ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ಇನ್ನಷ್ಟು ಸುಧಾರಣ ಕ್ರಮ

ಹೆಚ್ಚಿನ ಉದ್ಯೋಗ ಸೃಷ್ಟಿ: ಪ್ರಧಾನಿ ಭರವಸೆ
Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ‘ಯುಪಿಎ’ ನೇತೃತ್ವದ ಕೇಂದ್ರ ಸರ್ಕಾರ ದೇಶವನ್ನು ಮೇಲ್ಮಟ್ಟದ ಪ್ರಗತಿಯ ಹಾದಿಗೆ ಕೊಂಡೊಯ್ದಿದೆ ಎಂದು ಪ್ರತಿಪಾದಿಸಿದ ಪ್ರಧಾನಿ ಮನಮೋಹನ್‌ ಸಿಂಗ್‌, ಶೀಘ್ರವೇ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿನ ಆಹಾರ ಪದಾರ್ಥಗಳು ಮತ್ತು ಇಂಧನ ಬೆಲೆಯಲ್ಲಿ ಏರಿಕೆ ಆಗಿದ್ದೇ ದೇಶದಲ್ಲಿನ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಂತರಾಷ್ಟ್ರೀಯ ಮಾರುಕಟ್ಟೆಯತ್ತ ಬೊಟ್ಟು ಮಾಡಿದರು.

ಅಗತ್ಯ ವಸ್ತುಗಳ ಬೆಲೆಗಳಲ್ಲಿ ಭಾರಿ ಏರಿಕೆಯಾಗಿದ್ದರ ಪರಿಣಾಮವೇ ಇತ್ತೀಚೆಗಿನ ಐದು ರಾಜ್ಯಗಳ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲುಂಟಾಯಿತು ಎಂದು ಅವರು ವಿಶ್ಲೇಷಿಸಿದರು.

ಆರ್ಥಿಕ ಸುಧಾರಣಾ ಕ್ರಮಗಳ ಜಾರಿಯನ್ನು ತಮ್ಮ ಸರ್ಕಾರ ಮುಂದುವರಿಸಲಿದೆ. ಹೆಚ್ಚಿನ ಪ್ರಮಾಣದಲ್ಲಿ ನೇರ ವಿದೇಶಿ ಹೂಡಿಕೆ  (ಎಫ್‌ಡಿಐ) ಆಕರ್ಷಿಸಲು ಸೂಕ್ತ ವಾತಾವರಣ ಮೂಡಿಸಲಿದೆ. ಉದ್ಯಮ ಕ್ಷೇತ್ರವನ್ನು ಇನ್ನಷ್ಟು ಉತ್ತೇಜಿಸಲಿದೆ. ತಯಾರಿಕೆ ಉದ್ಯಮ ವಲಯದಲ್ಲಿ ಅಧಿಕ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಿದೆ. ಆ ಮೂಲಕ ಬಡತನ ನಿರ್ಮೂಲನೆ ಮಾಡಲಿದೆ ಎಂದು ಭರವಸೆಯ ಮಾತುಗಳನ್ನು ಆಡಿದರು.

ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು ಪ್ರೋತ್ಸಾಹಿಸಲು ಇನ್ನಷ್ಟು ದೃಢವಾದ ಪ್ರಯತ್ನಗಳನ್ನು ಮಾಡಬೇಕಿದೆ. ಈ ಉದ್ಯಮ ವಲಯದಲ್ಲಿ ಬೆಳವಣಿಗೆ ಕಂಡುಬಂದರೆ ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹಣದುಬ್ಬರ ಚಿಂತೆ
ಹಣದುಬ್ಬರ ಕುರಿತು ಎಲ್ಲರ ಕಳವಳ ಸಕಾರಣವಾದುದೇ ಆಗಿದೆ. ಕೇಂದ್ರ ಸರ್ಕಾರವೂ ಈ ಬಗ್ಗೆ ಗಮನ ಕೇಂದ್ರೀಕರಿಸಿದೆ ಎಂದು ಹೇಳಿದ ಪ್ರಧಾನಿ, ಸಮಾಜದ ದುರ್ಬಲ ವರ್ಗದವರ ಹಿತಾಸಕ್ತಿ ರಕ್ಷಿಸಲು ಸರ್ಕಾರ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದೆ ಎಂದು ಹೇಳಿದರು.

ನವೆಂಬರ್‌ನಲ್ಲಿ ಒಂದೆಡೆ ಸಗಟು ಧಾರಣೆ ಆಧರಿಸಿದ ಹಣದುಬ್ಬರ ಶೇ 7.52ಕ್ಕೇರಿದ್ದರೆ, ಇನ್ನೊಂದೆಡೆ ಗ್ರಾಹಕ ಬಳಕೆ ವಸ್ತುಗಳ ಬೆಲೆ ಸೂಚ್ಯಂಕವೂ (ಸಿಪಿಐ) ಶೇ 11.24ಕ್ಕೆ ಜಿಗಿದಿತ್ತು ಎಂಬುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT