ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರವೇ ಪರಿಸರ ಪುನಶ್ಚೇತನ ವರದಿ

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆಯಿಂದ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ಹೇಗೆ ಪರಿಸರವನ್ನು ಪುನಶ್ಚೇತನಗೊಳಿಸಬಹುದು ಎಂಬುದರ ಬಗ್ಗೆ ಮಾದರಿ ಯೋಜನಾ ವರದಿಯನ್ನು ಈ ತಿಂಗಳ 20ರೊಳಗೆ ರಾಜ್ಯ ಸರ್ಕಾರ ಹಾಗೂ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಭಾರತೀಯ ಅರಣ್ಯ ಸಂಶೋಧನಾ ಮತ್ತು ಶಿಕ್ಷಣ ಮಂಡಳಿಯ ಮಹಾನಿರ್ದೇಶಕ ಡಾ.ವಿ.ಕೆ. ಬಹುಗುಣ ಶನಿವಾರ ಇಲ್ಲಿ ತಿಳಿಸಿದರು.

ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿಗಾರಿಕೆಯಿಂದ ಹಾನಿಗೀಡಾಗಿರುವ ಪ್ರದೇಶಗಳಲ್ಲಿ ಪರಿಸರವನ್ನು ಸಹಜ ಸ್ಥಿತಿಗೆ ತರುವುದರ ಜತೆಗೆ, ಸುಸ್ಥಿರ ಗಣಿಗಾರಿಕೆ ನಡೆಸುವುದರ ಕುರಿತು ರಾಜ್ಯ ಸರ್ಕಾರ ಹಾಗೂ ಸುಪ್ರೀಂಕೋರ್ಟ್‌ಗೆ ಸೂಕ್ತ ಸಲಹೆಗಳನ್ನು ನೀಡಲಾಗುವುದು ಎಂದರು.

ಗಣಿಗಾರಿಕೆಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ಹೇಗೆ ಪರಿಸರವನ್ನು ಪುನಶ್ಚೇತನಗೊಳಿಸಬಹುದು ಎಂಬುದರ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಮಂಡಳಿಯು ಉನ್ನತ ಪುನಶ್ಚೇತನಾ ಕೇಂದ್ರವನ್ನು ನಗರದ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯಲ್ಲಿ ಸ್ಥಾಪಿಸಿದೆ.

ಈ ಕೇಂದ್ರವು ಸುವ್ಯವಸ್ಥಿತ ರೀತಿಯಲ್ಲಿ ವೈಜ್ಞಾನಿಕ ಅಧ್ಯಯನ ನಡೆಸುವ ಮೂಲಕ ಗಣಿಗಾರಿಕೆ ಪ್ರದೇಶದಲ್ಲಿ ಭವಿಷ್ಯದಲ್ಲಿ ಹೇಗೆ ಪರಿಸರ ಸಮತೋಲನ ಕಾಪಾಡಬಹುದು ಎಂಬುದರ ಬಗ್ಗೆ ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡಲಿದೆ ಎಂದರು.

ಈ ಕೇಂದ್ರದಲ್ಲಿ ಪ್ರಸ್ತುತ ಒಬ್ಬ ಐಎಫ್‌ಎಸ್ ಅಧಿಕಾರಿ ಹಾಗೂ ಐವರು ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದು, ಅಗತ್ಯ ಬಿದ್ದಾಗ ಹೊರಗಿನ ತಜ್ಞರ ಸೇವೆಯನ್ನು ಬಳಸಿಕೊಳ್ಳಲಾಗುತ್ತದೆ. ಈ ಕೇಂದ್ರದ ಮೂಲಕ ಗಣಿಗಾರಿಕೆಯಲ್ಲಿ ಕೆಲಸ ನಿರ್ವಹಿಸಲಿರುವ ಕಾರ್ಮಿಕರಿಗೆ ಸೂಕ್ತ ತರಬೇತಿ ನೀಡಲು ಕೂಡ ಉದ್ದೇಶಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಕೂಡ ನೆರವು ನೀಡಲು ಮುಂದೆ ಬಂದಿದೆ. ಇದಕ್ಕಾಗಿ 15ರಿಂದ 20 ಕೋಟಿ ರೂಪಾಯಿ ಬೇಕಾಗಬಹುದು ಎಂದರು.

ಖಾಸಗಿ ಬಂಡವಾಳ ಅಗತ್ಯವಿಲ್ಲ: ಅರಣ್ಯ ಸಂರಕ್ಷಣೆ ಅಥವಾ ನಿರ್ವಹಣೆಗೆ ಖಾಸಗಿ ಬಂಡವಾಳ ಹೂಡುವ ಅಗತ್ಯವಿಲ್ಲ. ದೇಶದಲ್ಲಿ ಪ್ರಯೋಜನಕ್ಕೆ ಬಾರದ ಬಹಳಷ್ಟು ಬರಡು ಭೂಮಿಯಿದೆ. ಈ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲು ಕೃಷಿ ಕ್ಷೇತ್ರದಲ್ಲಿ ಮಾತ್ರ ಖಾಸಗಿ ಬಂಡವಾಳ ಹೂಡುವ ಅಗತ್ಯವಿದೆ ಎಂದು ಪ್ರತಿಕ್ರಿಯಿಸಿದರು.

ಸಮುದಾಯದ ಸಹಭಾಗಿತ್ವದಲ್ಲಿ ಅರಣ್ಯ ನಿರ್ವಹಿಸಲು ದೇಶದಲ್ಲಿ 1,18,213 ಜಂಟಿ ಅರಣ್ಯ ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು 22.93 ದಶಲಕ್ಷ ಹೆಕ್ಟೇರ್ ಅರಣ್ಯವನ್ನು  ನಿರ್ವಹಿಸುತ್ತಿವೆ.
ಸಮುದಾಯದ ಸಹಭಾಗಿತ್ವದಲ್ಲಿ ಅರಣ್ಯ ನಿರ್ವಹಿಸುವುದರಲ್ಲಿ ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಚತ್ತೀಸ್‌ಗಡ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿದ್ದರೆ, ಕರ್ನಾಟಕ ರಾಜ್ಯ ಏಳನೇ ಸ್ಥಾನದಲ್ಲಿದೆ ಎಂದು ಮಾಹಿತಿ ಎಂದರು.

`ಕರ್ನಾಟಕದಲ್ಲಿ 38 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶದ ಪೈಕಿ 8 ಲಕ್ಷ ಹೆಕ್ಟೇರ್ ಅರಣ್ಯವನ್ನು 3,848 ಜಂಟಿ ಅರಣ್ಯ ಸಮಿತಿಗಳು ನಿರ್ವಹಿಸುತ್ತಿವೆ. ಈ ಸಮಿತಿಗಳಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 3,144 ಲಕ್ಷ ರೂಪಾಯಿಗಳಷ್ಟು ಲಾಭವಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT