ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವತೀರ್ಥನ್ ಎಂಬ ಕವಿ ಮನುಷ್ಯ

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ವಿಶಿಷ್ಟವೆನ್ನಿಸುವಂತೆ ತೋರುವ ಹೆಸರುಗಳ ಬಗ್ಗೆ ನನಗೆ ಯಾವಾಗಲೂ ಕುತೂಹಲ. ಪಿ.ಯು.ಸಿ ಓದಲೆಂದು ಮೈಸೂರಿಗೆ ಬಂದ ಮೊದಲು, ಕನ್ನಡ ಸಾಹಿತ್ಯದ ಹಲವು ವಿಶಿಷ್ಟ ಹೆಸರುಗಳನ್ನು ಆ ಹೆಸರುಗಳ ವೈಶಿಷ್ಟ್ಯದ ಕಾರಣದಿಂದಾಗಿಯೇ ನನ್ನ ನೆನಪಿನಲ್ಲಿ ಅಚ್ಚಳಿಯದಂತೆ ಇರಿಸಿಕೊಂಡು, ಅವರ ಪುಸ್ತಕಗಳು ಲೈಬ್ರರಿಯಲ್ಲಿ ಕಂಡಾಗಲೆಲ್ಲ ಕೊನೆಯ ಪುಟದವರೆಗೂ ಬಿಡದೆ ಓದಿ ಮುಗಿಸುತ್ತಿದ್ದುದು ನೆನಪಾಗುತ್ತಿದೆ.

ಅಂತಹ ಹತ್ತು ಹಲವು ಹೆಸರುಗಳ ಪೈಕಿ ಲಂಕೇಶ್, ತೇಜಸ್ವಿ, ರಾಮದಾಸ್ ಮುಂತಾದ  ಹೆಸರುಗಳಿದ್ದವು. ಆ ಹೆಸರುಗಳ ನಡುವೆಯೇ ಇನ್ನೂ ವಿಶಿಷ್ಟವೆಂಬಂತೆ ಕಾಣುತ್ತಿದ್ದ ಹೆಸರೆಂದರೆ  `ಶಿವತೀರ್ಥನ್~ ಎಂಬುದು... ಅವರ ಹೆಸರಿನ ಹಾಗೆಯೇ ಅವರೂ ಕೂಡ ವಿಶಿಷ್ಟ ವ್ಯಕ್ತಿ ಎಂಬುದು ಅರಿವಿಗೆ ಬಂದಿದ್ದು ಆನಂತರ ಅವರೊಡನೆ ಒಡನಾಡಲು ತೊಡಗಿದ ಮೇಲೆಯೇ. 

 `ಶಿವತೀರ್ಥನ್~ ಎನ್ನುವ ವಿಶಿಷ್ಟ ಹೆಸರು ಅವರಿಗೆ ಬಂದದ್ದು ಹೇಗೆಂದು ಯೋಚಿಸಲು ಕುಳಿತ ಈ ಬರಹದ ಹೊತ್ತಿನಲ್ಲೂ ನನಗೆ ಉತ್ತರ ಸಿಕ್ಕದೆ ಗೊಂದಲವಾಯಿತು. ಯಾಕೆಂದರೆ `ಬೆಸ್ತ~, `ಗೆಂಡಗಯ್ಯ~ನಂತಹ ಕವಿತೆಗಳ ಮೂಲಕ ತಳಸಮುದಾಯವೊಂದರ ಸಾಂಸ್ಕೃತಿಕ ಚಹರೆಗಳನ್ನು ಕಟ್ಟಿಕೊಡುವ ಹಿನ್ನೆಲೆಯ ಕವಿಯಾಗಿರುವ ಶಿವತೀರ್ಥನ್ ಹೆಸರಿನ ಹಿನ್ನೆಲೆ ಏನಿರಬಹುದು ಎಂದು ತಿಣುಕಾಡುತ್ತಿರುವಾಗಲೇ ಸ್ನೇಹಿತರಾದ ಡಾ. ಎಂ.ಪಿ. ಪೂರ್ಣಾನಂದ ಅವರು ಶಿವತೀರ್ಥನ್ ಹೆಸರಿನ ಹಿಂದೆ ಇರುವ `ಕೆ.ನ~ ಎನ್ನುವ ಇನಿಶಿಯಲ್‌ನ ಬಗ್ಗೆ ಒಂದು ಆಸಕ್ತಿದಾಯಕ ಸಂಗತಿ ಹೇಳಿದರು.

  ಶಿವತೀರ್ಥನ್ ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಅಲ್ಲಿನ ಬೆಸ್ತಗೇರಿಯ ಮೀನವಾಸನೆಯ ನಡುವೆ ಬೆಳೆದ ಶಿವತೀರ್ಥನ್ ಅವರ ತಂದೆ ಕೆಂಪೀರಯ್ಯ ಆ ಕಾಲಕ್ಕಾಗಲೇ ಹಿರಿಯ ಆರೋಗ್ಯ ಅಧಿಕಾರಿಯಾಗಿದ್ದವರು.

ಕೆಂಪೀರಯ್ಯನ ತಮ್ಮ ನಂಜುಂಡಯ್ಯನವರಿಗೆ ಮಕ್ಕಳಿರಲಿಲ್ಲವಂತೆ; ಹಾಗಾಗಿ ತನ್ನ ಅಣ್ಣನ ಮಗ ಶಿವತೀರ್ಥನನ್ನು ದತ್ತು ಪಡೆದು ಅವರು ಸಾಕಿದರಂತೆ. ತಮ್ಮ ತಂದೆ ಹಾಗೂ ಸಾಕುತಂದೆಯ ಮೇಲಿನ ಪ್ರೀತಿಯಿಂದಾಗಿ ಶಿವತೀರ್ಥನ್ ತಮ್ಮ ಹೆಸರಿನ ಹಿಂದೆ `ಕೆ.ನ.~ ಎಂದು ಸೇರಿಸಿಕೊಂಡಿದ್ದರಂತೆ.

ಮೇಲ್ನೋಟಕ್ಕೆ ಕೊಂಚ ರಮ್ಯವಾಗಿಯೂ ಭಾವುಕವಾಗಿಯೂ ಕಾಣುವ ಶಿವತೀರ್ಥನ್ ಅವರ ಈ ಸ್ವಭಾವ, ಅವರು ಮಾತು ಕಳೆದುಕೊಂಡು ಹಾಸಿಗೆ ಹಿಡಿಯುವ ಕೊನೆಯವರೆಗೂ ಅವರಲ್ಲಿ ಚಿರಸ್ಥಾಯಿಯಾಗಿದ್ದುದನ್ನು ನಾನು ಕಂಡಿದ್ದೇನೆ.
  * * *
  ಶಿವತೀರ್ಥನ್ ಅವರ ಮೊದಲ ಕವನ ಸಂಕಲನ `ಬೆಸ್ತ~ ಪ್ರಕಟವಾಗಿದ್ದು 1979ರಲ್ಲಿ. 1989ರಲ್ಲಿ ಅವರ ಎರಡನೇ ಕವನ ಸಂಕಲನ `ಗೆರೆಗಳು~ ಪ್ರಕಟಗೊಂಡಿತ್ತು.

`ಬೆಸ್ತ~ ಕವನ ಸಂಕಲನಕ್ಕೆ ಪಿ.ಲಂಕೇಶ್ ಮುನ್ನುಡಿ ಬರೆದಿದ್ದರೆ, `ಗೆರೆಗಳು~ ಸಂಕಲನಕ್ಕೆ ಮುನ್ನುಡಿ ಬರೆದಿದ್ದವರು ಅಂದಿನ ಕ್ರಾಂತಿಕಾರಿ ಮನೋಭಾವನೆಯ ಚಿಂತಕರೆಂದೇ ಹೆಸರು ಮಾಡಿದ್ದ ಪೋಲಂಕಿ ರಾಮಮೂರ್ತಿ ಅವರು. ಶಿವತೀರ್ಥನ್ ಅವರ ಲೇಖನಗಳ ಪುಟ್ಟಪುಸ್ತಕ `ಒಳದನಿ~ (2000).

ಚದುರಂಗರ `ಅಲೆಗಳು~ ಕವನ ಸಂಕಲನಕ್ಕೆ ಬರೆದ ಮುನ್ನುಡಿಯೂ ಇರುವ ಈ ಕೃತಿಯಲ್ಲಿ ಯರ್ಮುಂಜ ರಾಮಚಂದ್ರರ ಕಾವ್ಯದ ಕುರಿತ `ಅಸಂಗತ ಸಾವಿನ ಜೊತೆ ಸಂವಾದ~ ಎಂಬ ಬರಹವನ್ನು ಬಿಟ್ಟರೆ ಉಳಿದವುಗಳೆಲ್ಲ ಸರಳ ವಿಶ್ಲೇಷಣೆಯ ಬರಹಗಳು.

ಅವರ `ಗೆಂಡಗಯ್ಯ~ ನೀಳ್ಗವಿತೆಯ ಕುರಿತಾದ ಬಹುಮುಖಿ ಚರ್ಚೆಗಳ `ಗೆಂಡಗಯ್ಯ: ಒಳವು~ ಕೃತಿಯನ್ನು ಡಾ.ಕೃಷ್ಣಮೂರ್ತಿ ಹನೂರು ಹಾಗೂ ಪ್ರೊ. ಎಸ್. ಶಿವಾಜಿ ಜೋಯಿಸ್ ಸಂಪಾದಿಸಿದ್ದಾರೆ. 
  * * *
  `ಬೆಸ್ತ~ ಕವನ ಸಂಕಲನ ಪ್ರಕಟಗೊಂಡದ್ದು ದಲಿತ-ಬಂಡಾಯದ ಸಂದರ್ಭದಲ್ಲಿ. ತನ್ನ ತೀವ್ರಸ್ತರದಲ್ಲಿ ಉಜ್ವಲಿಸುತ್ತಿದ್ದ ದಲಿತ-ಬಂಡಾಯದ ಕಾವ್ಯಸ್ಥಿತಿಯನ್ನು ಲಂಕೇಶರಂತಹ ಕ್ಷಣಕ್ಷಣದ ಅಕ್ಷರಮೋಹಿಗಳು ಅನುಮಾನಿಸುತ್ತಿದ್ದ, ಪರೀಕ್ಷಿಸುತ್ತಿದ್ದ ಕಾಲವದು.
 
ಅಂತಹ ಲಂಕೇಶರ ಒಡನಾಟದಲ್ಲಿದ್ದ, ಹಿಂದುಳಿದ ಸಮುದಾಯಗಳ ದುಮ್ಮಾನಗಳನ್ನು, ತಮ್ಮ ಪೂರ್ವಿಕರ ಸೊಲ್ಲುಗಳಿಂದ ಪಡೆದು ಬಂದಿದ್ದ ಶಿವತೀರ್ಥನ್ ಎಲ್ಲಾ ದಲಿತ-ಬಂಡಾಯದ ಕವಿಗಳಂತೆ ತಮ್ಮ ಕಾವ್ಯನಿರೂಪಣೆಯನ್ನು ಕಂಡುಕೊಳ್ಳುವ ಅನಿವಾರ್ಯತೆಯಲ್ಲಿ ಇದ್ದರಾದರೂ ಅವೆಲ್ಲವನ್ನೂ ಮೀರಿದ ವಿಶಿಷ್ಟ ಸಂವೇದನೆಯ ಮೂಲಕ ತಮ್ಮ ಕಾವ್ಯವನ್ನು ಅಭಿವ್ಯಕ್ತಿಸಲು ಪ್ರಯತ್ನಿಸುತ್ತಿದ್ದರು.
 
ಹಾಗೆ ದಲಿತ-ಬಂಡಾಯದ ಕಾವ್ಯಧೋರಣೆಯ ಮೈಕಟ್ಟನ್ನು ಪಡೆದೂ ವಿಶಿಷ್ಟ ಕಾವ್ಯವನ್ನು ಸೃಷ್ಟಿಸಿದವರಲ್ಲಿ ಅಂದಿನ ಆಲನಹಳ್ಳಿ ಕೃಷ್ಣ ಅವರೂ ಕೂಡ ಒಬ್ಬರು.

ಒಂದು ರೀತಿಯಲ್ಲಿ ಆಲನಹಳ್ಳಿ ಕೃಷ್ಣ ಅವರ ಕಾವ್ಯವೂ  ಶಿವತೀರ್ಥನ್ ಅವರ ಕಾವ್ಯವೂ ಒಂದೇ ಬಗೆಯ ಕನ್ನಡಿಗಳಲ್ಲಿ ಚಹರೆ ತಳೆದ ಕೃತಿಗಳು. ಆ ವೈಶಿಷ್ಟ್ಯ ಶಿವತೀರ್ಥನ್ ಅವರು ಕಂಡು ಬೆಳೆದ ಸಮುದಾಯದ ಒಟ್ಟು ನೋವಾಗಿಯೂ ವ್ಯಕ್ತಿಸಂಕಟವಾಗಿಯೂ ಒಟ್ಟೊಟ್ಟಿಗೆ ಪ್ರಕಟಗೊಂಡಿದೆ.

  ಅವರ `ಬೆಸ್ತ~, `ತುಡಿವ ಜೀವಗಳು~, `ಬೆಸ್ತನ ಕಾಣ್ಕೆ~ ಕವಿತೆಗಳು ಎಕ್ಕುಂಡಿಯವರ `ಮತ್ಸ್ಯಗಂಧಿ~ ಕವನಕ್ಕಿಂತಲೂ ಆಳದ ವೇದನೆ-ಸಂವೇದನೆಯನ್ನು ತಮ್ಮ ಸ್ವ-ನೆಲೆಗಳ ನಿಜದ ಮೂಲಕ ಪ್ರಕಟಪಡಿಸುವಂತಹವು.

ಮತ್ಸ್ಯಗಂಧಿಯರನ್ನು ಎಕ್ಕುಂಡಿ ಅವರ ಕಾವ್ಯ ನಿಂತು ನೋಡುವ ಉದಾರತೆಯಲ್ಲಿ ಕಂಡರೆ, ಶಿವತೀರ್ಥನ್ ಅವರ ಕಾವ್ಯನೋಟ ಮೀಂಗುಲಿಗರ ನೆಲದಿಂದಲೇ ಜಗತ್ತನ್ನು ಕಾಣುತ್ತದೆ. ಹಾಗಾಗಿಯೇ ಶಿವತೀರ್ಥನ್ ಅವರ ಕಾವ್ಯಕ್ಕೆ
 ಅತ್ತರಿನ ಕಂಪಿನಂತೆ ಗಾಳಿಯಲ್ಲಿ ಮೀನವಾಸನೆ ಗಮಗಮಾ
   ಬಯಲನ್ನೆ ಕಕ್ಕಸಾಗಿಸಿದ ಕುಕ್ಕಿರಿಸಿದ ಮೂಳೆ ಬಿಟಕೊಂಡ  
    ಕುಂಡೆಗಳು
   (ಬೆಸ್ತನ ಕಾಣ್ಕೆ)
  ಹಗಲ ಹೀರಿದ ಸಂಜೆ ಕೆಂಪೇರಿ
  ಬೆಳಗು ಮುಂಜಾವಿನಲೆ
  ಬಲೆಯನೊಡ್ಡಿದ ಬೆಸ್ತ
  ಖಾಲಿ ಬುಟ್ಟಿಯ ನಿಟ್ಟಿಸಿ
  ನಿಟ್ಟುಸಿರ ಬಿಟ್ಟ
  (ಬೆಸ್ತ)
  ಎಂದು  ಹೆಚ್ಚು ಸಹಜವಾಗಿ ಹೇಳಲು ಸಾಧ್ಯವಾಗುತ್ತದೆ.

  ನವ್ಯಕಾವ್ಯದ  ಶಬ್ದದ ಗೆರೆ ಕೊಯ್ಯುವ ಪ್ರಖರತೆ, ದಲಿತ-ಬಂಡಾಯದ ಧೋರಣಾತ್ಮಕ ನೆಲೆಗಳಲ್ಲಿ ತುಯ್ದಾಡುತ್ತಿದ್ದ ಕಾಲದಲ್ಲಿ ಕಾವ್ಯಕ್ಕೆ ತೆರೆದುಕೊಂಡ ಶಿವತೀರ್ಥನ್ ಬರೆದ ಕವಿತೆಗಳು ಕೆಲವೇ ಕೆಲವು. ಅವುಗಳಲ್ಲಿ ಅವರನ್ನು ಹೆಚ್ಚು ಚರ್ಚೆಗೆ ತಂದದ್ದು ಅವರ `ಗೆಂಡಗಯ್ಯ~ ಎಂಬ ನೀಳ್ಗವನ.
 
`ಗೆಂಡಗಯ್ಯ~ ಎಂಬ ಕುಲವ್ಯಕ್ತಿತ್ವವೊಂದನ್ನು ಸಮುದಾಯದ ರೂಪಕವಾಗಿ ಬೆಳೆಯಿಸುವ, ತನ್ನದೇ ಜನಾಂಗದ ಭಾಷೆಯ ಚೆಲುವಿನಲ್ಲಿ ಹಿಡಿಯಲು ಯತ್ನಿಸುವ ಕಥನವಾಗಿ ಈ ಕವಿತೆ ಹಬ್ಬಿದೆ. ತಮ್ಮ ಮೊದಲ ಸಂಕಲನ `ಬೆಸ್ತ~ದಲ್ಲಿ ಅವರು ಹುಡುಕಾಡಿದ ವ್ಯಕ್ತಿಯ ವಿವಿಧ ಚಹರೆಗಳು `ಗೆಂಡಗಯ್ಯ~ ಕಾವ್ಯದಲ್ಲಿ ಒಟ್ಟು ರೂಪಕವಾಗಿ ಮೂಡಿವೆ.

  ಗೆಂಡಗಯ್ಯನ ಒಟ್ಟು ಧ್ಯಾನವನ್ನು ಗಮನಿಸಿದರೆ ನನಗೆ  ಥಟ್ಟನೆ ನೆನಪಾಗುವುದು ಹಾರ್ನೆಸ್ಟ್  ಹೆಮಿಂಗ್ವೆಯ `ಓಲ್ಡ್ ಮ್ಯಾನ್ ಅಂಡ್ ದಿ  ಸೀ~ ಕಾದಂಬರಿ. ಹೆಮಿಂಗ್ವೇಯ ಕಾದಂಬರಿಯ ಕಥಾನಾಯಕನ  ತಬ್ಬಲಿತನ ಆತನ ವೈಯಕ್ತಿಕ ಸಂಕಟದಿಂದ  ಹುಟ್ಟಿದ್ದಾದರೆ, ಗೆಂಡಗಯ್ಯನ ಒಂಟಿತನ ಮತ್ತು ಸಂತಾನ ಸಮುದಾಯ ಪ್ರಜ್ಞೆಯಿಂದ  ಬಂದದ್ದು. ಹಾಗಾಗಿಯೇ ದಲಿತ-ಬಂಡಾಯದ ಸಂದರ್ಭದಲ್ಲಿ ಬಂದ ಈ ನೀಳ್ಗವನ ತನ್ನ ಅನನ್ಯತೆಯಿಂದಾಗಿಯೇ ವಿಶಿಷ್ಟವಾಗಿ ನಿಲ್ಲುವಂತಹುದ್ದು.

ಇಂತಹ ಸಮುದಾಯಪ್ರಜ್ಞೆಯ ಸಮಾಜವಾದಿ ಧೋರಣೆಯನ್ನೂ  ಮೀರಿ ಶಿವತೀರ್ಥನ್-
  ಮರದ ನೆರಳಲಿ ನಿಂತೆ
  ಮರಕೆ ನೆರಳಿನ ಚಿಂತೆ
  ಬಿರುಬಿಸಿಲಿಗೆ ಅರಳಿನಿಂತ
  ಗುಲ್‌ಮೊಹರ್ ಸಂತ
  ಕುಶಲವ ಕುಶಲವ
  ರಾಮನ ಕಂಗಳು
  ಸೀತೆಯ ಕುಡಿಗಳು
  ಎನಿತೋ ಅವ್ವ ಅಪ್ಪರ
  ಕಂದರು ಕುಶಲವ ಕುಶಲವಾ
ಎಂಬಂತಹ ಕಾಡುವ ಸಾಲುಗಳನ್ನು ಸೃಜಿಸಿದ ಕವಿ.
  * * *
  ಅವರ ಕಾವ್ಯ, ಸಾಹಿತ್ಯ ಎಲ್ಲವನ್ನೂ ಒಳಗೊಂಡೂ ಅವರ ವಿಶಿಷ್ಟ ವ್ಯಕ್ತಿತ್ವವನ್ನು ಧ್ಯಾನಿಸುವುದಾದರೆ ನನ್ನ ನೆನಪಿನ ಚೌಕಟ್ಟಿನೊಳಗೆ ಹತ್ತಾರು ನೆನಪುಗಳು ಬಂದು ನಿಲ್ಲುತ್ತವೆ.

ನಾಡಿನ ಬಹುತೇಕ ಪ್ರಗತಿಪರ ಚಳವಳಿಗಳೊಂದಿಗೆ ಒಡನಾಡಿದ, ಎಲ್ಲೇ ಜಾತ್ಯತೀತ, ಸಾಮಾಜಿಕ ಆಶಯದ, ಮಾನವೀಯ ಬದ್ಧತೆಯ ಕಾರ್ಯಕ್ರಮ ನಡೆದರೂ ತಮ್ಮ ತುಂಬುದೇಹವನ್ನು ಮೆಲ್ಲಗೆ ನಡೆಸುತ್ತಾ, ಸದಾ ತೆರೆದ ನಗುವಿನೊಂದಿಗೆ ಹಾಜರಾಗುತ್ತಿದ್ದ ಶಿವತೀರ್ಥನ್ ಅವರ ಚಿತ್ರವನ್ನು ಮೈಸೂರಿನ ಅನೇಕ  ಸಾಹಿತ್ಯಾಸಕ್ತರು, ಚಳವಳಿಗಾರರು ಮರೆತಿರಲಿಕ್ಕಿಲ್ಲ.

ಮೈಸೂರಿನಲ್ಲಿ ನಡೆಯುವ ಯಾವುದಾದರೂ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ, ಕೆ.ರಾಮದಾಸ್ ಇದ್ದಾರೆಂದರೆ ಅವರ ಅಕ್ಕಪಕ್ಕದಲ್ಲೆಲ್ಲೋ ಶಿವತೀರ್ಥನ್ ಇರುತ್ತಾರೆಂದೇ ಊಹೆ;

ಅದು ಯಾವಾಗಲೂ ನಿಜವಾಗಿರುತ್ತಿತ್ತು ಕೂಡ. ಅಂತಹ ಗಳಿಗೆಗಳಲ್ಲಿ ಗಂಭೀರ ಸನ್ನಿವೇಶವನ್ನೂ ವ್ಯಂಗ್ಯ, ಗೇಲಿ, ತಮಾಷೆಯೊಂದಿಗೆ ಹಗುರಗೊಳಿಸಿಬಿಡುತ್ತಿದ್ದ ಅವರ ದೊಡ್ಡ ನಗು ಈಗಲೂ ಕೇಳಿದಂತೆ ನೆನಪಾಗುತ್ತದೆ.  

 ಹೊಸ ಕಾಲದ ಕವಿಗಳ ಜೊತೆ ಕುಳಿತು ತಮ್ಮ ಯಾವುದಾದರೂ ಹೊಸ ಕವಿತೆಯ ಸಾಲುಗಳನ್ನು ಓದಲು ಬಯಸುತ್ತಿದ್ದ ಅವರ ಚಿತ್ರ ಈಗಲೂ ನನ್ನ ನೆನಪಿನಲ್ಲಿದೆ. ಅಂತಹ ಕವಿಗಳಲ್ಲಿ ಯಾರಾದರೂ ಅವರಿಗೆ ಇಷ್ಟವಾದರೆ ವೇದಿಕೆಯಲ್ಲೇ ಬಾಚಿ ತಬ್ಬಿಕೊಂಡು ಹಣೆಗೆ ಮುತ್ತಿಡುವ ತಕ್ಷಣದ ಭಾವುಕತೆ ಅವರದ್ದು.

ವಿಶ್ವವಿದ್ಯಾನಿಲಯದ  ಸಮ್ಮೇಳನವೊಂದರಲ್ಲಿ ನಾನು ನನ್ನ `ಸುಮಬ್ಯಾಲೆ~ ಎಂಬ ನೀಳ್ಗಾವ್ಯವನ್ನು ಓದಿದಾಗಲೂ ಅಂತಹುದೇ `ಕರಡಿಪ್ರೀತಿ~ಯನ್ನು ಪ್ರಕಟಿಸಿದ್ದರು.

ತೇಜಸ್ವಿ ತೀರಿಕೊಂಡ ಸಂದರ್ಭ. ನಾವೊಂದಿಷ್ಟು ಗೆಳೆಯರು ನಮ್ಮ ಅಂದಿನ `ಸಕಾಲ~ ಮಾಸಪತ್ರಿಕೆ ಹಾಗೂ `ಕನ್ನಡ ಟೈಮ್ಸ~ ವಾರಪತ್ರಿಕೆ ವತಿಯಿಂದ ತೇಜಸ್ವಿ ನೆನಪಿನ ಕಾರ್ಯಕ್ರಮವೊಂದನ್ನು ಮಾಡಿದ್ದೆವು. ಅಲ್ಲಿ ಅವರು ನಡೆದುಕೊಂಡ ನೇರನಡಾವಳಿಯೊಂದು ಈಗಲೂ ನೆನಪಿದೆ:

ಅಂದಿನ ಕಾರ್ಯಕ್ರಮದಲ್ಲಿ ತೇಜಸ್ವಿ ನೆನಪಿನ ಬ್ಯಾನರ್‌ಗೆ ಅಲ್ಲೇ ವೇದಿಕೆಯಲ್ಲಿದ್ದ ಯಾರೋ ಹೂವಿನ ಹಾರ ಇಡಲು ಹೋದಾಗ ಅಲ್ಲಿಯೇ ಇದ್ದ ಶಿವತೀರ್ಥನ್ ಸಿಟ್ಟಿಗೆದ್ದು ಕೂಗಾಡಿದ್ದರಲ್ಲದೆ, ಹೂವಿನ ಹಾರ ಇಡಲು ಸುತಾರಾಂ ಬಿಡಲಿಲ್ಲ;
 
ಅಷ್ಟಕ್ಕೇ ಸುಮ್ಮನಾಗದ ಅವರು ಕಾರ್ಯಕ್ರಮ ಆರಂಭವಾಗುವುದು ತಡವಾಗುತ್ತಿದ್ದರಿಂದ ಥೇಟ್ ತೇಜಸ್ವಿ ಸಿಡಿಮಿಡಿಗೊಳ್ಳುತ್ತಿದ್ದ ಹಾಗೆಯೇ `ನಿಮಗೆ ಟೈಮ್ ಸೆನ್ಸೇ ಇಲ್ಲ ಕಣ್ರೀ!~ ಎಂದು ನಮ್ಮನ್ನೆಲ್ಲ ಬೈದು ಕಾರ್ಯಕ್ರಮಕ್ಕೂ ಮುಂಚೆಯೇ ಸಭೆಯಿಂದ ಎದ್ದು ಹೊರನಡೆದುಬಿಟ್ಟರು.
 
ನಂತರ ನಮ್ಮ ಪ್ರೀತಿಗೆ ಮಣಿದು ನೇರ ವೇದಿಕೆಯನ್ನೇ ಏರಿ ಕುಳಿತುಬಿಟ್ಟಿದ್ದರು! ಒಂದೆರಡು ದಿನದ ನಂತರ ಸಿಕ್ಕಾಗ ಎಂದಿನ ಅಕ್ಕರೆಯಲ್ಲೇ ನಮ್ಮನ್ನು ಬರಸೆಳೆದು ಭುಜಕ್ಕೆ ಅದುಮಿಕೊಂಡು ಕೆನ್ನೆ ಹಿಂಡಿದ್ದರು.

ಆನಂತರ ರಾಮದಾಸ್ ಕೂಡ ತೀರಿಕೊಂಡರು. ಆ ದಿನಗಳಲ್ಲಿ ಶಿವತೀರ್ಥನ್ ಮಂಕಾಗಿದ್ದರೂ ಎಲ್ಲಾ ಪ್ರಗತಿಪರ ಚಳವಳಿಗಳಲ್ಲೂ ತಪ್ಪದೇ ಭಾಗವಹಿಸುತ್ತಿದ್ದರು; ರಾಮದಾಸ್ ಅವರ ಹೊಣೆಯನ್ನು ತಾವೇ ಹೊತ್ತವರಂತೆ. ಹಾಗೆಲ್ಲ ನಾವೊಂದಿಷ್ಟು ಹುಡುಗರು ರಾಮದಾಸ್ ನಂತರ ಮೈಸೂರು ಭಾಗದಲ್ಲಿ ಚಳವಳಿಯ ಕಾವನ್ನು ಬೆಚ್ಚಗಿಡುವವರು ಶಿವತೀರ್ಥನ್ ಅವರೇ ಆಗಿರುತ್ತಾರೆ ಎಂದು ಸಂಭ್ರಮಿಸಿದ್ದೆವು.

ಆದರೆ ಅದೆಲ್ಲ ನಿಜವೆನ್ನಿಸುವ ದಿನಗಳಲ್ಲೇ ಪಾರ್ಶ್ವವಾಯು ಅವರನ್ನು ಹಾಸಿಗೆ ಹಿಡಿಯುವಂತೆ ಮಾಡಿಬಿಟ್ಟಿತ್ತು. ಸತತ ನಾಲ್ಕು ವರ್ಷಗಳ ಕಾಲ ಅವರ ದೇಹವನ್ನು ಹಿಂಡಿಹಿಪ್ಪೆ ಮಾಡಿಬಿಟ್ಟಿತ್ತು.

ಅಷ್ಟೆಲ್ಲ  ತುಂಬು ಸಹಜತೆಯ, ಭಾವುಕ ಸ್ಪರ್ಶದ, ಅಬ್ಬರದ ನಗುವಿನ, ಮಹಾನ್ ತಮಾಷೆಯ ಶಿವತೀರ್ಥನ್, ನಾವು ಅವರನ್ನು ಹೋಗಿ ನೋಡುವ ವೇಳೆಗಾಗಲೇ ಗುರುತು ಹಿಡಿಯಲಾಗದಷ್ಟು ಕೃಶರಾಗಿದ್ದರು. ಮಾತು ನಿಂತುಹೋಗಿ ಬಲಗೈ ಸ್ವಾಧೀನ ತಪ್ಪಿತ್ತು. ಆದರೂ ತಮ್ಮೆಲ್ಲ ಒಡನಾಡಿಗಳನ್ನು ಕಂಡೊಡನೆಯೇ ಅವರ ಕಣ್ಣುಗಳಲ್ಲಿ ಸಂಭ್ರಮವೊಂದು ತುಳುಕಾಡುತ್ತಿತ್ತು.

ಅಲ್ಲಿ ಅವರ ಹಳೆಯ ನೆನಪುಗಳ ಚಿತ್ರಗಳು ಸರಿದಾಡುತ್ತಿದ್ದವೇನೋ? ಅಂತಹ ಹಳೆಯ ಕ್ಷಣಗಳನ್ನೆಲ್ಲ ಹಂಚಿಕೊಳ್ಳಬೇಕೆನ್ನಿಸಿದಾಗಲೆಲ್ಲ ಪಕ್ಕದಲ್ಲಿಯೇ ಇದ್ದ ಸ್ಲೇಟು-ಸೀಮೆಸುಣ್ಣವನ್ನು ಒಂದೇ ಕೈಯಲ್ಲಿ ತೆಗೆದುಕೊಂಡು ತಮಗೆ ಅನ್ನಿಸಿದ್ದನ್ನು ಬರೆಯುತ್ತಿದ್ದರು-ಒಂದನೇ ಕ್ಲಾಸಿನಲ್ಲಿದ್ದಾಗ ನಾವೆಲ್ಲ ಅಕ್ಷರ ತಿದ್ದುತ್ತಿದ್ದಂತೆ. ಹಾಗೆ ಒಮ್ಮೆ ಅವರನ್ನು ನೋಡಲೆಂದು ಹೋದಾಗ ಅವರು ಸ್ಲೇಟಿನಲ್ಲಿ ಬರೆದು ನನ್ನನ್ನು ಕೇಳಿದ ಪ್ರಶ್ನೆ: `ಹೊಸ ಕಥೆ ಬರೆದ್ರಾ?~


ಅಂತಹ ದೇಹಸ್ಥಿತಿಯಲ್ಲೂ ಅವರು ಅಕ್ಷರಮೋಹಿಯಾಗಿದ್ದರೆಂಬ ಆ ಕ್ಷಣವನ್ನು ನೆನೆದರೆ ಈಗಲೂ ಅವರಂತೆಯೇ ನಾನೂ ಭಾವುಕನಾಗಿಬಿಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT