ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಣ್ಣನಿಂದ ನೃತ್ಯ-ಗಾಯನ ರಸದೌತಣ

Last Updated 21 ಏಪ್ರಿಲ್ 2011, 8:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಮೂರುಸಾವಿರ ಮಠದ ಶಾಲಾ ಮೈದಾನ ಬುಧವಾರ ಸಂಜೆ ಕಿಕ್ಕಿರಿದಿತ್ತು. ತಾರೆಗಳ ಹಾಡು- ಕುಣಿತದ ಮಾಯಾಲೋಕವೇ ಅಲ್ಲಿ ಸೃಷ್ಟಿಯಾಗಿತ್ತು. ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಅಭಿನಯದ ‘ಮೈಲಾರಿ’ ಚಲನಚಿತ್ರದ ಶತಮಾನೋತ್ಸವ ಸಮಾರಂಭ ಅದು. ನಿರ್ಮಾಪಕ ಶ್ರೀನಿವಾಸ ನಿರ್ಮಿಸಿದ, ಚಂದ್ರು ನಿರ್ದೇಶನದ ಈ ಚಿತ್ರ ನೂರು ದಿನ ಓಡಿದ ಸಂತಸಕ್ಕೆ ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಶತದಿನೋತ್ಸವ ನಡೆಯಿತು.

ಶಿವರಾಜಕುಮಾರರ 99ನೇ ಚಿತ್ರವು ಸೆಂಚುರಿ ಹೊಡೆದ ಈ ಸಂಭ್ರಮ ಸಂದರ್ಭವು ಶಿವಣ್ಣನ ಚಿತ್ರಗೀತೆಗಳ ರಸಮಂಜರಿಯಾಗಿ ಪರಿಣಮಿಸಿತು. ‘ಅಮ್ಮಾ ತಾಯೆ ಎಲ್ಲೆಲ್ಲೂ ನಿನ್ನ ಛಾಯೆ’ ಹಾಡಿಗೆ ಕಲಾವಿದರು ಹೆಜ್ಜೆ ಹಾಕುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಿನ್ನೆಲೆ ಗಾಯಕರಾದ ಚೇತನ, ಶಮಿತಾ, ಚೈತ್ರಾ ಅವರು ಕೆಲ ಗೀತೆಗಳನ್ನು ಹಾಡಿದರು. ನಂತರ ವೇದಿಕೆ ಆವರಿಸಿದ್ದು ಸಂಗೀತ ನಿರ್ದೇಶಕ ಗುರುಕಿರಣ. ‘ಎಲ್ಲೋ ಜೋಗಪ್ಪ ನಿನ್ನರಮನೆ’ ಹಾಡಿನೊಂದಿಗೆ ರಂಗ ಪ್ರವೇಶಿಸಿದ ಗುರುಕಿರಣ ಅವರು ಹಲವಾರು ಗೀತೆಗಳನ್ನು ಹಾಡುತ್ತ ಹೆಜ್ಜೆ ಹಾಕಿದರು.

ಸಾಕಷ್ಟು ಹೊತ್ತಿನಿಂದ ಚಿತ್ರರಸಿಕರನ್ನು ಕಾಯಿಸಿದ್ದ ಶಿವರಾಜಕುಮಾರ, ‘ಜಗ್ಗನಕ್ಕ ಜಗ್ಗನಕ್ಕ ಪಕ್ಕದಲ್ಲಿ ಬಾರಿಸೋದಕ್ಕ’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಂತೆಯೇ ಸಿಳ್ಳೆ, ಕೇಕೆಗಳು ಮೊಳಗಿದವು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯೊಂದಿಗೆ ತಮ್ಮ ಕುಟುಂಬದ ಒಡನಾಟವನ್ನು ಹಂಚಿಕೊಂಡರು. ಸಿದ್ಧಾರೂಢ ಮಠದಲ್ಲಿ ತಮ್ಮ ತಂದೆ-ತಾಯಿ ಜೀವನ ನಡೆಸಿದ್ದನ್ನೂ ಸ್ಮರಿಸಿಕೊಂಡರು.

ಶಿವಣ್ಣ ನಟಿಸಿದ ಹಲವಾರು ಚಿತ್ರಗಳ ಹಾಡು-ನೃತ್ಯ ಪ್ರದರ್ಶನ ವಿವಿಧ ಕಲಾವಿದರುಗಳಿಂದ ನಡೆಯಿತು. ಮತ್ತೆ ವೇದಿಕೆಗೆ ಬಂದ ಶಿವರಾಜಕುಮಾರ ‘ಸತ್ಯ ಇನ್ ಲವ್’ ಚಿತ್ರದ ‘ಸೆರೆಯಾದೆನು ಸರೆಯಾದೆನು ಕಣ್ಣಲ್ಲೆನೆ; ಮರೆಯಾದೆನು ಮರೆಯಾದೆನು ನಿನ್ನಲ್ಲೇನೆ’ ಹಾಡನ್ನು ಹಾಡಿ ಸಭಿಕರನ್ನು ರಂಜಿಸಿದರು. ಅಂತಿಮವಾಗಿ ಹುಬ್ಬಳ್ಳಿಯಲ್ಲೇ ಚಿತ್ರೀಕರಣಗೊಂಡ, ಡಾ. ರಾಜ್ ಅಭಿಯನಯದ ‘ಆಕಸ್ಮಿಕ’ ಚಿತ್ರದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು...’ ಹಾಡನ್ನು ಶಿವಣ್ಣ ಹಾಗೂ ಗುರುಕಿರಣ ಇಬ್ಬರೂ ಹಾಡಿ ಹೆಜ್ಜೆ ಹಾಕುವ ಮೂಲಕ ಸಂಗೀತ ಸಂಭ್ರಮಕ್ಕೆ ತೆರೆ ಎಳೆದರು.

‘ಮೈಲಾರಿ’ ಚಿತ್ರದ ನಾಯಕಿ ಸದಾ, ನಟರಾದ ಬುಲ್ಲೆಟ್ ಪ್ರಕಾಶ, ಮಂಗಳೂರು ಸುರೇಶ, ಬಿಜೆಪಿ ನಾಯಕ ಪ್ರದೀಪ ಶೆಟ್ಟರ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಅವರೂ ಮಾತನಾಡಿ, ಡಾ. ರಾಜ್ ಕುಟುಂಬದ ಕಲಾ ಸೇವೆಯನ್ನು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT