ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲೇ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ

Last Updated 21 ಜನವರಿ 2011, 20:10 IST
ಅಕ್ಷರ ಗಾತ್ರ

ರಾಮನಗರ:  ಯುವ ಜನತೆಯನ್ನು ರಾಜಕೀಯದತ್ತ ಆಕರ್ಷಿಸಿ ದೇಶದ ಭವಿಷ್ಯವನ್ನು ಬದಲಿಸುವ ನಿಟ್ಟಿನಲ್ಲಿ ರಾಜ್ಯ ಯುವ ಕಾಂಗ್ರೆಸ್ ಆರಂಭಿಸಲಿರುವ ಸದಸ್ಯತ್ವ ಅಭಿಯಾನ ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ಆರಂಭವಾಗಲಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎ. ಮಂಜುನಾಥ್ ತಿಳಿಸಿದರು.

ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಯುವ ಕಾಂಗ್ರೆಸ್ ಮುಖಂಡರ ಸಭೆಯ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ನಿರ್ದೇಶನದ ಮೇರೆಗೆ ರಾಷ್ಟ್ರದಾದ್ಯಂತ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಹಾಗೂ ಚುನಾವಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಯುವ ಕಾಂಗ್ರೆಸ್‌ಗೆ ಚುನಾವಣೆ ನಡೆದಿದ್ದು ಸದ್ಯದಲ್ಲಿಯೇ ಕರ್ನಾಟಕದಲ್ಲಿಯೂ ನಡೆಯಲಿದೆ ಎಂದರು.

ಈ ಸಂಬಂಧ ಶೀಘ್ರದಲ್ಲಿಯೇ ಬಿಡದಿಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಯುವ ಮುಖಂಡರ ಸಭೆ ಆಯೋಜಿಸಲಾಗುತ್ತದೆ. ಅದರ ನೇತೃತ್ವವನ್ನು ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ವಹಿಸುವರು ಎಂದರು.

ದೇಶದಲ್ಲಿ ಶೇ 67ರಷ್ಟು ಯುವ ಜನತೆ ಇದ್ದಾರೆ. ಈ ಶಕ್ತಿಯನ್ನು ಬಳಸಿಕೊಂಡು ದೇಶವನ್ನು ಅಭಿವೃದ್ಧಿಯ ಪಥದತ್ತ ತೆಗೆದುಕೊಂಡು ಹೋಗುವುದು ರಾಹುಲ್ ಗಾಂಧಿ ಅವರ ಚಿಂತನೆಯಾಗಿದೆ. ಇದಕ್ಕಾಗಿ ಜಿಲ್ಲೆಯ ಯುವ ಜನರು ಕಾಂಗ್ರೆಸ್‌ನೊಡನೆ ಕೈಜೋಡಿಸಿ ಎಂದು ಅವರು ಕರೆ ನೀಡಿದರು.

18ರಿಂದ 35 ವರ್ಷದೊಳಗಿನ ಯುವ ಜನತೆಗೆ ಯುವ ಕಾಂಗ್ರೆಸ್‌ನಲ್ಲಿ ಸದಸ್ಯತ್ವ ದೊರೆಯಲಿದೆ. ಅವರು ಬೂತ್ ಮಟ್ಟದ ಪದಾಧಿಕಾರಿಗಳನ್ನು ಆರಿಸುವ ಅರ್ಹತೆ ಹೊಂದಿರುತ್ತಾರೆ. ಈ ಪದಾಧಿಕಾರಿಗಳು ವಿಧಾನಸಭಾ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಅರ್ಹತೆ ಹೊಂದಿರುತ್ತಾರೆ ಎಂದು ಅವರು ವಿವರಿಸಿದರು.

ಸದಸ್ಯತ್ವದ ಶುಲ್ಕ ಸಾಮಾನ್ಯ ವರ್ಗದವರಿಗೆ 15 ರೂಪಾಯಿ ಹಾಗೂ ಎಸ್.ಸಿ/ಎಸ್.ಟಿ ಸಮುದಾಯದ ಜನತೆಗೆ 5 ರೂಪಾಯಿ ಆಗಿದೆ. ಸದಸ್ಯರಾಗ ಬಯಸುವವರು ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ವಯೋಮಿತಿಗೆ ಪೂರಕವಾದ ದಾಖಲೆಯನ್ನು ತೆಗೆದುಕೊಂಡು ಬರುವಂತೆ ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷ ಚೇತನ್ ಗೌಡ, ಪ್ರಧಾನ ಕಾರ್ಯದರ್ಶಿ ಗೋಪಾಲ್, ಕೇಬಲ್ ರಾಜು, ಕಾರ್ಯದರ್ಶಿ ಟಿ.ಆರ್.ದೇವರಾಜ್, ಕಾಂಗ್ರೆಸ್ ಮುಖಂಡ ಸತೀಶ್ ಚಂದ್ರ, ಬಿಡದಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜ್, ಮಾಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜು ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT