ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರ್ಲಾಲು: ಮಸ್ತಕಾಭಿಷೇಕ ಸಂಭ್ರಮ

Last Updated 18 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಹೆಬ್ರಿ: ಕಾರ್ಕಳ ತಾಲ್ಲೂಕಿನ ಐತಿಹಾಸಿಕ ಶಿರ್ಲಾಲು ಅತಿಶಯ ಕ್ಷೇತ್ರ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿಯ ಸಿದ್ಧಗಿರಿ ಕ್ಷೇತ್ರದಲ್ಲಿ  ಆದಿನಾಥ, ಭರತ ಹಾಗೂ ಬಾಹುಬಲಿ ಮೂರ್ತಿಗಳಿಗೆ ಪ್ರಥಮ ಮಸ್ತಕಾಭಿಷೇಕ ಸೋಮವಾರ ನಡೆಯಿತು.

ಸುಮಾರು 400 ವರ್ಷಗಳ  ಹಿನ್ನಲೆಯುಳ್ಳ ಶಿರ್ಲಾಲು ಬಸದಿಯಲ್ಲಿ ಇದೇ 14ರಂದು ಏಕಪದ್ಮ ಪೀಠದಲ್ಲಿ ಪ್ರತಿಷ್ಠಾಪಿಸಿರುವ ಆದಿನಾಥ, ಭರತ ಹಾಗೂ ಬಾಹುಬಲಿ ಮೂರ್ತಿಗಳ ಪೈಕಿ ಆದಿನಾಥ ಸ್ವಾಮಿಗೆ ಪಂಚಕಲ್ಯಾಣ ಮಹೋತ್ಸವ ನಡೆಸಲಾಗಿತ್ತು. ಗರ್ಭಾವತರಣ ಕಲ್ಯಾಣ, ಜನ್ಮಕಲ್ಯಾಣ ಹಾಗೂ ದೀಕ್ಷಾ ಕಲ್ಯಾಣ ಮಹೋತ್ಸವಗಳು ನಡೆದ ಬಳಿಕ ಸೋಮವಾರ ಕೇವಲ ಜ್ಞಾನ ಕಲ್ಯಾಣ ಮಹೋತ್ಸವ ನಡೆಯಿತು. ಮಂಗಳವಾರ ನಿರ್ವಾಣ ಕಲ್ಯಾಣ ಮಹೋತ್ಸವ ನಡೆಯಲಿದೆ.

ಜೈನಮುನಿ ಆಚಾರ್ಯ ಸುದೇಶಸಾಗರ ಮುನಿ ಮಹಾರಾಜ್ ಅವರು ತ್ರಿಮೂರ್ತಿಗಳಿಗೆ ನಯನೋನ್ಮಿಲನ ನಡೆಸಿದರು. ಬಳಿಕ ರತ್ನಾಕರವರ್ಣಿ ವೇದಿಕೆಯಲ್ಲಿ ಸಮವಸರಣ ಪೂಜೆ ನಡೆಸಲಾಯಿತು. ಬಳಿಕ ಸಾಲಂಕೃತ ಪಲ್ಲಕಿಯಲ್ಲಿ ಆದಿನಾಥ ಸ್ವಾಮಿ ಮೂರ್ತಿಯನ್ನು ಮೆರವಣಿಗೆಯಲ್ಲಿ ಬಸದಿಗೆ, ಬಳಿಕ ಸಿದ್ಧಗಿರಿ ಕ್ಷೇತ್ರಕ್ಕೆ ತರಲಾಯಿತು. ರಜತ ರಥೋತ್ಸವವೂ ನಡೆಯಿತು. ಅಗ್ರೋದಕ ಮೆರವಣಿಗೆ ಬಳಿಕ ತ್ರಿಮೂರ್ತಿಗಳಿಗೆ ಪ್ರಥಮ ಮಸ್ತಕಾಭಿಷೇಕ ನಡೆಸಲಾಯಿತು.

ಶ್ರವಣಬೆಳಗೊಳ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮತ್ತು ಕಾರ್ಕಳ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪ್ರಥಮ ಸೇವಾರ್ಥಿಯಾಗಿ ಮೂರ್ತಿ ಪ್ರತಿಷ್ಠಾಪಕರಾದ ಎಸ್. ರತ್ನವರ್ಮ ಪೂವಣಿ ಮತ್ತು ವಿನಂತಿ ದಂಪತಿ ಪ್ರಥಮ ಮಸ್ತಕಾಭಿಷೇಕ ಆಯೋಜಿಸಿದ್ದರು.

ಸಹಸ್ರಾರು ಸಂಖ್ಯೆಯ ಭಕ್ತಾದಿಗಳ ಹರ್ಷೋದ್ಗಾರ,ಜಯಕಾರದ ನಡುವೆ ತ್ರಿಮೂರ್ತಿಗಳಿಗೆ ಕಲಾಶಾಭಿಷೇಕ, ಎಳನೀರು ಅಭಿಷೇಕ, ಜಲಾಭಿಷೇಕ, ಕಬ್ಬಿನ ಹಾಲು, ಕ್ಷೀರಾಭಿಷೇಕ, ಅಕ್ಕಿಹಿಟ್ಟು- ಅರಶಿಣ ಹಿಟ್ಟು, ಕಷಾಯ ಅಭಿಷೇಕ, ಅಷ್ಟಗಂಧ- ಶ್ರೀಗಂಧ- ಚಂದನ ಅಭಿಷೇಕ ನಡೆಯಿತು. ಬಳಿಕ ಪುಷ್ಪವೃಷ್ಟಿ ನಡೆಸಿ ಮಹಾಮಂಗಳಾರತಿ ನೆರವೇರಿಸಲಾಯಿತು.

ಶಾಂತಿಮಂತ್ರ ಪುರಶ್ಚರಣೆಯೊಂದಿಗೆ ಪ್ರಥಮ ಮಸ್ತಕಾಭಿಷೇಕ ಸಂಪನ್ನಗೊಂಡಿತು. ಸಮಿತಿಯ ಕಾರ್ಯಾಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಧರ್ಮಸ್ಥಳದ ಹರ್ಷೇಂದ್ರ ಕುಮಾರ್, ಗುಣಪಾಲ ಕಡಂಬ ಮತ್ತಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT