ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ನಕ್ಸಲ್ ಪ್ಯಾಕೇಜ್ ವಿತರಣೆ

Last Updated 2 ಮೇ 2012, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಳೆದ ಮೇ 16ರಂದು ಶರಣಾಗತನಾಗಿದ್ದ ನಕ್ಸಲ್ ಕೋರನಕೋಟೆ ಕೃಷ್ಣನಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎ.ಆರ್. ಇನ್ಫ.ಂಟ್ ನಕ್ಸಲ್ ಕೊಡುಗೆ (ಪ್ಯಾಕೇಜ್) ಅಡಿ ವಿವಿಧ ಸೌಲಭ್ಯಗಳ ದಾಖಲೆ ಪತ್ರಗಳನ್ನು ಬುಧವಾರ ವಿತರಿಸಿದರು.

`ಶರಣಾಗುವುದೇ ಲೇಸು~
ಶಿವಮೊಗ್ಗ: `ಜೀವ ಭಯದಿಂದ ಕಾಡಲ್ಲಿ ಇರುವುದಕ್ಕಿಂತ ನಾಡಿನಲ್ಲಿ ಧೈರ್ಯದಿಂದ ಬದುಕುವುದು ಒಳ್ಳೆಯದು. ವಾಸ್ತವ ಅರಿತು, ಕಾಡು ಬಿಟ್ಟು ಹೊರಬನ್ನಿ; ಅಲ್ಲಿದ್ದು ಯಾವ ಸಾಧನೆ ಮಾಡಲು ಸಾಧ್ಯವಿಲ್ಲ~ 
-ಇದು ಸರ್ಕಾರದ ನಕ್ಸಲ್ ಪ್ಯಾಕೇಜ್ ಅಡಿ ವಿವಿಧ ಸೌಲಭ್ಯ ಪಡೆದ ಕೋರನಕೋಟೆ ಕೃಷ್ಣ  ಕಾಡಿನಲ್ಲಿರುವ ನಕ್ಸಲರಿಗೆ ಮಾಡಿದ ಮನವಿ.
`ಉದ್ದೇಶ, ಗುರಿ ಯಾವುದೂ ಇಲ್ಲದೆ ಕಾಡಿಗೆ ಸೇರಿದೆ. ನಕ್ಸಲ್ ತಂಡದಲ್ಲಿ ಒಂದು ವರ್ಷ ಒಂದು ತಿಂಗಳು ಇದ್ದೆ. ತಾಯಿ ತೀರಿಕೊಂಡರು. ಊರಿಗೆ ಹೋಗುತ್ತೇನೆ ಎಂದೆ; ಜತೆಗಿದ್ದವರು ಊರಿಗೆ ಹೋದರೆ ಪೊಲೀಸರ ಗುಂಡಿಗೆ ಬಲಿಯಾಗುತ್ತೀಯಾ ಎಂದು ಹೆದರಿಸಿದರು. ಮನಸ್ಸು ತಡೆಯಲಿಲ್ಲ. ಅಲ್ಲಿಂದ ಹೊರಬಂದೆ~ ಎಂದು ಕೃಷ್ಣ ಸುದ್ದಿಗಾರರಿಗೆ ತಿಳಿಸಿದ.
ಸರ್ಕಾರ, ಪ್ಯಾಕೇಜ್ ಘೋಷಣೆ ಮಾಡಿದ್ದು ಒಳ್ಳೆಯದು. ಇದರಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ನಕ್ಸಲರು ಪೊಲೀಸರಿಗೆ ಶರಣಾಗುವುದು ಒಳ್ಳೆಯದು ಎಂದರು.
ಈಗ ಊರಿಗೆ ನಕ್ಸಲರು ಬಂದು ತೊಂದರೆ ಕೊಡಬಹುದು; ಹಾಗಾಗಿ, ಶಿವಮೊಗ್ಗ ನಗರದಲ್ಲಿ ನೆಲೆಸಲು ನಿರ್ಧರಿಸಿದ್ದೇನೆ. ಸರ್ಕಾರ ನೀಡಿದ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇನೆ ಎಂದು ಹೇಳಿದರು.
ಪೊಲೀಸರು ನಿಮಗೆ ರಕ್ಷಣೆ ನೀಡುತ್ತಾರಾ ಎಂಬ ಪ್ರಶ್ನೆಗೆ `ಅವರು ಎಂತಹ ರಕ್ಷಣೆ ನೀಡುತ್ತಾರೆ; ನನ್ನ ಜೀವ ನಾನು ಕಾಪಾಡಿಕೊಳ್ಳಬೇಕು~ ಎಂದು ಅಭಿಪ್ರಾಯಪಟ್ಟರು.



ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೃಷ್ಣನಿಗೆ ಪ್ಯಾಕೇಜ್ ಅಡಿ ಒಂದು ವಾಸದ ಮನೆ, ರೂ 1ಲಕ್ಷ, 2 ಎಕರೆ ಜಮೀನು ನೀಡಲಾಯಿತು. ಅಲ್ಲದೇ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ರೂ 1 ಲಕ್ಷ ಸಾಲ ಮತ್ತು ಕೃಷ್ಣ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂದೆ ಪಡೆಯಲು ರಾಜ್ಯಮಟ್ಟದ ಸಮಿತಿಗೆ ಶಿಫಾರಸು ಮಾಡಲಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸೆಗೆ ಅವಕಾಶವಿಲ್ಲ; ಇದನ್ನು ನಕ್ಸಲೀಯರು ಅರಿತುಕೊಳ್ಳಬೇಕು. ದೇಶದ ಸಂವಿಧಾನ, ಕಾನೂನಿಗೆ ಬದ್ಧರಾಗಿ ನಡೆದುಕೊಳ್ಳಬೇಕು. ಹಿಂಸಾಚಾರ ಕೈಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಎ.ಆರ್. ಇನ್ಫಂಟ್ ಮನವಿ ಮಾಡಿದರು.

ನಕ್ಸಲೀಯರು ಶರಣಾಗತರಾಗಲು ಮುಂದಾದರೆ ಅವರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು, ಮುಂದಿನ ದಿನಗಳಲ್ಲಿ ಮತ್ತಷ್ಟು ನಕ್ಸಲೀಯರು ಶರಣಾಗುವ ನಿರೀಕ್ಷೆ ಇದೆ ಎಂದರು.

ನಕ್ಸಲ್ ನಿಗ್ರಹ ಪಡೆಯ ಐಜಿಪಿ ಅಲೋಕ್‌ಕುಮಾರ್ ಮಾತನಾಡಿ, ಕರ್ನಾಟಕದಲ್ಲಿ ಬೇರೆ ರಾಜ್ಯಗಳಲ್ಲಿ ಇದ್ದಂತಹ ಶೋಷಣೆಯಾಗಲಿ, ಆರ್ಥಿಕ-ಸಾಮಾಜಿಕ ಸ್ಥಿತಿಗತಿಗಳಲ್ಲಿ ಅಸಮಾನತೆಗಳಾಗಲಿ ಇಲ್ಲ. ಇದನ್ನು ನಕ್ಸಲೀಯರು ಮೊದಲು ಅರಿಯಬೇಕು ಎಂದರು.

ಬಹಳಷ್ಟು ನಕ್ಸಲೀಯರು ಶರಣಾಗತಿ ಬಯಸಿ, ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಇತ್ತೀಚೆಗೆ ಮುಜೆಕಾನಿನ ಯಶೋಧಾ ಅವರ ಮದುವೆ ನಡೆಯಿತು. ಹಾಗೆಯೇ, ಎನ್‌ಕೌಂಟರ್‌ನಲ್ಲಿ ಸಾವು ಕಂಡ ದಿನಕರನ ತಮ್ಮನ ಮದುವೆ ಸದ್ಯದಲ್ಲೇ ಹೆಬ್ರಿಯಲ್ಲಿ ನಡೆಯಲಿದೆ ಎಂದು ಉದಾಹರಣೆ ನೀಡಿದರು.

ಪೂರ್ವವಲಯ ಐಜಿಪಿ ಸಂಜಯ್ ಸಹಾಯ್ ಅಧ್ಯಕ್ಷತೆ ವಹಿಸಿದ್ದರು.  ರಾಜ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಡಾ.ಹರ್ಷವರ್ಧನ್ ರಾಜು, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮನ್ ಗುಪ್ತ, ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀರಂಗಯ್ಯ, ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT