ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನ ಸೋಜಿಗವ ಕಾಣಿರೇ...

Last Updated 11 ಸೆಪ್ಟೆಂಬರ್ 2011, 5:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತನ್ನ ಆವರಣವನ್ನು ಶುಚಿಯಾಗಿಡುವುದಕ್ಕೆ ನಗರದ ಡಾ. ಆರ್.ಬಿ. ಪಾಟೀಲ ಆಸ್ಪತ್ರೆ ಇದೀಗ ದೇವರ ಮೊರೆ ಹೋಗಿದೆ.

ಹೌದು. ಚಿಕಿತ್ಸೆಗೆಂದು ಎಲ್ಲೆಲ್ಲಿಂದಲೋ ರೋಗಿಗಳು ಇಲ್ಲಿಗೆ ಬರುತ್ತಿದ್ದರೆ, ಆಸ್ಪತ್ರೆ ಮಾತ್ರ ತನ್ನ ಆವರಣದ  ಸ್ವಾಸ್ಥ್ಯ ರಕ್ಷಣೆಗಾಗಿ ಶಿವನಿಗೆ ಮೊರೆ ಇಟ್ಟಿದೆ.

ಆಸ್ಪತ್ರೆಯ ಕಾಂಪೌಂಡ್ ಮೂಲೆಯು ಸಾರ್ವಜನಿಕ ಶೌಚಾಲಯ ರೂಪ ಪಡೆಯುತ್ತಿರುವುದನ್ನು ಗಮನಿಸಿದ ಆಸ್ಪತ್ರೆಯವರು, ಅದನ್ನು ಶುಚಿಯಾಗಿಟ್ಟುಕೊಳ್ಳಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಕಳೆದ ಎರಡು ಮೂರು ವರ್ಷಗಳಲ್ಲಿ ಕಾಂಪೌಂಡ್ ಲೆಕ್ಕವಿಲ್ಲಷ್ಟು ಬಾರಿ ಸುಣ್ಣ-ಬಣ್ಣ ಕಂಡಿದೆ. ಆದರೂ ಸುಣ್ಣ ಬಳಿದ ವಾರೊಪ್ಪೊತ್ತಿನಲ್ಲಿ ಅಲ್ಲಿ ಮತ್ತೆ ಮೂತ್ರದ ಚಿಂಗು; ಎಲೆ ಅಡಿಕೆಯ ಕೆಂಬಣ್ಣ! ಅತ್ತ ಸುಣ್ಣ ಬಳಿಯುವುದು; ಇತ್ತ ಮೂತ್ರ ವಿಸರ್ಜನೆಯೂ ನಡೆದೇ ಇತ್ತು.

`ಆಸ್ಪತ್ರೆಯ ಆವರಣದಲ್ಲಿ ಯಾರೂ ಉಗುಳಬಾರದು~, `ಗೋಡೆಯ ಬಳಿ ಮೂತ್ರ ವಿಸರ್ಜನೆ ಮಾಡಬಾರದು~ ಎಂದು ಬರೆಸಿದ ಗೋಡೆ ಬರಹದ ಜಾಗ ಬಿಟ್ಟರೆ, ಇನ್ನುಳಿದ ಜಾಗದಲ್ಲಿ ಮತ್ತದೇ ಚಿಂಗು ವಾಸನೆ!

ಮಳೆಗಾಲದಲ್ಲಂತೂ ವಿಪರೀತ ಕಿರಿಕಿರಿ ಎನಿಸುತ್ತಿದ್ದ ಈ ವಾಸನೆಗೆ ರೋಸಿ ಹೋಗುವಂತಾಗಿತ್ತು. ಬೈದು ಹೇಳಿದ ಬುದ್ಧಿಮಾತು ಫಲ ನೀಡದೇ ಹೋಯಿತು; ಎಚ್ಚರಿಕೆಯ ಗಂಟೆಯೂ ಕೆಲಸ ಮಾಡಲಿಲ್ಲ. ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಗದರಿಕೆಯ ದನಿಗೂ ಬಲ ಇಲ್ಲದಂತಾಯಿತು. ಈ ನಡುವೆ ಜನರು ಶೌಚಾಲಯವನ್ನಾಗಿ ಬಳಸಿಕೊಳ್ಳುತ್ತಿರುವ ಈ ಜಾಗಕ್ಕೆ ತಂತಿ ಬೇಲಿ ಹಾಕಲಾಯಿತು. ಒಂದೆರಡು ದಿನವಷ್ಟೇ, ನಂತರ ಬಾಯಿಯಿಂದ ಪಿಚಕ್ಕನೇ ಪಿಚಕಾರಿ ಬಿಟ್ಟವರು, ಪುಟ್ಟ ತಂತಿಯನ್ನು ದಾಟಿ ಗೋಡೆಗೆ ಮುಖ ಮಾಡಿ ಕುಳಿತವರೇ ಹೆಚ್ಚು!

ಗದರಿದರಿಲ್ಲ, ಬೈಯ್ದರಿಲ್ಲ.., ಯಾವುದಕ್ಕೂ ಬಗ್ಗುವುದಿಲ್ಲ ಎಂದು ಗೊತ್ತಾದಾಗ, ಕೊನೆ ಪ್ರಯತ್ನ ಎಂಬಂತೆ ಇದೀಗ ಆಸ್ಪತ್ರೆಯ ಆವರಣ ಗೋಡೆಯ ಮೂಲೆಯಲ್ಲಿ ಶಿವಲಿಂಗನನ್ನು ನಿರ್ಮಿಸಿದ್ದಾರೆ. ಪಕ್ಕದಲ್ಲಿ ತುಳಸಿ ಗಿಡದ ಕುಂಡವನ್ನೂ ಇಡಲಾಗಿದೆ. ಆ ಪ್ರಯತ್ನ ಫಲ ನೀಡುವಂತೆ ಕಾಣುತ್ತಿದೆ. ಕಳೆದ ಎರಡು ದಿನಗಳಿಂದ ಆ ಶಿವಲಿಂಗ ಪೂಜೆಗಾಣುತ್ತಿದೆ. ಇನ್ನೇನು ಶಿವ ಎದ್ದು ಬಂದೇ ಬಿಡುತ್ತಾನೆ ಎನ್ನುವ ತೆರದಲ್ಲಿ ಢಾಳಾಗಿ ಬಳಿದ ವಿಭೂತಿಯ ಮೂರು ಗೆರೆ ಆಸ್ಪತ್ರೆಗೆ ಬಂದು-ಹೋಗುವವರಲ್ಲಿ ಭಯ-ಭಕ್ತಿ ಮೂಡಿಸುತ್ತಿದೆ.

ಯಾವ ಜಾಗ ಮೂತ್ರ ವಿಸರ್ಜನೆಯ ತಾಣ ಎನಿಸಿತ್ತೋ ಈಗ ಅದೇ ಜಾಗದಲ್ಲಿ ಜನರು ಚಪ್ಪಲಿ ಬಿಟ್ಟು ನಿಂತು,  ಶಿವಲಿಂಗಕ್ಕೆ ನಮಸ್ಕರಿಸಿ ಆಸ್ಪತ್ರೆಯ ಒಳ ಹೋಗುತ್ತಾರೆ. ಬೈಕ್-ಕಾರಿನಲ್ಲಿ ಹೋಗುವವರೂ ಗಲ್ಲ ಬಡಿದುಕೊಂಡು ಮುಂದೆ ದಾಟುತ್ತಾರೆ. ಗೋಡೆಯ ಮೇಲೆ ಈಗ `ಎಚ್ಚರಿಕೆ! ಇಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ~ ಎಂಬ ಬರಹವಷ್ಟೇ ಇದೆ. ಗೋಡೆಗೆ ಈಗ ತುಸು ಹಾಯ್ ಎನಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT