ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ಬಂಡವಾಳ ಸಂಗ್ರಹ ಮಸೂದೆ : ಸಚಿವ ವೀರಭದ್ರ ಸಿಂಗ್

Last Updated 16 ಫೆಬ್ರುವರಿ 2012, 20:00 IST
ಅಕ್ಷರ ಗಾತ್ರ

ಬೆಂಗಳೂರು: `ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಅನುಕೂಲವಾಗುವ ಉದ್ದೇಶದಿಂದ `ಸಾರ್ವಜನಿಕ ಬಂಡವಾಳ ಸಂಗ್ರಹಣಾ ಮಸೂದೆ~ ಯನ್ನು ಪಂಚ ರಾಜ್ಯಗಳ ಚುನಾವಣೆ ನಂತರ ಜಾರಿಗೆ ತರಲಾಗುವುದು~ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ವೀರಭದ್ರ ಸಿಂಗ್ ತಿಳಿಸಿದರು.

ನಗರದಲ್ಲಿ ಗುರುವಾರ ನಡೆದ `ಕ್ಲಿಕ್ಟ್ರೋನಿಕಾ-2012~ ವಿದ್ಯುನ್ಮಾನ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಕೇಂದ್ರ ಸ್ವಾಮ್ಯದ ಉದ್ದಮೆಗಳು ಹಾಗೂ ಸರ್ಕಾರಿ ಇಲಾಖೆಗಳ ಮೂಲಕ ಬಂಡವಾಳ ಸಂಗ್ರಹಣೆಯ ದೃಷ್ಟಿಯಿಂದ `ಸಾರ್ವಜನಕ ಬಂಡವಾಳ ಸಂಗ್ರಹಣಾ ಮಸೂದೆ~ ಯನ್ನು ರೂಪಿಸಲಾಗಿದೆ. ಮಸೂದೆಗೆ ಈಗಾಗಲೇ ಕೇಂದ್ರ ಸಚಿವ ಸಂಪುಟದ ಅಂಗೀಕಾರವೂ ದೊರೆತಿದೆ. ಸರ್ಕಾರದ ಎಲ್ಲ ಇಲಾಖೆಗಳೂ ಮಸೂದೆಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿವೆ. ಇದರಿಂದ ಕೇಂದ್ರ ಸ್ವಾಮ್ಯದ ಉದ್ದಿಮೆಗಳಿಗಷ್ಟೇ ಅಲ್ಲದೆ ರಾಜ್ಯ ಸರ್ಕಾರಗಳ ಉದ್ದಿಮೆಗಳಿಗೂ ಬಂಡವಾಳದ ಹರಿವು ಸಾಧ್ಯವಾಗಲಿದೆ~ ಎಂದರು.

`ಮುಂದಿನ ದಶಕಗಳಲ್ಲಿ ಭಾರತ ಜಗತ್ತಿನ ಮುಂದುವರೆದ ರಾಷ್ಟ್ರವಾಗಿ ಬೆಳೆಯಬೇಕಾದರೆ ದೇಶದಲ್ಲಿ ಎಲ್ಲ ಕ್ಷೇತ್ರಗಳ ಬೆಳವಣಿಗೆಯೂ ಅಗತ್ಯ. ಭಾರತದಲ್ಲಿ ಕೃಷಿಯನ್ನು ಬಿಟ್ಟರೆ ನಂತರದ ಬಹುದೊಡ್ಡ ಪ್ರಮಾಣದಲ್ಲಿ ಜನತೆ ಉದ್ಯೋಗದಲ್ಲಿ ತೊಡಗಿರುವ ಕ್ಷೇತ್ರ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆ. ಆದರೂ ನಿರೀಕ್ಷಿತ ಪ್ರಮಾಣದ ಆರ್ಥಿಕ ಕೊಡುಗೆ ಈ ಕ್ಷೇತ್ರದಿಂದ ಲಭ್ಯವಾಗುತ್ತಿಲ್ಲ. ಇದಕ್ಕೆ ಮಾನವ ಸಂಪನ್ಮೂಲದ ಅಸಮರ್ಪಕ ಬಳಕೆಯೇ ಕಾರಣ~ ಎಂದು ಅವರು ಅಭಿಪ್ರಾಯ ಪಟ್ಟರು.

`ವಾರ್ಷಿಕ ಒಂದು ಲಕ್ಷ ಕೋಟಿ ರೂ. ಆವರ್ತನೆಯಿರುವ ಸಣ್ಣ ಹಾಗೂ ಮಧ್ಯಮ ಉದ್ದಿಮೆಯ ಕ್ಷೇತ್ರದಲ್ಲಿ ಉತ್ತಮ ಕೌಶಲ್ಯವುಳ್ಳ ಮಾನವ ಸಂಪನ್ಮೂಲದ ಬಳಕೆಯ ಅಗತ್ಯವಿದೆ.

ಹೀಗಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರನ್ನು ಈ ಕ್ಷೇತ್ರಕ್ಕಾಗಿ ತರಬೇತುಗೊಳಿಸಬೇಕಿದೆ. 2022 ರ ವೇಳೆಗೆ 1.5 ಕೋಟಿ ಜನರಿಗೆ ತರಬೇತಿ ನೀಡುವ ಉದ್ದೇಶ ಸರ್ಕಾರದ್ದು. ರಾಜ್ಯ ಸರ್ಕಾರಗಳೂ ಈ ನಿಟ್ಟಿನಲ್ಲಿ ಕೇಂದ್ರದೊಂದಿಗೆ ಕೈ ಜೋಡಿಸಬೇಕು~ ಎಂದರು. `ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ವಿವಿಧ ಯೋಜನೆಗಳ ಮೂಲಕ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತಲೇ ಬಂದಿದೆ. ಒಂದು ಕೋಟಿ ರೂ. ಸಾಲ ಪಡೆಯುವ ಸಣ್ಣ ಪ್ರಮಾಣದ ಉದ್ದಿಮೆಗಳ ಇಂಧನ ಕ್ಷಮತೆ, ಕಾರ್ಯದಕ್ಷತೆ ಹಾಗೂ ಗುಣಮಟ್ಟದ ಆಧಾರದ ಮೇಲೆ ಸರ್ಕಾರ ಶೇಕಡಾ 15 ರಷ್ಟು ಸಬ್ಸಿಡಿ ನೀಡುತ್ತದೆ. ಸಣ್ಣ ಉದ್ದಿಮೆಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಪ್ರಧಾನ ಮಂತ್ರಿಗಳ ಉದ್ಯೋಗ ಆವರ್ತ ಯೋಜನೆಯಡಿ ಸಣ್ಣ ಪ್ರಮಾಣದ ಉದ್ದಿಮೆಗಳಿಗೆ ಆರ್ಥಿಕ ನೆರವು ನೀಡುವ ಚಿಂತನೆಗಳು ನಡೆದಿವೆ~ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಚ್.ಪಿ.ಕುಮಾರ್ ಮಾತನಾಡಿ, `ಒಟ್ಟು ಜಾಗತಿಕ ಉತ್ಪಾದನೆಯಲ್ಲಿ ವಿದ್ಯುನ್ಮಾನ ಕ್ಷೇತ್ರದ ಕೊಡುಗೆ ಹೆಚ್ಚಾಗಿದೆ. ಆದರೆ ಈ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆ ಕೇವಲ ಶೇಕಡಾ 0.7 ರಷ್ಟು ಮಾತ್ರ. ಈ ಅಂತರ ನಿವಾರಣೆಗಾಗಿ ಗ್ರಾಮೀಣ ಹಾಗೂ ಅರೆ ಪಟ್ಟಣ ಪ್ರದೇಶಗಳಿಗೂ ತಂತ್ರಜ್ಞಾನವನ್ನು ಪರಿಚಯಿಸುವ ಕೆಲಸ ಆಗಬೇಕು~ ಎಂದರು.

ಕೇಂದ್ರ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಇಲಾಖೆಯ ಅಭಿವೃದ್ಧಿ ಆಯುಕ್ತ ಅಮರೇಂದ್ರ ಸಿನ್ಹ ಮಾತನಾಡಿ, `ಪೆಟ್ರೋಲ್ ನಂತರ ಭಾರತಕ್ಕೆ ಅತಿಹೆಚ್ಚು ಆಮದಾಗುವ ಉತ್ಪನ್ನ ಎಲೆಕ್ಟ್ರಾನಿಕ್ ವಸ್ತುಗಳು. ಇರುವ ಸವಾಲುಗಳನ್ನು ಪರಿಹರಿಸಿಕೊಂಡು ದೇಶದಲ್ಲಿಯೇ ಎಲೆಕ್ಟ್ರಾನಿಕ್ ಉತ್ಪನ್ನಗಳ ಗುಣಮಟ್ಟದ ಉತ್ಪಾದನೆಯನ್ನು ಸಾಧಿಸಬೇಕು. ಈ ಕ್ಷೇತ್ರದಲ್ಲಿ ಹೊಸ ಅನ್ವೇಷಣೆಗಳ ಕಡೆಗೆ ಉದ್ದಿಮೆಗಳು ಗಮನ ಹರಿಬೇಕು~ ಎಂದು ಅವರು ಕರೆ ನೀಡಿದರು.

ಕೇಂದ್ರ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಆರ್.ಕೆ.ಮಾಥೂರ್, `ಕ್ಲಿಕ್~ ಸಂಘಟನೆಯ ಅಧ್ಯಕ್ಷೆ ಉಮಾ ರೆಡ್ಡಿ, ರುಗಾಂಡದ ಹೈ ಕಮಿಷನರ್ ವಿಲಿಯಮ್ಸ, ಬೆಂಗಳೂರು ವಿಶ್ವ ವ್ಯಾಪಾರಿ ಕೇಂದ್ರದ ಅಧ್ಯಕ್ಷ ಬಲರಾಮ ಮೆನನ್ ಮತ್ತಿತರರು ಉಪಸ್ಥಿತರಿದ್ದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT