕವಾಗಿ ಯಾವ ಅಡಚಣೆಯೂ ಆಗುವುದಿಲ್ಲ ಎಂದು ಜೈಕಾ ತಂತ್ರಜ್ಞರು ತಮ್ಮ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದ್ದಾರೆ.


ಇದೇ ರೀತಿಯಲ್ಲಿ ಶಿರಾಡಿ ಘಾಟ್‌ನಲ್ಲೂ ಸುರಂಗ ಮಾರ್ಗ ನಿರ್ಮಿಸಬಹುದು. 18.5 ಕಿ.ಮೀ. ಉದ್ದದಲ್ಲಿ 7.7 ಕಿ.ಮೀ. ಉದ್ದದ ಐದು ಸುರಂಗ ಮಾರ್ಗಗಳು ಹಾಗೂ 3.9 ಕಿ.ಮೀ. ಉದ್ದದ ನಾಲ್ಕು ಎತ್ತರಿಸಿದ ರಸ್ತೆ ಮೇಲ್ಸೇತುವೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಇದರಲ್ಲಿ ಬೃಹತ್ ಎನ್ನಲಾದ ಎರಡು ಕಿ.ಮೀ. ಉದ್ದದ ಕಮಾನು ಸೇತುವೆ ಕೂಡ ಸೇರಿದ್ದು, ಇದನ್ನು ಕಣಿವೆ ಪ್ರದೇಶದಲ್ಲಿ ನಿರ್ಮಿಸಲಾಗುವುದು. ಇದೊಂದು ಪ್ರವಾಸಿ ತಾಣವಾಗಿಯೂ ರೂಪುಗೊಳ್ಳುವುದರಲ್ಲಿ ಅನುಮಾನ ಇಲ್ಲ ಎಂದೂ ಜೈಕಾ ಅಭಿಪ್ರಾಯಪಟ್ಟಿದೆ.

ಒಂದರಿಂದ ಮತ್ತೊಂದು ಪರ್ವತ ಶ್ರೇಣಿಗೆ ಸಂಪರ್ಕ ಕಲ್ಪಿಸುವ ಮಧ್ಯ ಭಾಗದಲ್ಲಿ ಎತ್ತರಿಸಿದ ಸೇತುವೆಗಳನ್ನು ನಿರ್ಮಿಸಲಾಗುವುದು. ಇದಕ್ಕೂ ವಿಶೇಷ ತಂತ್ರಜ್ಞಾನದ ಅಗತ್ಯ ಇದೆ. ಪ್ರಾಥಮಿಕ ಹಂತದ ಪರಿಶೀಲನೆಯಿಂದ ಶಿರಾಡಿ ಘಾಟ್‌ನಲ್ಲಿ 30 ಮೀಟರ್‌ಗೂ ಎತ್ತರದ ಪಿಲ್ಲರ್‌ಗಳನ್ನು ಸೇತುವೆ ಸಲುವಾಗಿ ನಿರ್ಮಿಸಬೇಕಾಗುತ್ತದೆ. ಪರಿಸರಕ್ಕೆ ಹೆಚ್ಚಿನ ಹಾನಿಯಾಗದಂತೆ ನಿಗಾ ವಹಿಸಿ ಇಂತಹ ಕಾಮಗಾರಿ ಕೈಗೆತ್ತಿಕೊಳ್ಳುವುದು ಸವಾಲಿನ ಕೆಲಸ. ಇದನ್ನು ಕಾರ್ಯರೂಪಕ್ಕೆ ತರಲು ಬೇಕಾದ ಅಗತ್ಯ ನೆರವು ನೀಡುವುದಾಗಿಯೂ ಜೈಕಾ ಹೇಳಿದೆ.

ಸುರಂಗ ಮಾರ್ಗ ಮತ್ತು ರಸ್ತೆ ಮೇಲ್ಸೇತುವೆ ಒಟ್ಟು 11.6 ಕಿ.ಮೀ. ಉದ್ದ ಬರಲಿದೆ. ಉಳಿದ 6.9 ಕಿ.ಮೀ. ಉದ್ದದಲ್ಲಿ ರಸ್ತೆಯನ್ನು ಭೂಮಟ್ಟದಲ್ಲೇ ನಿರ್ಮಿಸಲಾಗುತ್ತದೆ. ಕೆಲವು ಕಡೆ ಮಣ್ಣು ಭರ್ತಿ ಮಾಡುವುದು ಸೇರಿದಂತೆ ಸಣ್ಣಪುಟ್ಟ ಕಾಮಗಾರಿಗಳಿಂದಲೇ ರಸ್ತೆ ನಿರ್ಮಿಸಬಹುದು. ಇದಕ್ಕೆ ಪ್ರತಿ ಕಿ.ಮೀ. ರಸ್ತೆಗೆ 20 ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ ಎಂದು ವಿವರಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT