ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಇಂದಿನಿಂದ ಫಲಪುಷ್ಪ ಪ್ರದರ್ಶನ

ಪ್ರತಿ ದಿನ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ
Last Updated 14 ಡಿಸೆಂಬರ್ 2013, 6:22 IST
ಅಕ್ಷರ ಗಾತ್ರ

ಶಿವಮೊಗ್ಗ: ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಉದ್ಯಾನ ಕಲಾ ಸಂಘ ಹಾಗೂ ಆತ್ಮ ಯೋಜನೆ ಸಂಯುಕ್ತವಾಗಿ ತೋಟಗಾರಿಕೆ ಫಲಪುಷ್ಪ ಪ್ರದರ್ಶನವನ್ನು ಡಿ.14ರಿಂದ 16ರವರೆಗೆ ನಗರದ ಮಹಾತ್ಮ ಗಾಂಧಿ ಉದ್ಯಾನದಲ್ಲಿನ ತೋಟಗಾರಿಕಾ ಇಲಾಖೆ ಹಾಗೂ ಡಾ.ಅಂಬೇಡ್ಕರ್ ಭವನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ.ಸಿಇಒ ಸಸಿಕಾಂತ್‌ ಸೆಂಥಿಲ್‌ ತಿಳಿಸಿದರು.

ಫಲಪುಷ್ಪ ಪ್ರದರ್ಶನವು ಪ್ರತಿ ದಿನ ಬೆಳಿಗ್ಗೆ 9ರಿಂದ ರಾತ್ರಿ 9ಗಂಟೆಯವರೆಗೆ ನಡೆಯಲಿದೆ. ಪ್ರವೇಶ ಶುಲ್ಕ ಮಕ್ಕಳಿಗೆ  `2 ಹಾಗೂ ದೊಡ್ಡವರಿಗೆ `5 ನಿಗದಿಪಡಿಸಲಾಗಿದೆ. ಪ್ರದರ್ಶನ ಪ್ರವೇಶ ದ್ವಾರ ಬಾಲರಾಜ್‌ ಅರಸ್‌ ರಸ್ತೆ (ಜೋಯಾಲುಕ್ಕಾಸ್) ಹಾಗೂ ನಿರ್ಗಮನ ಡಾ.ಅಂಬೇಡ್ಕರ್‌ ಭವನ ದ್ವಾರದಲ್ಲಿ ಏರ್ಪಡಿಸಲಾಗಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫಲಪುಷ್ಪ ಪ್ರದರ್ಶನವನ್ನು ಡಿ.14ರಂದು ಬೆಳಿಗ್ಗೆ 10.30ಕ್ಕೆ ಸಚಿವ ಕಿಮ್ಮನೆ ರತ್ನಾಕರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಸಕ ಕೆ.ಬಿ.ಪ್ರಸನ್ನಕುಮಾರ್ ವಹಿಸುವರು. ಸ್ವಸಹಾಯ ಸಂಘಗಳ ಮಳಿಗೆಗಳ ಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ವಿವಿಧ ಕರಕುಶಲ ಸಾಮಗ್ರಿಗಳು, ಆಟಿಕೆಗಳ ಮಳಿಗೆಗಳ ಉದ್ಘಾಟನೆಯನ್ನು ಸಂಸತ್‌ ಸದಸ್ಯ ಬಿ.ವೈ.ರಾಘವೇಂದ್ರ ನೆರವೇರಿಸುವರು ಎಂದು ಹೇಳಿದರು.

ಹಾಗೆಯೇ, ಹಣ್ಣು ಮತ್ತು ತರಕಾರಿ ಬೆಳೆಗಳ ಉಪಯುಕ್ತ ಮಾಹಿತಿ ಒಳಗೊಂಡ ‘ಆರೋಗ್ಯ ಸಿರಿ’ ಸ್ಮರಣ ಸಂಚಿಕೆಯನ್ನು ಶಾಸಕಿ ಶಾರದ ಪೂರ್‍್ಯಾನಾಯ್ಕ ಲೋಕಾರ್ಪಣೆ ಮಾಡುವರು. ವಿವಿಧ ಇಲಾಖೆಗಳ ಮಳಿಗೆಗಳನ್ನು ಜಿ.ಪಂ.ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್‌ ಉದ್ಘಾಟಿಸುವರು ಎಂದರು.

ಬೆಳಿಗ್ಗೆ 11ಕ್ಕೆ ಸ್ವ–ಸಹಾಯ ಗುಂಪುಗಳಿಗೆ ಹಾಗೂ ರೈತರಿಗೆ ‘ಆರೋಗ್ಯಕ್ಕಾಗಿ ತೋಟಗಾರಿಕೆ’ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಡಾ.ಅಂಬೇಡ್ಕರ್‌ ಭವನದಲ್ಲಿ ಏರ್ಪಡಿಸಲಾಗಿದೆ. ತಾರಸಿ ತೋಟಗಾರಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ನೆರವೇರಿಸುವರು ಎಂದರು.

ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ‘ಆರೋಗ್ಯಕ್ಕಾಗಿ ತೋಟಗಾರಿಕೆ’ ಎಂಬ ಧೋರಣೆ ಮೇಲೆ ಆಯೋಜಿಸಲಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟು ಹಮ್ಮಿಕೊಳ್ಳಲಾಗಿದೆ. ವಿವಿಧ ಜಾತಿಯ ಹೂವುಗಳಿಂದ ಅಲಂಕರಿಸಲ್ಪಟ್ಟ ಮಂಗಳ ಗ್ರಹಯಾನ, ಕಾಳಿಂಗ ಮರ್ದನ, ಜಲಕೃಷಿ, ವರ್ಟಿಕಲ್‌ ಗಾರ್ಡನ್‌, ವಿವಿಧ ರೀತಿಯ ತರಕಾರಿ, ಹಣ್ಣುಗಳ ಕಲಾತ್ಮಕ ಕೆತ್ತನೆಗಳು, ಬೊನಾಯ್ಸ್‌ ಗಳು, ಸ್ಥಳೀಯ ಹಾಗೂ ಹೊರ ರಾಜ್ಯಗಳಿಂದ ಸಂಗ್ರಹಿಸಲಾದ ಹೂವುಗಳ ಕಲಾತ್ಮಕ ಜೋಡಣೆಗಳು, ವಿವಿಧ ಬಗೆಯ ರಂಗೋಲಿಗಳು ಎಲ್ಲವೂ ಒಂದೇ ಸೂರಿನಡಿ ನೋಡಲು ಸಿಗುತ್ತವೆ ಎಂದರು.

ಹಾಗೆಯೇ, ವಿವಿಧ ಇಲಾಖೆ ಯೋಜನೆಗಳು, ವಿವಿಧ ಬಗೆಯ ಯಂತ್ರೋಪಕರಣಗಳು, ರಸಗೊಬ್ಬರ, ಕೀಟನಾಶಕಗಳು, ಹನಿ, ತುಂತುರು ನೀರಾವರಿ ವ್ಯವಸ್ಥೆಯ ಬಗ್ಗೆ ಮಾಹಿತಿಗಳು, ಬ್ಯಾಂಕ್‌ಗಳಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಪ್ರದರ್ಶನ ಮಳಿಗೆಗಳನ್ನು ಏರ್ಪಡಿಸಲಾಗಿದೆ. ಈ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವ ವಿವಿಧ ಕುಂಡಗಳು ಹಾಗೂ ಹೂವುಗಳನ್ನು ಮಾರಾಟ ಮಾಡಲು ಪ್ರತ್ಯೇಕ ಮಾರಾಟ ಮಳಿಗೆ ತೆರೆಯಲಾಗಿದೆ ಎಂದು ಹೇಳಿದರು.

ತೋಟಗಾರಿಕೆ ಉಪನಿರ್ದೇಶಕ ಡಾ.ಎಂ.ವಿಶ್ವನಾಥ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ.ಜೆ.ಕಾಂತರಾಜ್, ಜಿಲ್ಲಾ ಉದ್ಯಾನ ಕಲಾಸಂಘದ ಉಪಾಧ್ಯಕ್ಷ ಸಿದ್ದಪ್ಪ ಹರಳೆಣ್ಣೆಯವರ್, ಸಂಘದ ನಿರ್ದೇಶಕರಾದ ಕಡಿದಾಳು ಗೋಪಾಲ್, ಯಶೋಧಮ್ಮ, ಚಂದ್ರಕಲಾ, ಲೋಕೇಶ್ವರಿ ಚೋಳಕೆ, ಬಿ.ಡಿ.ಭೂಕಾಂತ್, ವೈ.ಆರ್‌ .ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT