ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರಲಿಪಿ ಕಲಿಯಿರಿ ಶೀಘ್ರ ನೌಕರಿ ಪಡೆಯಿರಿ!

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ಕೇವಲ ಪದವಿ ಕಲಿತರೂ ಸರ್ಕಾರಿ ನೌಕರಿ ನಿಮ್ಮ ಕಾಲ ಬುಡಕ್ಕೆ! ನೀವು ಉದ್ಯೋಗ ಹುಡುಕಬೇಕಿಲ್ಲ, ಉದ್ಯೋಗವೇ ನಿಮ್ಮನ್ನು ಅರಸಿ ಬರುತ್ತದೆ. ಯಾರದ್ದೇ ಶಿಫಾರಸು ಬೇಡ, ಲಂಚಕ್ಕೂ ಇಲ್ಲಿಲ್ಲ ಅವಕಾಶ. ಕೇವಲ ಎರಡು ವರ್ಷ ಶ್ರಮಪಟ್ಟರೆ ಜೀವನ ಪರ್ಯಂತ ಆರಾಮ.

ಉನ್ನತ ಶಿಕ್ಷಣ ಪಡೆದರೂ ಸರಿಯಾದ ಉದ್ಯೋಗ ಸಿಗುತ್ತಿಲ್ಲ ಎನ್ನುವುದು ಇಂದಿನ ಯುವಕರ ಅಳಲು. ಎಂ.ಎ, ಎಂ.ಕಾಂ, ಎಂ.ಎಸ್ಸಿ, ಎಂಬಿಎ ಇತ್ಯಾದಿ ಪದವಿಗಳನ್ನು ಪಡೆದುಕೊಂಡು ನಿರುದ್ಯೋಗಿಗಳಾಗಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಸ್ನಾತಕೋತ್ತರ ಪದವಿ ಪಡೆದು ಕಡಿಮೆ ಸಂಬಳಕ್ಕೆ ಕೆಲಸ ಮಾಡುವುದು ಯುವಕರಿಗೆ ಕಷ್ಟ. ಹೆಚ್ಚು ಸಂಬಳ ಸಿಗುವ ಸರ್ಕಾರಿ ನೌಕರಿ ಸುಲಭದಲ್ಲಿ ಸಿಗುವುದಿಲ್ಲ!

ಇನ್ನೊಂದೆಡೆ ಸರ್ಕಾರಿ ಹುದ್ದೆ ಪಡೆಯಲು ಶಿಫಾರಸು, ಲಂಚ ಇವೆಲ್ಲ ಮಾಮೂಲು ಆಗಿಬಿಟ್ಟಿದೆ. ಇವುಗಳ ನಡುವೆ, ಕೇವಲ ಪದವಿ ಕಲಿತರೂ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವುದು ಬಹಳ ಸುಲಭ ಎಂದರೆ ನಂಬುತ್ತೀರಾ? ಅದೂ ಯಾವುದೇ ಶಿಫಾರಸು, ಲಂಚ ಇಲ್ಲದೆಯೇ! ಇದಕ್ಕೆ ಕೇವಲ ಎರಡು ವರ್ಷಗಳ ಅಲ್ಪ ಪರಿಶ್ರಮ ಅಗತ್ಯ ಅಷ್ಟೇ.

ಈಗ ಬಹುತೇಕ ಯುವಕರಿಗೆ ಕಂಪ್ಯೂಟರ್ ಗೊತ್ತಿದ್ದದ್ದೇ. ಇದರ ಜೊತೆ ಶೀಘ್ರಲಿಪಿ (ಶಾರ್ಟ್‌ಹ್ಯಾಂಡ್) ಕಲಿತುಬಿಟ್ಟರೆ ನ್ಯಾಯಾಲಯಗಳಲ್ಲಿ ಕೆಲಸ ಕಟ್ಟಿಟ್ಟಬುತ್ತಿ. ಏಕೆ ಅಂತೀರಾ? ಹೈಕೋರ್ಟ್ ಸೇರಿದಂತೆ ಅಧೀನ ನ್ಯಾಯಾಲಯಗಳಲ್ಲಿ ಶೀಘ್ರಲಿಪಿಗಾರರ (ಸ್ಟೆನೊ) ಕೊರತೆ ಇಂದು ನಿನ್ನೆಯದ್ದಲ್ಲ.

ಹಲವು ವರ್ಷಗಳ ಸಮಸ್ಯೆ ಇದು. ಶೀಘ್ರಲಿಪಿ ಕಲಿತವರು ಸಿಗದೆ ಈಗಲೂ ಎಷ್ಟೋ ಹುದ್ದೆಗಳು ಖಾಲಿ ಇವೆ. ಇದು ಎಷ್ಟರಮಟ್ಟಿನ ಸಮಸ್ಯೆಯಾಗಿದೆ ಎಂದರೆ ಹೈಕೋರ್ಟ್‌ನಲ್ಲಿ ಯುವ ಶೀಘ್ರಲಿಪಿಗಾರರು ಸಿಗದೆ ಎರಡು ತಿಂಗಳ ಹಿಂದೆ ನಿವೃತ್ತ ಶೀಘ್ರಲಿಪಿಗಾರರಿಗಾಗಿ ಗುತ್ತಿಗೆ ಆಧಾರದ ಮೇಲೆ ಅರ್ಜಿ ಕರೆಯಲಾಗಿತ್ತು! ಹೈಕೋರ್ಟ್ ಅಥವಾ ಯಾವುದಾದರೂ ಅಧೀನ ಕೋರ್ಟ್‌ಗಳಲ್ಲಿ ಶೀಘ್ರಲಿಪಿಗಾರರಾಗಿ ಸೇವೆ ಸಲ್ಲಿಸಿದವರನ್ನು ಆಹ್ವಾನಿಸಲಾಗಿತ್ತು. ಒಂದು, ಎರಡಲ್ಲ ನಿವೃತ್ತರಾದವರಿಂದ 29 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಇದೊಂದೇ ಸಂಗತಿ ಶೀಘ್ರಲಿಪಿಗಾರರ ಕೊರತೆಯನ್ನು ಸ್ಪಷ್ಟಪಡಿಸುತ್ತದೆ.

ಶೀಘ್ರಲಿಪಿಗಾರರ ಸಮಸ್ಯೆ ಕೇವಲ ಬೆಂಗಳೂರಿನಲ್ಲಿರುವ ಹೈಕೋರ್ಟ್ ಪ್ರಧಾನ ಪೀಠ ಅಥವಾ ಧಾರವಾಡ, ಗುಲ್ಬರ್ಗದಲ್ಲಿನ ಸಂಚಾರಿ ಪೀಠಗಳಿಗಷ್ಟೇ ಸೀಮಿತವಲ್ಲ. ಅಧೀನ ಕೋರ್ಟ್‌ಗಳ ಸಮಸ್ಯೆ ಕೂಡ ಇದಕ್ಕೆ ಹೊರತಾಗಿಲ್ಲ. ಅಲ್ಲಿಯೂ ಶೀಘ್ರಲಿಪಿಗಾರರ ತೀವ್ರ ಕೊರತೆ ಇದೆ.

ಪದವಿಯಾದರೆ ಸಾಕು
ಹೈಕೋರ್ಟ್‌ನಲ್ಲಿ ಶೀಘ್ರಲಿಪಿಗಾರರಾಗಿ ಸೇವೆ ಸಲ್ಲಿಸಲು ಹೆಚ್ಚಿನ ಅರ್ಹತೆ ಏನೂ ಬೇಕಿಲ್ಲ. ಯಾವುದಾದರೂ ಪದವಿಯಾದರೆ ಸಾಕು. ಇದರ ಜೊತೆಗೆ ಇಂಗ್ಲಿಷ್‌ನಲ್ಲಿ ಶೀಘ್ರಲಿಪಿ ಹಾಗೂ ಬೆರಳಚ್ಚು (ಟೈಪಿಂಗ್) ಪರೀಕ್ಷೆಯ ಹಿರಿಯ ದರ್ಜೆ (ಸೀನಿಯರ್ ಗ್ರೇಡ್) ಉತ್ತೀರ್ಣ ಆಗುವುದು ಮಾತ್ರ ಕಡ್ಡಾಯ. ಈ ಮೊದಲು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲಿಯೂ ಹಿರಿಯ ದರ್ಜೆ ಪರೀಕ್ಷೆ ಕಡ್ಡಾಯವಾಗಿತ್ತು.

ಆದರೆ ಎರಡೂ ಭಾಷೆಗಳಲ್ಲಿ ಕಲಿತ ಅಭ್ಯರ್ಥಿಗಳು ಸಿಗುವುದು ಬಹಳ ಕಠಿಣವಾದ ಕಾರಣ, ಕೆಲ ವರ್ಷಗಳಿಂದ ಹೈಕೋರ್ಟ್‌ನಲ್ಲಿ ಇದನ್ನು ಇಂಗ್ಲಿಷ್ ಭಾಷೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಹೈಕೋರ್ಟ್‌ನಲ್ಲಿ ಇಂಗ್ಲಿಷ್‌ನಲ್ಲೇ ಕಲಾಪ ನಡೆಯುವುದರಿಂದ, ಕನ್ನಡ ಭಾಷೆಯನ್ನು ಶೀಘ್ರಲಿಪಿಯಲ್ಲಿ ಕೈಬಿಡಲಾಗಿದೆ. ಆದರೆ ಈಗ ಕೇವಲ ಇಂಗ್ಲಿಷ್ ಆದವರೂ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಶೀಘ್ರಲಿಪಿಗಾರರಾಗಿ ನೇಮಕಗೊಂಡರೆ ಅವರಿಗೆ ತೀರ್ಪು ಬರಹಗಾರರು (ಜಡ್ಜ್‌ಮೆಂಟ್ ರೈಟರ್ಸ್‌),  ಹಿರಿಯ ತೀರ್ಪು ಬರಹಗಾರರು (ಸೀನಿಯರ್ ಜಡ್ಜ್‌ಮೆಂಟ್ ರೈಟರ್ಸ್‌) ಹೀಗೆ ಅನೇಕ ಬಡ್ತಿಗಳೂ ಇವೆ.

ಕೊಂಚ ಶ್ರಮ ಹಾಕಿ
`ಶೀಘ್ರಲಿಪಿಯೇನೂ ಕಬ್ಬಿಣದ ಕಡಲೆಕಾಯಿ ಅಲ್ಲ. ಸ್ವಲ್ಪ ಶ್ರಮಪಟ್ಟರೆ ಉಳಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗಿಂತಲೂ ಸುಲಭದಲ್ಲಿ ಉತ್ತೀರ್ಣ ಆಗಬಹುದು' ಎನ್ನುತ್ತಾರೆ ನ್ಯಾಯಾಲಯದ ಶೀಘ್ರಲಿಪಿಗಾರರು. ಹೈಕೋರ್ಟ್ ಸೇರಿದಂತೆ ಅಧೀನ ನ್ಯಾಯಾಲಯಗಳಲ್ಲೂ ಶೀಘ್ರಲಿಪಿಗಾರರ ಅಗತ್ಯ ಇದ್ದೇ ಇರುತ್ತದೆ. ಇದನ್ನು ಕಲಿತರೆ ಸರ್ಕಾರಿ ಉದ್ಯೋಗ ಕಟ್ಟಿಟ್ಟ ಬುತ್ತಿ. ಆದರೆ ಯುವಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನುತ್ತಾರೆ ಅವರು.

ಕೇವಲ ರೇಖೆಗಳಲ್ಲಿ ಶಬ್ದಗಳನ್ನು ಗುರುತಿಸುವುದು ಶೀಘ್ರಲಿಪಿ. ಕನ್ನಡ ಹಾಗೂ ಇಂಗ್ಲಿಷ್ ಶೀಘ್ರಲಿಪಿ ಸರಿಸುಮಾರು ಒಂದೇ ತೆರನಾಗಿ ಇರುತ್ತವೆ. ಒಂದು ಭಾಷೆಯ ಶೀಘ್ರಲಿಪಿ ಕಲಿತರೆ ಇನ್ನೊಂದನ್ನು ಬಹಳ ಸುಲಭದಲ್ಲಿ ಕಲಿಯಬಹುದು.

ಶೀಘ್ರಲಿಪಿಯಲ್ಲಿ ಮೂರು ಪರೀಕ್ಷೆಗಳು ಇವೆ. ಮೊದಲನೆಯದ್ದು ಜೂನಿಯರ್ (ಕಿರಿಯ ಶ್ರೇಣಿ), ಅದು ತೇರ್ಗಡೆಗೊಂಡ ನಂತರ ಸೀನಿಯರ್ (ಹಿರಿಯ ಶ್ರೇಣಿ), ನಂತರ ಪ್ರವೀಣ ದರ್ಜೆ. ಆದರೆ ನ್ಯಾಯಾಲಯಗಳಲ್ಲಿ ಸದ್ಯ ಕೇಳುತ್ತಿರುವುದು ಕಿರಿಯ ಹಾಗೂ ಹಿರಿಯ ಶ್ರೇಣಿಗಳು ಮಾತ್ರ. ಕಿರಿಯ ಶ್ರೇಣಿಗೆ ಒಂದು ವರ್ಷ ಕಲಿಕೆ ಹಾಗೂ ಅದಾದ ನಂತರ ಹಿರಿಯ ಶ್ರೇಣಿಗೆ ಇನ್ನೊಂದು ವರ್ಷ ಕಲಿಕೆ.

ಕೇವಲ ನ್ಯಾಯಾಲಯವಲ್ಲ
ಶೀಘ್ರಲಿಪಿಗಾರರಿಗೆ ಕೇವಲ ನ್ಯಾಯಾಲಯಗಳಲ್ಲಿ ಮಾತ್ರವಲ್ಲದೆ, ವಿಧಾನಸೌಧದಲ್ಲಿಯೂ ಭಾರಿ ಬೇಡಿಕೆ ಇದೆ. ಸಚಿವಾಲಯಗಳಲ್ಲಿ ವರದಿಗಾರರಾಗಿಯೂ ಕೆಲಸ ಸುಲಭದಲ್ಲಿ ದೊರಕುತ್ತದೆ. ಕಾರಣ ಅಲ್ಲಿ ಕೂಡ ಶೀಘ್ರಲಿಪಿ ಬಲ್ಲ ವರದಿಗಾರರು ಸಿಗದೆ ಹುದ್ದೆಗಳು ಖಾಲಿಯೇ ಇವೆ. ಕೇವಲ ಸರ್ಕಾರಿ ಹುದ್ದೆ ಅಷ್ಟೇ ಅಲ್ಲದೆ, ಖಾಸಗಿ ವಲಯಗಳಲ್ಲೂ ಶೀಘ್ರಲಿಪಿಗಾರರಿಗೆ ಅಪಾರ ಅವಕಾಶಗಳು ಇವೆ. ಆಪ್ತ ಕಾರ್ಯದರ್ಶಿ ಕೆಲಸ ನಿರ್ವಹಿಸಲು ಖಾಸಗಿ ಕಂಪೆನಿಗಳಲ್ಲಿ ಕೂಡ ಶೀಘ್ರಲಿಪಿ ಬಲ್ಲವರಿಗೆ ಆದ್ಯತೆ ನೀಡಲಾಗುತ್ತದೆ.

ಶೀಘ್ರಲಿಪಿ ಕಲಿಯುವಲ್ಲಿ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿಲ್ಲದ ಕಾರಣ, ಹಲವು ಶೀಘ್ರಲಿಪಿ ಕಲಿಕಾ ಕೇಂದ್ರಗಳನ್ನು ಮುಚ್ಚಲಾಗಿದೆ. ಇದರಿಂದ ವಿದ್ಯಾರ್ಥಿಗಳು ಇದರ ಕಲಿಕೆಯತ್ತ ಹೆಚ್ಚು ಉತ್ಸುಕರಾಗುವ ಅಗತ್ಯ ಇದೆ. ಸರ್ಕಾರಿ ಹುದ್ದೆಗಳಿಗೆ ಮೀಸಲು ಇರುವ ವಯೋಮಾನ ಮೀರುವ ಮುನ್ನ ಎರಡು ವರ್ಷ ಸ್ವಲ್ಪ ಶ್ರಮ ಪಟ್ಟರೆ ಜೀವಮಾನ ಪೂರ್ತಿ ಆರಾಮಾಗಿ ಇರಬಹುದು ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT