ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ಯುವ ನೀತಿ ಜಾರಿ: ಅಪ್ಪಚ್ಚು ರಂಜನ್

Last Updated 13 ಅಕ್ಟೋಬರ್ 2012, 7:55 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದ ಯುವಜನರಿಗಾಗಿ ರೂಪಿಸಿರುವ `ಯುವ ನೀತಿ~ಯನ್ನು 10ದಿನದ ಒಳಗೆ ಜಾರಿಗೊಳಿಸಲಾಗುವುದು ಎಂದು ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು.

ರಾಜ್ಯ, ದೇಶ, ವಿದೇಶಗಳ 10 ಸಾವಿರ ಅನುಭವಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಈಗಾಗಲೇ ಕರಡು `ಯುವ ನೀತಿ~ ಪ್ರಕಟಿಸಲಾಗಿತ್ತು. ಯುವಕರಲ್ಲಿ ದೇಶಾಭಿಮಾನ ಮೂಡಿಸುವುದು. ಕ್ರೀಡೆಯಲ್ಲಿ ಅವರನ್ನು ಬಲಿಷ್ಠಗೊಳಿಸುವುದು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಚೈತನ್ಯ ತುಂಬುವುದು. ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಹಕರಿಸುವುದೂ ಸೇರಿದಂತೆ ಹತ್ತು ಹಲವು ಅಂಶಗಳನ್ನು `ಯುವ ನೀತಿ~ ಒಳಗೊಂಡಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯದ ಯುವಜನರು ಕೆಎಎಸ್, ಐಎಎಸ್ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯವಾದ ತರಬೇತಿ ನೀಡುವುದು. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ಪಡೆಯಲು ಅಗತ್ಯವಾದ ಸಂದರ್ಶನವನ್ನು ಎದುರಿಸುವ ಬಗ್ಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು.

ಸ್ವಾಮಿ ವಿವೇಕಾನಂದ ನಿಗಮ ಸ್ಥಾಪನೆ:
ಯುವಜನರನ್ನು ದುಶ್ಚಟಗಳಿಂದ ಮುಕ್ತಿಗೊಳಿಸಿ, ದೇಶದ ಭವಿಷ್ಯದಲ್ಲಿ ಬಹುಮುಖ್ಯ ಪಾತ್ರ ವಹಿಸುವಂತೆ ಮಾಡುವ ಉದ್ದೇಶದಿಂದ ಯುವಜನರ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಸ್ವಾಮಿ ವಿವೇಕಾನಂದ ನಿಗಮ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು.

ಹೊಸ ಕ್ರೀಡಾನೀತಿ: ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಒಲಿಂಪಿಕ್ಸ್ ಮತ್ತಿತರ ಮಹತ್ವದ ಕ್ರೀಡಾಕೂಟದಲ್ಲಿ ಭಾಗವಹಿಸುವ ಮುನ್ನ ಮೂರೂವರೆ ವರ್ಷ ತರಬೇತಿ ನೀಡಲಾಗುತ್ತದೆ. ಅದೇ ರೀತಿ ರಾಜ್ಯದಲ್ಲೂ ಕ್ರೀಡಾಪಟುಗಳಿಗೆ ತರಬೇತಿ ನೀಡುವುದು. ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದೂ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡ ಹೊಸ ಕ್ರೀಡಾನೀತಿಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದರು.

ಉದ್ಯೋಗದಲ್ಲಿ ಶೇ 5 ಮೀಸಲಿಗೆ ಮಸೂದೆ: ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಶೇ 5ರಷ್ಟು ಸ್ಥಾನ ಮೀಸಲಿಡುವ ಬಗ್ಗೆ ಮಸೂದೆ ಜಾರಿಗೆ ತರುವ ಚಿಂತನೆ ಇದ್ದು, ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ವಿವರ ನೀಡಿದರು.

ಪ್ರತಿ ತಾಲ್ಲೂಕಿಗೆ ತರಬೇತುದಾರ: ರಾಜ್ಯದಲ್ಲಿ 290 ತರಬೇತುದಾರರ ಹುದ್ದೆ ಖಾಲಿ ಇದ್ದು, ಅವುಗಳ ಭರ್ತಿ ಪ್ರಕ್ರಿಯೆ ಆರಂಭವಾಗಿದೆ. ಪ್ರತಿ ತಾಲ್ಲೂಕಿಗೂ ಒಬ್ಬರು ತರಬೇತುದಾರರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರತಿ ಜಿಲ್ಲಾ ಕೇಂದ್ರದಲ್ಲೂ ಸುಸಜ್ಜಿತ ಕ್ರೀಡಾಂಗಣ, ಕ್ರೀಡಾ ಹಾಸ್ಟೆಲ್ ಇರುವಂತೆ ನೋಡಿಕೊಳ್ಳಲಾಗುವುದು ಎಂದರು.

10 ಸಾವಿರ ಮಂದಿಗೆ ಕ್ರೀಡಾ ಸಂಜೀವಿನಿ:
ಅಪಘಾತದಲ್ಲಿ ಗಾಯಗೊಂಡವರಿಗೆ  `ಕ್ರೀಡಾ ಸಂಜೀವಿನಿ~ ವಿಮಾಸೌಲಭ್ಯ ಕಲ್ಪಿಸಲಾಗಿದ್ದು, 10 ಸಾವಿರ ಕ್ರೀಡಾಪಟುಗಳಿಗೆ ಈ ಸೌಲಭ್ಯ ಕಲ್ಪಿಸಲಾಗುವುದು. ಸಾಧಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT