ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಶಿಕ್ಷಕರಿಗೆ ಕರಾಟೆ ತಾಲೀಮು

Last Updated 25 ಸೆಪ್ಟೆಂಬರ್ 2013, 6:37 IST
ಅಕ್ಷರ ಗಾತ್ರ

ಶಿವಮೊಗ್ಗ: ಅಲ್ಲಿ ‘ಹಾ, ಹೂ...’ ಶಬ್ದ ಕೇಳಿಬರುತ್ತಿತ್ತು. ವಯಸ್ಸು 50 ದಾಟಿದವರೂ ದೈಹಿಕ ಕರಸತ್ತು ನಡೆಸುತ್ತಿದ್ದರು. ಗಂಡಸರು–ಹೆಂಗಸರು ಎನ್ನದೇ ಪಂಚಿಂಗ್‌, ಲಾಕ್‌ ಎಂದು ಹೇಳಿ ಕರಾಟೆ ಪಟ್ಟುಗಳನ್ನು ಹಾಕುತ್ತಿದ್ದರು.

ಇವರೆಲ್ಲ ದೈಹಿಕ ಶಿಕ್ಷಣ ಶಿಕ್ಷಕರು. ನಗರದ ಸ್ಕೌಟ್‌ ಭವನದಲ್ಲಿ ಕರಾಟೆ ತರಬೇತಿ ಪಡೆಯುತ್ತಿರುವ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಅಡಿ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರಿಗೆ ಸರ್ಕಾರ ಕರಾಟೆ ಕಲಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಗೆ
ಕರಾಟೆ ತರಬೇತಿ ನೀಡುವ ಕೆಲಸ ಭರದಿಂದ ಸಾಗಿದೆ.

ಇದೇ ಸೆಪ್ಟೆಂಬರ್‌ 30ರಿಂದ ಕಡ್ಡಾಯವಾಗಿ ಪ್ರತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕರಾಟೆ ತರಗತಿಗಳು ಆರಂಭವಾಗಲಿದ್ದು, ಇದಕ್ಕಾಗಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಜ್ಜುಗೊಳಿಸುವ ಕೆಲಸ ನಡೆದಿದೆ. ಬ್ಲ್ಯಾಕ್‌ಬೆಲ್ಟ್‌ ಹೊಂದಿದ ನುರಿತ ಕರಾಟೆ ತರಬೇತುದಾರರು ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 163 ಸರ್ಕಾರಿ ಶಾಲೆಗಳಿದ್ದು, ಪ್ರತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಕರಾಟೆ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಶಿವಮೊಗ್ಗ, ಭದ್ರಾವತಿ ತಾಲ್ಲೂಕಿನ ಶಿಕ್ಷಕರಿಗೆ ನಗರದ ಸ್ಕೌಟ್‌ ಭವನದಲ್ಲಿ ತರಬೇತಿ ನೀಡಲಾಗುತ್ತಿದ್ದು, ಸೊರಬ–ಶಿಕಾರಿಪುರ ತಾಲ್ಲೂಕಿನವರಿಗೆ ಶಿಕಾರಿಪುರದಲ್ಲಿ; ತೀರ್ಥಹಳ್ಳಿ–ಹೊಸನಗರದವರಿಗೆ ತೀರ್ಥಹಳ್ಳಿಯಲ್ಲಿ. ಸಾಗರದವರಿಗೆ ಸಾಗರ ನಗರದಲ್ಲೇ ಕರಾಟೆ ತರಬೇತಿ ಸಿಗುತ್ತಿದೆ.

ಒಟ್ಟು ತರಬೇತಿ ಅವಧಿ 12 ದಿವಸದ್ದಾಗಿದ್ದು, ಈಗಾಗಲೇ ಎಂಟು ದಿವಸ ಕಳೆದಿದೆ. 30 ಗಂಟೆಯ ಕೋರ್ಸ್‌ನ್ನು ಇಷ್ಟು ದಿವಸದ ಒಳಗೆ ಮುಗಿಸಬೇಕಾಗಿದೆ. ಶಿಕ್ಷಕರು ವಯಸ್ಸಿನ ಹಂಗಿಲ್ಲದೆ ಕರಾಟೆ ಪಟ್ಟುಗಳನ್ನು ಕಲಿಯುತ್ತಿದ್ದಾರೆ ಎನ್ನುತ್ತಾರೆ ಬ್ಲ್ಯಾಕ್ ಬೆಲ್ಟ್ ಕರಾಟೆ ತರಬೇತುದಾರ ಚಂದ್ರಕಾಂತ್‌.

ಕರಾಟೆ ಅಭ್ಯಾಸ ಪ್ರತಿಯೊಬ್ಬರಿಗೂ ಇರಬೇಕು. ಅದರಲ್ಲೂ ಹೆಣ್ಣುಮಕ್ಕಳಿಗೆ ಈ ಬಗ್ಗೆ ಅರಿವು ಇರಬೇಕು. ಆತ್ಮರಕ್ಷಣೆಯ ಸಾಧನವಾಗಿ ಕರಾಟೆಯ ಪ್ರಾಥಮಿಕ ಪಾಠಗಳನ್ನು ಕಲಿತಿರಬೇಕು ಎನ್ನುತ್ತಾರೆ ಅವರು.
ಜಿಲ್ಲೆಯಲ್ಲಿ 8, 9 ಮತ್ತು 10ನೇ ತರಗತಿಗಳಿಂದ ಒಟ್ಟು 18ಸಾವಿರ ಹೆಣ್ಣುಮಕ್ಕಳಿಗೆ ಕರಾಟೆ ಕಲಿಸಲಾಗುತ್ತದೆ.

ಕರಾಟೆಯನ್ನು ದೈಹಿಕ ಶಿಕ್ಷಣದ ಒಂದು ಭಾಗವಾಗಿ ಮಾಡುವ ಉದ್ದೇಶದಿಂದ ವಾರಕ್ಕೆ ಎರಡು ಗಂಟೆ ಬಳಸಿಕೊಂಡು ತರಬೇತಿ ನೀಡಲು ಶಾಲಾ ವೇಳಾಪಟ್ಟಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ಸರ್ವ ಶಿಕ್ಷಣ ಅಭಿಯಾನ ನಿರ್ದೇಶಕ ಬಿ.ಗಣಪತಿ.

‘ಮಲೆನಾಡಿನಲ್ಲಿ ಹೆಣ್ಣುಮಕ್ಕಳು ಶಾಲೆಗಳಿಗೆ ಎರಡ್ನೂರು ಕಿ.ಮೀ. ಕಾಡು ದಾರಿಯಲ್ಲೇ ಬರಬೇಕು. ಅಲ್ಲಿ ಕೀಟಲೆಕೋರರ ಕಾಟ ಜಾಸ್ತಿ. ಅಂತಹವರಿಗೆ ಆತ್ಮರಕ್ಷಣೆಗೆ ಕರಾಟೆ ನೆರವಿಗೆ ಬರುತ್ತದೆ’ ಎನ್ನುತ್ತಾರೆ ಶಿವಮೊಗ್ಗ ತಾಲ್ಲೂಕು ಸಿರಿಗೆರೆ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸುಶೀಲಮ್ಮ.

‘ಕರಾಟೆ ತರಬೇತಿ ನೀಡುತ್ತಿರುವುದು ನಮಗೆ ಬಹಳ ಅನುಕೂಲವಾಗಿದೆ. ವಿದ್ಯಾರ್ಥಿನಿಯರಿಗೆ ಇದು ನಿಜಕ್ಕೂ ವರದಾನವಾಗುತ್ತದೆ. ಕರಾಟೆ ಕಲಿಯುವುದರಿಂದ ಕೇವಲ ದೈಹಿಕ ಸಾಮರ್ಥ್ಯ ಹೆಚ್ಚುವುದಷ್ಟೇ ಅಲ್ಲ  ಪ್ರತಿಕೂಲ ಸಂದರ್ಭದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇದು ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಡುತ್ತಾರೆ ಭದ್ರಾವತಿ ಸಂಚಿ ಹೊನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕಿ ಎಚ್‌.ಜಿ.ಶಶಿಕಲಾ.
‘ನಾವು ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರಿಂದ ಪ್ರತಿ ನಿತ್ಯ ದೈಹಿಕ ಕಸರತ್ತು ನಡೆಸುತ್ತೇವೆ.

ಹಾಗಾಗಿ ವಯಸ್ಸಾದರೂ ಈಗ ಕರಾಟೆ ಕಲಿಯುವುದು ಕಷ್ಟವಾಗುತ್ತಿಲ್ಲ. ಇದರಿಂದ ನಮ್ಮ ಆರೋಗ್ಯವೂ ಸುಧಾರಿಸುತ್ತದೆ’ ಎನ್ನುತ್ತಾರೆ ಶಿವಮೊಗ್ಗ ತಾಲ್ಲೂಕು ಕೊಮ್ಮನಾಳ್‌ ಪ್ರೌಢಶಾಲೆ ಶಿಕ್ಷಕ ನರಸೋಜಿರಾವ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT