ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿ ಮಹಾರಾಜರ ಚರಿತ್ರೆಯ `ಶಿವಗರ್ಜನೆ...'

Last Updated 24 ಡಿಸೆಂಬರ್ 2012, 8:54 IST
ಅಕ್ಷರ ಗಾತ್ರ

ಬೆಳಗಾವಿ: `ಹಿಂದವಿ ಸ್ವರಾಜ್ಯ ನಿರ್ಮಾಣ ವ್ಹಾವೆ, ಹೀಚ್ ಶ್ರೀಂಚಿ ಇಚ್ಛಾ' ಎಂದು ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯದ ಶಪಥ ಮಾಡುತ್ತಿದ್ದಂತೆ `ಹರ ಹರ ಮಹಾದೇವ' ಎಂಬ ಘೋಷವಾಕ್ಯಗಳು ಮೊಳಗುತ್ತವೆ. ಸೈನಿಕರ ಖಡ್ಗಗಳು ಝಳಪಿಸುತ್ತವೆ.

ಇದು ಇಲ್ಲಿನ ಸಿಪಿಇಡಿ ಕಾಲೇಜಿನ ಮೈದಾನದಲ್ಲಿ ಭವ್ಯ ವೇದಿಕೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ `ಶಿವಗರ್ಜನೆ' ನಾಟಕದಲ್ಲಿ ಕಂಡು ಬರುವ ದೃಶ್ಯ. ಶಿವಾಜಿ ಮಹಾರಾಜರ `ಹಿಂದೂ ಸಾಮ್ರಾಜ್ಯ ನಿರ್ಮಾಣ ಆಗಬೇಕೆಂಬುದು ಮಹಾದೇವರ ಇಚ್ಛೆ ಆಗಿದೆ' ಎಂಬ ಘೋಷಣೆ ಕೇಳುತ್ತಿದ್ದಂತೆ ಪ್ರೇಕ್ಷಕರು ರೋಮಾಂಚನಗೊಳ್ಳುತ್ತಾರೆ. ಘೋಷಣೆಗೆ ತಕ್ಕಂತೆ ಹಿನ್ನೆಲೆ ಸಂಗೀತ ಹಾಗೂ ಸ್ಪೇಶಲ್ ಎಫೆಕ್ಟ್ ನೋಡುಗರನ್ನು ಹಿಡಿದಿಡುತ್ತದೆ.

ಪುಣೆಯ ಮಾನವ ವಿಕಾಸ ಪ್ರತಿಷ್ಠಾನ ಈ ಮಹಾನ್ ನಾಟಕವನ್ನು ನಿರ್ಮಿಸಿದೆ. ಇದೇ 14ರಿಂದ ಆರಂಭವಾಗಿರುವ ಈ ನಾಟಕದ ಪ್ರದರ್ಶನ ಇದೇ 30ರ ವರೆಗೆ ನಿತ್ಯ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ. ಮೂರು ತಾಸುಗಳ ನಾಟಕ ಪ್ರದರ್ಶನವು ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನೇ ಕಣ್ಣೆದುರು ತಂದಿಡುತ್ತದೆ.

500 ನುರಿತ ಕಲಾವಿದರು, 71 ಅಡಿ ಅಗಲವಾದ ಭವ್ಯ ವೇದಿಕೆ ಮೇಲೆ ಹಾಗೂ 8,000 ಚದರ ಅಡಿ ತಿರುಗುವ ರಂಗಭೂಮಿಯ ಮೇಲೆ ನಾಟಕ ಪ್ರದರ್ಶನಗೊಳ್ಳುತ್ತದೆ. ಒಂದು ಆನೆ, 10 ಕುದುರೆ ಹಾಗೂ ಆರು ಒಂಟೆಗಳನ್ನು ನಾಟಕದಲ್ಲಿ ಕಾಣಿಸಿಕೊಳ್ಳುತ್ತವೆ. ಶಿವಕಾಲಿನ ಯುದ್ಧದ ಪ್ರಸಂಗಗಳು, ರೋಮಾಂಚನಕಾರಿ ಘಟನಾವಳಿಗಳು, ಶಿವಾಜಿ ಮಹಾರಾಜರ ಜೀವನ ಇತಿಹಾಸವನ್ನು ನೆನಪಿಸಿ ಕೊಡುವ ಪ್ರಸಂಗಗಳು ಹಿಡಿದಿಡುತ್ತವೆ.

ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುವ, ಮನಸೂರೆಗೊಳಿಸುವ ದೃಶ್ಯಾವಳಿಗಳು, ಸಂಗೀತ, ವೇಷಭೂಷಣ, ನೃತ್ಯ ಈ ನಾಟಕದ ವೈಶಿಷ್ಟಗಳು.

ಅಲ್ಲಾವುದ್ದೀನ್ ಖಿಲಜಿ ಆಕ್ರಮಣ, ಲಖೋಜಿರಾಜರ ಹತ್ಯೆ, ಶಿವಾಜಿ ಜನ್ಮ, ಯುದ್ಧ ಕಲೆ ಮತ್ತು ರಾಜ್ಯಭಾರದ ಶಿಕ್ಷಣ, ಸ್ವರಾಜ್ಯದ ಶಪಥ, ಅಫಜಲ್‌ಖಾನ್ ವಧೆ, ಪನ್ಹಾಳಗಡ , ಪಾವನಖಿಂಡ ಶೌರ್ಯಗಾಥೆ, ಶಾಹಿಸ್ತೇಖಾನ್ ಫಜೀತಿ, ಸೂರತ್ ಲೂಟಿ, ಮುರಾರಬಾಜಿ ಅವರ ಶೌರ್ಯ, ತಾನಾಜಿ ಮಾಲಸುರೆ ಬಲಿದಾನ ಮತ್ತು ಹಿಂದವಿ ಸ್ವರಾಜ್ಯ ಸಂಸ್ಥಾಪಕ ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ದೃಶ್ಯ ಸೇರಿದಂತೆ ಅನೇಕ ಘಟನೆಗಳನ್ನು ನಾಟಕದಲ್ಲಿ ಪ್ರದರ್ಶಿಸಲಾಗುತ್ತಿದೆ.

ನಾಟಕವನ್ನು ಇಂದ್ರಜೀತ ಸಾವಂತ್ ಬರೆದಿದ್ದು, ಹಿಮ್ಮತ್ ಪಾಟೀಲ ನಿರ್ಮಿಸಿದ್ದಾರೆ. ಸ್ವಪ್ನಿಲ್ ಯಾದವ್ ನಿರ್ದೆಶಿಸಿದ್ದು, ಹರ್ಷಲ್ ಸುರ್ವೆ ಛತ್ರಪತಿ ಶಿವಾಜಿ ಪಾತ್ರದಲ್ಲಿ ಹಾಗೂ ದೀಪಾಲಿ ಹಂಡೆ ಜೀಜಾಮಾತಾ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಅಫಜಲ್‌ಖಾನ್ ವಧೆ ನಾಟಕದ ಮುಖ್ಯ ಆಕರ್ಷಣೆಯಾಗಿದೆ. ಮೊಘಲ್ ದೊರೆಗಳ ವಿರುದ್ಧ ಸಾರುವ ಯುದ್ಧಗಳಿಗೆ ರಂಗಭೂಮಿ ರಣರಂಗವಾಗಿ ಪರಿಣಮಿಸುತ್ತದೆ.

`ನನ್ನ 360 ಕೋಟೆಗಳಲ್ಲಿ (ಕಿಲ್ಲಾ) ಒಂದು ವರ್ಷದವರೆಗೆ ಯುದ್ಧ ಮಾಡುವಷ್ಟು ಆಯುಧಗಳು, ಶಸ್ತ್ರಾಸ್ತ್ರಗಳು, ಆಹಾರಧಾನ್ಯ  ಸಂಗ್ರಹವಿದೆ. ಮೊಘಲರು ನಮ್ಮ ವಿರುದ್ಧ ಯುದ್ಧಕ್ಕೆ ಬಂದರೆ ನನ್ನ ಇಡೀ ಸಾಮ್ರಾಜ್ಯ ವಶಕ್ಕೆ ತೆಗೆದುಕೊಳ್ಳಲು ಅವರಿಗೆ 360 ವರ್ಷಗಳು ಬೇಕಾಗುತ್ತದೆ. ಅಲ್ಲಿಯವರೆಗೆ ಇವರ‌್ಯಾರೂ ಬದುಕಿರುವುದಿಲ್ಲ' ಎಂದು ಶಿವಾಜಿ ಪಾತ್ರಧಾರಿಯ `ಡೈಲಾಗ್' ಸಭಿಕರಲ್ಲಿ ರೋಮಾಂಚನ ಹುಟ್ಟಿಸುತ್ತದೆ.

ಪ್ರತಾಪಗಡದಲ್ಲಿ ಅಫಜಲಖಾನ್ ಹಾಗೂ ಶಿವಾಜಿ ಭೇಟಿ ದೃಶ್ಯವು ಆಕರ್ಷಿಸುತ್ತದೆ. ಅಫಜಲ್‌ನು ಬಿಗಿ ಅಪ್ಪುಗೆಯಿಂದ ಶಿವಾಜಿಯನ್ನು ಹಿಡಿದು ಬೆನ್ನಿಗೆ ಚೂರಿ ಹಾಕುವ ದೃಶ್ಯವು ನಿರ್ದೇಶಕರ ಜಾಣ್ಮೆಯನ್ನು ತೋರಿಸುತ್ತದೆ.

`ಬಹಳ ಕಷ್ಟಪಟ್ಟು, ಶ್ರಮದಿಂದ ಈ ನಾಟಕ ತಯಾರಿಸಿದ್ದೇವೆ. ಎಲ್ಲ ಪಾತ್ರಧಾರಿಗಳು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. 500   ಕಲಾವಿದರನ್ನು ಸೇರಿಸಿಕೊಂಡು ನಾಟಕ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ಆದರೆ ಈಗ ಇದಕ್ಕಿಂತ ದೊಡ್ಡ ಪ್ರೊಡಕ್ಷನ್ ಮಾಡಬಹುದು ಎಂದೆನಿಸುತ್ತದೆ' ಎನ್ನುತ್ತಾರೆ ನಿರ್ದೇಶಕ ಸ್ವಪ್ನಿಲ್ ಯಾದವ್.

`ನಾಟಕ ಆರಂಭವಾದ ಎರಡ್ಮೂರು ದಿನಗಳವರೆಗೆ ಪ್ರೇಕ್ಷಕರ ಕೊರತೆ ಇತ್ತು. ಆದರೆ ಈಗ ಬೆಳಗಾವಿಯ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕರ್ನಾಟಕದ ಇತರೆ ಭಾಗಗಳಲ್ಲೂ ಈ ನಾಟಕ ಪ್ರದರ್ಶಿಸುವ ಉದ್ದೇಶವಿದೆ' ಎಂದು ಹೇಳುತ್ತಾರೆ ಯಾದವ್.

`ನಾವು ಶಿವಾಜಿ ಮಹಾರಾಜರ ಚರಿತ್ರೆ ಕೇಳಿದ್ದೇವೆ. ಆದರೆ ಈ ನಾಟಕದಿಂದ ಶಿವಾಜಿ ಮಾಹಾರಾಜರನ್ನು ಜೀವಂತ ವಾಗಿ ನೋಡಿದಷ್ಟು ಆನಂದ ಆಗಿದೆ. ಹಿಂದೂ ಸಾಮ್ರಾಜ್ಯದ ಸಂಸ್ಥಾಪಕ ರಾಗಿರುವ ಅವರು, ಸಮಸ್ತ ಭಾರತೀಯರ ಶಕ್ತಿ ಕೇಂದ್ರವಾಗಿದ್ದಾರೆ' ಎಂದು ನಾಟಕದ ಪ್ರೇಕ್ಷಕ ಅರುಣ ಸಾಳುಂಕೆ ಹೇಳಿದರು

. `ಶಿವಾಜಿ ಮಹಾರಾಜರ ಇಡೀ ಜೀವನ ಚರಿತ್ರೆ ಈ ನಾಟಕದಿಂದ ತಿಳಿದು ಬರುತ್ತದೆ. ಕಿತ್ತೂರು ರಾಣಿ ಚನ್ನಮ್ಮ ಸೇರಿದಂತೆ ಇತರೆ ಮಹಾನ್ ನಾಯಕರ ನಾಟಕಗಳು ಸಹ ಇದೇ ಮಾದರಿಯಲ್ಲಿ ಪ್ರದರ್ಶನಗೊಳ್ಳಬೇಕು' ಎನ್ನುತ್ತಾರೆ ನಾಟಕ ನೋಡಲು ಬಂದಿದ್ದ ಬಿ.ಬಿ. ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT