ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರನಾಥ ಸ್ವಾಮೀಜಿ ನಿಧನ

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರದ ಆದಿಚುಂಚನಗಿರಿ ಶಾಖಾ ಮಠ ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿ (56) ಭಾನುವಾರ ಹೃದಯಾಘಾತದಿಂದ ವಿಧಿವಶರಾದರು.

ಭಾನುವಾರ ಮುಂಜಾನೆ ಸ್ವಾಮೀಜಿ ಆಶ್ರಮದಲ್ಲಿ ದೈನಂದಿನ ಧಾರ್ಮಿಕ ವಿಧಿವಿಧಾನ ಮುಗಿಸಿ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರು.

ಬೆಂಗಳೂರು ಜಾಲಹಳ್ಳಿ ಸಮೀಪ ಪ್ರಯಾಣಿಸುವಾಗ ಸ್ವಾಮೀಜಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಸ್ವಾಮೀಜಿ ಬೆಳಿಗ್ಗೆ 11 ಗಂಟೆಯಲ್ಲಿ ಇಹಲೋಕ ತ್ಯಜಿಸಿದರು. ಸಂಜೆ ಆದಿಚುಂಚನಗಿರಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು.

ನಾಗಮಂಗಲ ತಾಲ್ಲೂಕು ಬೆಟ್ಟದ ಮಲ್ಲೇನಹಳ್ಳಿಯಲ್ಲಿ 1957ರಲ್ಲಿ ಹಲಗೇಗೌಡ–ಸೀತಮ್ಮ ದಂಪತಿಯ ನಾಲ್ಕನೇ ಪುತ್ರನಾಗಿ ಶಿವಕುಮಾರನಾಥ ಸ್ವಾಮೀಜಿ (ಪೂರ್ವಾಶ್ರಮದ ಹೆಸರು ಬಿ.ಎಚ್.ಈರಣ್ಣಗೌಡ) ಜನಿಸಿದರು.

ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲಿ, ಪ್ರೌಢಶಿಕ್ಷಣವನ್ನು ಆದಿಚುಂಚನಗಿರಿಯಲ್ಲಿ ಪಡೆದರು. ಮಠದ ಸಂಪರ್ಕದಲ್ಲಿದ್ದ ಅವರು, ಔಪಚಾರಿಕ ಶಿಕ್ಷಣದ ಜತೆಗೆ ವೇದ, ಸಂಸ್ಕೃತ ಅಧ್ಯಯನ ಮಾಡಿದರು. ಅಲ್ಲೇ ಸಂಸ್ಕತ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದರು.

ಆದಿಚುಂಚನಗಿರಿ ಮಠದ ಹಿಂದಿನ ಪೀಠಾಧ್ಯಕ್ಷ ಬಾಲಗಂಗಾಧರನಾಥ ಸ್ವಾಮಿಜಿ ಪ್ರಭಾವಕ್ಕೆ ಒಳಗಾಗಿ ತಮ್ಮ 23ನೇ ವಯಸ್ಸಿನಲ್ಲಿ ನಾಥಪಂಥ ದೀಕ್ಷೆ ಸ್ವೀಕರಿಸಿದರು. 1980ರಲ್ಲಿ ಚುಂಚನಗಿರಿ ಶಾಖಾ ಮಠವಾದ ಮಾಯಸಂದ್ರ ಕಲ್ಪತರು ಆಶ್ರಮದ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತರು. ಸಮರ್ಥ ನಿರ್ವಹಣೆಯೊಂದಿಗೆ ಆ ಶಾಖೆಯ ಮುಖ್ಯಸ್ಥರೂ ಆದರು. ಕೃಷಿ, ಶಿಕ್ಷಣ, ಸಮಾಜ ಸೇವೆಗೆ ಸ್ವಾಮೀಜಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ಸೇವೆ ಗುರುತಿಸಿ ರಾಜ್ಯ ಸರ್ಕಾರ 1991ರಲ್ಲೇ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT