ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವ ಪೂಜೆಯಲ್ಲಿ...!

Last Updated 19 ಜನವರಿ 2013, 19:59 IST
ಅಕ್ಷರ ಗಾತ್ರ

ಚಿತ್ರ: ಲಕ್ಷ್ಮೀ
ನಿರ್ಮಾಪಕ: ಆದಿ ನಾರಾಯಣ್
ನಿರ್ದೇಶಕ: ರಾಘವ್ ಲೋಕಿ
ತಾರಾಗಣ: ಶಿವರಾಜ್‌ಕುಮಾರ್, ಪ್ರಿಯಾಮಣಿ, ಸಲೋನಿ, ಆಶಿಶ್ ವಿದ್ಯಾರ್ಥಿ, ರವಿಕಾಳೆ, ರಂಗಾಯಣ ರಘು, ಅವಿನಾಶ್, ಚಿ.ಗುರುದತ್, ಗುರುಪ್ರಸಾದ್, ಮತ್ತಿತರರು

ಭಯೋತ್ಪಾದನೆಯ ವಿರುದ್ಧದ ಹೋರಾಟವೇ ನಿಜವಾದ ದೇಶಭಕ್ತಿ ಎಂದು ಬಿಂಬಿಸುವ ಚಿತ್ರಕ್ಕೆ ಭಾವುಕತೆಯ ಎಳೆಯುಂಟು. ಪ್ರೀತಿ ಪ್ರೇಮದ ನೆಳಲುಂಟು. ದೃಶ್ಯ ಸಿರಿಯ ಜತೆಗೆ ಕಾಡುವ ಹಾಡುಗಳುಂಟು. ಪ್ರೇಕ್ಷಕರ ಲೆಕ್ಕಾಚಾರವನ್ನೆಲ್ಲ ತಲೆಕೆಳಕಾಗಿಸುವ ಕತೆಯುಂಟು. ಇವನ್ನೆಲ್ಲ ಇಟ್ಟುಕೊಂಡು ಒಳಿತು ಕೆಡುಕಿನ ಆಟ ಕಟ್ಟಿದ್ದಾರೆ ನಿರ್ದೇಶಕ ರಾಘವ್ ಲೋಕಿ.

ಸಾಮಾನ್ಯರ ಕಣ್ಣಿಗೆ ರೌಡಿಯಂತೆ, ಪೊಲೀಸರ ಕಣ್ಣಿಗೆ ಕೇಡಿಯಂತೆ ಕಾಣುವ ಕಥಾನಾಯಕ ಎಲ್ಲರ ಹಿತ ಕಾಯುವವನು. ಲಕ್ಷ್ಮೀ ಎಂಬ ಹೆಸರಿಟ್ಟುಕೊಂಡ ನಾರಾಯಣ ಆತ. ಮಡದಿಯೂ ಗಂಡನ ಇಚ್ಛೆಯನ್ನರಿತು ನಡೆಯುವವಳೇ. ಕತೆ ಸಾಗಿದಂತೆ  ಸಂಬಂಧಗಳ ಚಿತ್ರಣ ಬದಲಾಗುತ್ತದೆ. ಸರಸದ ಜೊತೆಗೆ ವಿರಸ ಸೇರಿಕೊಳ್ಳುತ್ತದೆ. ಆಪ್ತರೇ ಶತ್ರುಗಳಾಗಿ ತೋರುತ್ತಾರೆ. ಮುಂದಿನದು ನಿಗೂಢ ನಡೆ.

ಗಂಡ ಹಾಗೂ ತನಿಖಾಧಿಕಾರಿಯ ಪಾತ್ರದಲ್ಲಿ ನಟ ಶಿವರಾಜ್‌ಕುಮಾರ್ ಅಭಿನಯ ಗಮನಾರ್ಹ. ಸಾಹಸ ದೃಶ್ಯಗಳಲ್ಲಿ ಮಿಂಚುವ ಜತೆಗೆ ಹಾಡುಗಳಲ್ಲಿ ಮನದಣಿಯೆ ನರ್ತಿಸಿದ್ದಾರೆ. ಅವರೇ ಹಾಡಿದ ಮೋಟು ಬೀಡಿ ಗೀತೆಗೆ ಆಯಸ್ಕಾಂತದ ಸೆಳೆತವಿದೆ. ಹೊಸ ಬಗೆಯ ಮೇಕಪ್ ಕೂಡ ಆಕರ್ಷಿಸುತ್ತದೆ. ಪ್ರಿಯಾಮಣಿ ಅವರಿಗೆ ಚಿತ್ರದಲ್ಲಿ ಹಲವು ಛಾಯೆಗಳ ಪಾತ್ರ. ಒಮ್ಮೆ ಹಿತೈಷಿಯಂತೆ, ಮತ್ತೊಮ್ಮೆ ಹಿತಶತ್ರುವಿನಂತೆ ಗೋಚರಿಸುವ ಆಕೆ ಒಂದು ಹಂತದಲ್ಲಿ ದ್ವಿಪಾತ್ರ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಹುಟ್ಟಿಸುತ್ತಾರೆ. ಮಾಗಿದ ನಾಯಕನಟರಿಗೆ ಪ್ರಿಯಾಮಣಿ ಒಳ್ಳೆಯ ಜೋಡಿಯಾಗುತ್ತಾರೆ ಎಂಬ ಮಾತು ಈ ಚಿತ್ರದಲ್ಲಿಯೂ ನಿಜವಾಗಿದೆ.

ಆಶಿಷ್ ವಿದ್ಯಾರ್ಥಿ ಖಳನಾಗಿ ಗಮನ ಸೆಳೆಯುತ್ತಾರೆ. ಗುರುದತ್, ಗುರುಪ್ರಸಾದ್ ಕೂಡ ಅಂಥದ್ದೇ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡು ಹಾಗೂ ಕತೆಯಲ್ಲಿ ಇಣುಕುವ ವಿದೇಶ, ಚಿತ್ರದ ಸೌಂದರ್ಯ ವರ್ಧಕ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ ಅಲ್ಲಲ್ಲಿ ಇಷ್ಟವಾಗುತ್ತದೆ. ಥ್ರಿಲ್ಲರ್ ಕತೆಗೆ ಸಾಹಸ ದೃಶ್ಯಗಳು ಕಿರೀಟ ಇಟ್ಟಂತಿವೆ. 

ಆದರೆ ಇವಿಷ್ಟರ ಮೇಲೆಯೇ ಒಂದು ಚಿತ್ರ ನಿಂತಿರುವುದಿಲ್ಲ. ಹಲವು ಉಪಕತೆಗಳನ್ನು ಒಳಗೊಂಡೂ ಕತೆ ದಿಕ್ಕು ತಪ್ಪಬಾರದು. ಈ ಎಚ್ಚರ ನಿರ್ದೇಶಕರಿಗೆ ಇದ್ದಂತಿಲ್ಲ. ಹೀಗಾಗಿ ಗಣಿಗಾರಿಕೆ, ಸ್ತ್ರೀ ಶೋಷಣೆ,ಭಯೋತ್ಪಾದನೆಯಂತಹ ಜ್ವಲಂತ ಸಮಸ್ಯೆಗಳು ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ. ಒಂದರೊಳಗೆ ಮತ್ತೊಂದು ತೂರಿಕೊಂಡು ಮಂದವಾಗುತ್ತವೆ. ಕೆಲವು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿದ್ದರೆ ಕತೆ ಚೆನ್ನಾಗಿರುತ್ತಿತ್ತು. ಚಿತ್ರದ ದೀರ್ಘಾವಧಿ ಪ್ರೇಕ್ಷಕರಲ್ಲಿ ಬೇಸರ ತರಿಸಬಹುದು.

ಹಾಡೊಂದರಲ್ಲಿ ಕಾಣಿಸಿಕೊಳ್ಳುವುದನ್ನು ಬಿಟ್ಟರೆ ಕತೆಯಲ್ಲಿ ನಟಿ ಸಲೋನಿ ಅವರಿಗೆ ಹೆಚ್ಚೇನೂ ಕೆಲಸವಿಲ್ಲ. ರಂಗಾಯಣ ರಘು ಹಾವಭಾವಗಳಲ್ಲಿ ನಗೆಯುಕ್ಕಿಸಲು ಯತ್ನಿಸಿ ವಿಫಲರಾಗಿದ್ದಾರೆ. ನಿರ್ದೇಶಕರು ಹಾಸ್ಯಕ್ಕೇನೂ ಮಹತ್ವ ನೀಡಿದಂತಿಲ್ಲ. ರವಿಕಾಳೆ ಅವರ ಪಾತ್ರವೂ ಹಾಸ್ಯಾಸ್ಪದವಾಗಿದೆ.

ಪ್ರಿಯಾಮಣಿ, ಸಲೋನಿ ಅವರ ನೃತ್ಯದೆದುರು ಐಟಂ ಗೀತೆ ಮಹತ್ವ ಕಳೆದುಕೊಂಡಿದೆ. ಅವಿನಾಶ್ ಅವರ ಪಾತ್ರಕ್ಕೂ ಪೋಷಾಕಿಗೂ ಸಂಬಂಧವಿಲ್ಲ. ಹೊಸದೇನನ್ನೋ ಪ್ರಯೋಗಿಸಲು ಹೊರಟು ಕೆಲವೆಡೆ ಅಭಾಸ ಸೃಷ್ಟಿಸಲಾಗಿದೆ. ಉಗ್ರನನ್ನು ಮನವೊಲಿಸುವ ಪರಿಯನ್ನು ಜೀರ್ಣಿಸಿಕೊಳ್ಳುವುದು ಸಾಧ್ಯವಿಲ್ಲ. ಎಂ.ಎಸ್.ರಮೇಶ್ ಅವರ ಸಂಭಾಷಣೆ ಹುರಿಗೊಂಡಿಲ್ಲ. ಮೊದಲರ್ಧದಲ್ಲಿ ನಡೆಯುವ ಅವರ ಮಾತಿನ ಮೋಡಿ ದ್ವಿತೀಯಾರ್ಧದಲ್ಲಿ ನಾಪತ್ತೆಯಾಗಿದೆ.

ಸಂಗೀತಕ್ಕಿಂತಲೂ ಹಾಡುಗಳ ಸಾಹಿತ್ಯ ಚೆನ್ನಾಗಿದೆ. ಹಳೆಯ ನಾದಗಳ ಒಗ್ಗರಣೆಯಂತಿದೆ ಗುರುಕಿರಣ್‌ರ ಸಂಗೀತ. ಗ್ರಾಫಿಕ್ಸ್ ಕುರಿತಂತೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದ್ದ ಚಿತ್ರದಲ್ಲಿ ಅಂಥದ್ದೇನೂ ಮ್ಯಾಜಿಕ್ ನಡೆದಿಲ್ಲ. ಪರಾಕಾಷ್ಠೆಯ ದೃಶ್ಯ ಬಡಕಲಾಗಲು ಗ್ರಾಫಿಕ್ಸ್ ನ್ಯೂನತೆಯೂ ಒಂದು ಕಾರಣ. ಈ ಎಲ್ಲ ಬಗೆಯ ಲೋಪಗಳಿಂದಾಗಿ ಶಿವಪೂಜೆಯಲ್ಲಿ ಕರಡಿಗೆ ಬಿಟ್ಟು ಬಂದಂತಹ ಸ್ಥಿತಿ ನಿರ್ದೇಶಕರದು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT