ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲೇ ಎಸ್‌ಎಸ್‌ಕೆ ಯುವ ಸಮಾವೇಶ

Last Updated 26 ಫೆಬ್ರುವರಿ 2011, 8:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಎಸ್‌ಎಸ್‌ಕೆ (ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ) ಸಮಾಜದ ರಾಷ್ಟ್ರ ಮಟ್ಟದ ಯುವಕರ ಸಮಾವೇಶವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುತ್ತದೆ’ ಎಂದು ಅಖಿಲ ಕರ್ನಾಟಕ ಕ್ಷತ್ರಿ ಮಹಾಸಭಾ ರಾಜ್ಯಾಧ್ಯಕ್ಷ ಶ್ರೀಹರಿಸಾ ಎಲ್. ಖೋಡೆ ಪ್ರಕಟಿಸಿದರು.ನಗರದ ನೆಹರು ಮೈದಾನದಲ್ಲಿ ಏರ್ಪಡಿಸಿದ ಎಸ್‌ಎಸ್‌ಕೆ ಸಮಾಜದ 11ನೇ ಮಹಾಧಿವೇಶನ ಅಂಗವಾಗಿ ಶುಕ್ರವಾರ ಯುವ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶೀಘ್ರದಲ್ಲೇ ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಯುವ ಪದಾಧಿಕಾರಿಗಳನ್ನು ನೇಮಿಸಲಾಗುತ್ತದೆ. ನಂತರ ಯುವ ಸಮಾವೇಶವನ್ನು ಹುಬ್ಬಳ್ಳಿಯಲ್ಲಿಯೇ ಏರ್ಪಡಿಸಲಾಗುತ್ತದೆ. ಇದರಿಂದ ಯುವಕರು ಮುಂದೆ ಬರಬೇಕು ಎನ್ನುವ ಉದ್ದೇಶವಿದೆ’ ಎಂದರು.

ಸ್ವಾಮಿ ಶಿವಾನಂದ, ಸ್ವಾಮಿ ನಿರ್ಮಲಾನಂದನಾಥ ಹಾಘೂ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಕಾಶ, ರಾಮಕೃಷ್ಣೇಗೌಡ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಅಶೋಕ ಕಾಟವೆ, ಜೀವನ ಧೋಂಗಡಿ, ಪ್ರಕಾಶ ಕಾಟವೆ ಹಾಜರಿದ್ದರು. ನಾರಾಯಣ ಜರತಾಘರ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಣಕ್ಕೆ ಆದ್ಯತೆ ಕೊಡಲು ಸಲಹೆ
ಬೆಳಿಗ್ಗೆ ನಡೆದ ಮಹಿಳಾ ಸಮಾವೇಶದಲ್ಲಿ ಶಿಕ್ಷಣಕ್ಕೆ ಆದ್ಯತೆ ಕೊಡಬೇಕೆಂದು ಒತ್ತಾಯಿಸಲಾಯಿತು. ಎಸ್‌ಎಸ್‌ಕೆ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ಧಿಯಾಗಬೇಕಾದರೆ ಎಲ್ಲ ವರ್ಗದವರು ಶಿಕ್ಷಣ ಪಡೆಯಬೇಕೆಂದು ಅಭಿಪ್ರಾಯಪಡಲಾಯಿತು.ಎಸ್‌ಎಸ್‌ಕೆ ಸಮಾಜ ಶ್ರೀಮಂತ ಎನ್ನುತ್ತಾರೆ. ಆದರೆ ಶೇ. 10-15ರಷ್ಟು ಮಾತ್ರ ಶ್ರೀಮಂತರಿದ್ದಾರೆ. ಜೊತೆಗೆ ಶೇ. 10-15ರಷ್ಟು ಮಧ್ಯಮ ವರ್ಗದವರಿದ್ದಾರೆ. ಉಳಿದವರು ಬಡವರು. ಇವರೊಂದಿಗೆ ಮದುವೆಯಾಗುವವರೆಂದು ಹುಡುಗಿಯರಿಗೆ ಶಿಕ್ಷಣ ಕೊಡಿಸುವುದಿಲ್ಲ.

ಹುಡುಗರು ವ್ಯಾಪಾರ ಮಾಡುತ್ತೇವೆಂದು ಕಲಿಯುವುದಿಲ್ಲ. ಆದರೆ ಕುಡಿತದ ವ್ಯಸನಕ್ಕೆ ಬಲಿಯಾಗಿ ಚಿಕ್ಕವಯಸ್ಸಿನಲ್ಲೇ ಅಸು ನೀಗುತ್ತಾರೆ. ಇದಕ್ಕಾಗಿ ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಕೋರಲಾಯಿತು.

ಎಸ್‌ಎಸ್‌ಕೆ ಸಮಾಜದ ವತಿಯಿಂದಲೇ ದೇಶದ ಪ್ರತಿಯೊಂದು ರಾಜ್ಯದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ಅರೆವೈದ್ಯಕೀಯ ಕಾಲೇಜುಗಳನ್ನು ಆರಂಭಿಸಬೇಕು. ಇದರಿಂದ ಮುಂದಿನ ಪೀಳಿಗೆಯವರ ಭವಿಷ್ಯಕ್ಕೆ ಅನುಕೂಲವಾಗುತ್ತದೆ. ಜೊತೆಗೆ ಸಮಾಜದ ಎಲ್ಲ ಸಿರಿವಂತರನ್ನು ಒಂದುಗೂಡಿಸಿ, ಪ್ರತಿ ರಾಜ್ಯದಲ್ಲಿ ಕೈಗಾರಿಕೆ, ಉದ್ಯಮಗಳನ್ನು ಆರಂಭಿಸುವ ಮೂಲಕ ಯುವ ಜನಾಂಗವನ್ನು ನಿರುದ್ಯೋಗದಿಂದ ಮುಕ್ತವಾಗಿಸಬೇಕು. ಅಲ್ಲದೇ ಸಮಾಜದ ಬಡಜನರು ಗುಡಿಕೈಗಾರಿಕೆ ಕೈಗೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಲಾಯಿತು.

ವರದಕ್ಷಿಣೆಯಿಂದ ಮುಕ್ತವಾದುದು ಎಂಬ ಹೆಗ್ಗಳಿಕೆ ಎಸ್‌ಎಸ್‌ಕೆ ಸಮಾಜಕ್ಕಿದೆ. ಆದರೆ ಈಚೆಗೆ ಕ್ಷುಲ್ಲಕ ಕಾರಣಗಳಿಗೆ ನಿಶ್ಚಿತಾರ್ಥವಾದವುಗಳು ಮುರಿದು ಬೀಳುತ್ತಿವೆ ಹಾಗೂ ವಿಚ್ಛೇದನಗಳು ಹೆಚ್ಚುತ್ತಿವೆ. ಇವುಗಳನ್ನು ತಡೆಯಬೇಕೆಂದು ಆಗ್ರಹಿಸಲಾಯಿತು.  ದಾವಣಗೆರೆಯ ರುಕ್ಷಿಣಿಬಾಯಿ ಕಲಬುರ್ಗಿ, ನಗರದ ನರ್ಮದಾಬಾಯಿ ಮಗಜಿಕೊಂಡಿ, ಮೀರಾಬಾಯಿ ಮೆಹರವಾಡೆ ಭಾಗವಹಿಸಿದ್ದರು. ಮಹಿಳಾ ಅಧ್ಯಕ್ಷೆ ಪಾವತಿ ಹನುಮಸಾಗರ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಮಾಜದ ಪದಾಧಿಕಾರಿಗಳಾದ ಸರಳಾ ಭಾಂಡಗೆ, ಗಂಗಾ ಇರಕಲ್ಲ, ರಾಜಶ್ರೀ ಜಡಿ ಹಾಗೂ ಸೀಮಾ ಲದವಾ ಹಾಜರಿದ್ದರು. ಕೇಶ್ವಾಪುರದ ಮಹಿಳಾ ಮಂಡಳದವರು ಭಕ್ತಿಗೀತೆ ಹಾಡಿದರು. ಭಾರತಿ ಪವಾರ ಭರತನಾಟ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT