ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಣ್ಣ ಅಭ್ಯರ್ಥಿ, ಸ್ಪರ್ಧೆ ಒಲ್ಲದ ಗೌಡ

ತುಮಕೂರು ಲೋಕಸಭಾ ಚುನಾವಣೆ: ಬಿಜೆಪಿ ಸಿದ್ಧತೆ
Last Updated 14 ಡಿಸೆಂಬರ್ 2013, 7:50 IST
ಅಕ್ಷರ ಗಾತ್ರ

ತುಮಕೂರು: ಮುಂದಿನ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸ ತೊಡಗಿರುವ ಜಿಲ್ಲಾ ಬಿಜೆಪಿ, ತುಮ­ಕೂರು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಎಸ್‌.ಶಿವಣ್ಣ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ. ಇವರ ಜೊತೆಗೆ ಮಾಜಿ ಶಾಸಕರಾದ ಬಿ.ಸಿ.­ನಾಗೇಶ್‌, ಕಿರಣ್‌ಕುಮಾರ್‌, ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಎಂ.ಬಿ. ನಂದೀಶ್‌ ಅವರ  ಹೆಸರನ್ನೂ ಪಕ್ಷದ ಹೈಕಮಾಂಡ್‌ಗೆ ಸಲ್ಲಿಸಿದೆ.

ಪಕ್ಷದ ಚುನಾವಣಾ ಸಿದ್ಧತೆಗಳ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿ­ಯಲ್ಲಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ, ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ, ಲೋಕಸಭೆಗೆ ತಮ್ಮ ಸ್ಪರ್ಧೆ ಇಲ್ಲ ಎಂದು ಖಚಿತ ಪಡಿಸಿದರು. ಶಾಸಕರಾಗಿರುವ ಕಾರಣ ಮತ್ತೊಂದು ಚುನಾವಣೆ ಜನರ ಮೇಲೆ ಹಾಕಲು ಬಯಸುವುದಿಲ್ಲ. ಯಾವುದೇ ಕಾರಣಕ್ಕೂ ಸಂಸತ್‌ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ. ಪಕ್ಷದ ಹೈಕಮಾಂಡ್ ಸೂಚನೆ ನೀಡಿದರೆ ನಂತರ ಆ ಕುರಿತು ಚಿಂತಿಸುವೆ ಎಂದು ಹೇಳಿದರು.

ಚುನಾವಣೆಗೆ ಪಕ್ಷದ ಕಾರ್ಯಕರ್ತ­ರನ್ನು ಸನ್ನದ್ಧಗೊಳಿಸಲು ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ 50 ಸಾವಿರ ಸಕ್ರಿಯ ಕಾರ್ಯಕರ್ತರಿದ್ದು, ಇವರ ಜತೆಗೆ ಡಿ. 21, 22ರಂದು ಇನ್ನೂ ಮೂರು ಸಾವಿರ ಕಾರ್ಯಕರ್ತರ ನೋಂದಣಿ ನಡೆಯಲಿದೆ ಎಂದರು. ಡಿ. 15ರಂದು ನಗರದಲ್ಲಿ ಏಕತೆ ಓಟ, ಡಿ.24ರಂದು ಜಿ.ಪಂ. ವ್ಯಾಪ್ತಿಯ ಪಕ್ಷದ ಶಕ್ತಿ ಕೇಂದ್ರಗಳಲ್ಲಿ ಕಾರ್ಯಾ­ಗಾರ, 25ರಂದು ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನಾ­ಚರಣೆ, ಜನವರಿ 1ರಿಂದ 5ರವರೆಗೆ ಗ್ರಾಮ ಗ್ರಾಮಗಳಲ್ಲಿ ಪಕ್ಷದ ನಿಧಿಗೆ ಹಣ ಸಂಗ್ರಹ ಅಭಿಯಾನ ಹಮ್ಮಿ­ಕೊಳ್ಳಲಾಗಿದೆ ಎಂದು ವಿವರಿಸಿದರು.

ಶಿರಾ ಗಲಭೆ: ಶಿರಾ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತ­ರನ್ನು ಬಂಧಿಸುತ್ತಿರುವ  ಪೊಲೀಸರ ಕ್ರಮ ಖಂಡಿಸಿದರು. ಭಯೋ­ತ್ಪಾದ­ಕರಂತೆ ನೋಡಲಾಗುತ್ತಿದೆ ಎಂದು ಪೊಲೀಸರ ವಿರುದ್ಧ ಹರಿಹಾಯ್ದರು. ಬಿಜೆಪಿ ರಾಜ್ಯ ಘಟಕದ ಕಾರ್ಯ­ದರ್ಶಿ ಎಂ.ಬಿ. ನಂದೀಶ್‌ ಮಾತನಾಡಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ್‌ ರಾತ್ರೋರಾತ್ರಿ  ಮನೆಗೆ ನುಗ್ಗಿ ಅಮಾಯಕರನ್ನು ಬಂಧಿಸುತ್ತಿದ್ದಾರೆ. ಈ ಅಧಿಕಾರಿ ವಿರುದ್ಧ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದರು.

ಶಿರಾ, ಮಧುಗಿರಿ, ಕುಣಿಗಲ್‌ ತಾಲ್ಲೂಕಿನಲ್ಲಿ ಅಕ್ರಮ ಮರಳು ಗಣಿ­ಗಾರಿಕೆ, ಫಿಲ್ಟರ್‌ ಮರಳು ಗಣಿಗಾರಿಕೆ ಮಿತಿ ಮೀರಿದ್ದು ಅಂತರ್ಜಲ ಬಸಿದು ಹೋಗಲಿದೆ ಎಂದು ಪರಿಸರ ಖಾತೆ ಮಾಜಿ ಸಚಿವ ಎಸ್‌. ಶಿವಣ್ಣ ಆತಂಕ ತೋಡಿಕೊಂಡರು. ಶಿರಾ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಭಯೋತ್ಪಾದಕರಂತೆ ಕಾಣುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಪೊಲೀಸರನ್ನು ಏಜೆಂಟರಂತೆ ಬಳಸಿಕೊಂಡು ತಮಗಾಗದವರ ವಿರುದ್ಧ ಪ್ರಕರಣ ದಾಖಲಿಸುವ ಕೆಲಸ ಮಾಡುತ್ತಿದೆ ಎಂದು ಹರಿಹಾಯ್ದರು.

ಸ್ಪರ್ಧೆಗೆ ಜಗ್ಗೇಶ್ ಒಲವು
ಈ ನಡುವೆ ಮಾಲೂರಿನಲ್ಲಿ ‘ಸಾಫ್ಟ್‌ವೇರ್‌ ಗಂಡ’ ಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿರುವ ಚಲನಚಿತ್ರ ನಟ  ಹಾಗೂ ವಿಧಾನ ಪರಿಷತ್ ಸದಸ್ಯ ಜಗ್ಗೇಶ್, ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT