ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರವೇ ಶುದ್ಧ ಕುಡಿಯುವ ನೀರಿನ ಭಾಗ್ಯ

Last Updated 15 ಫೆಬ್ರುವರಿ 2012, 5:50 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಅತ್ಯಂತ ಕಡಿಮೆ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪಡೆಯುವ ಭಾಗ್ಯ ತಾಲ್ಲೂಕಿನ ಕೊಂಡ್ಲಹಳ್ಳಿ ಜನತೆಗೆ ಶೀಘ್ರವೇ ಲಭ್ಯವಾಗಲಿದ್ದು, ಪೂರಕ ಕಾರ್ಯಗಳು ಪ್ರಗತಿಯಲ್ಲಿವೆ.

ತಾಲ್ಲೂಕಿನಲ್ಲಿಯೇ ಪ್ರಥಮ ಬಾರಿಗೆ ಸ್ಥಳೀಯ ಗ್ರಾಮಪಂಚಾಯ್ತಿ ಹೈದರಾಬಾದ್ ಮೂಲದ ಖಾಸಗಿ ಕಂಪೆನಿಯಾದ `ಸೆಮಿ ಎನ್‌ಜಿಒ~ ಜತೆಗೂಡಿ ಶುದ್ಧೀಕರಿಸಿದ ಕುಡಿಯುವ ನೀರು ನೀಡಲು ಮುಂದಾಗುವ ಮೂಲಕ ಶ್ಲಾಘನೀಯ ಕಾರ್ಯ ಕೈಗೊಂಡಿದೆ. ಸ್ಥಳೀಯ ಸರ್ಕಾರಿ ಆರೋಗ್ಯ ಕೇಂದ್ರ ಆವರಣದಲ್ಲಿ ಘಟಕ ಸ್ಥಾಪನೆಯಾಗುತ್ತಿದೆ.

ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ಕೊಂಡ್ಲಹಳ್ಳಿಗೆ ಪ್ಲೋರೈಡ್ ಸೇರಿದಂತೆ ಹಲವು ಲವಣಾಂಶ ಇರುವ ಕುಡಿಯುವ ನೀರು ಬಹು ವರ್ಷಗಳಿಂದ ಸರಬರಾಜು ಆಗುತ್ತಿದ್ದು, ಇದರ ನಿವಾರಣೆಗೆ ಕೈಗೊಂಡಿದ್ದ ಹಲವು ಕ್ರಮಗಳು ವ್ಯರ್ಥವಾಗಿದ್ದವು. ಜತೆಗೆ ಶುದ್ಧ ಕುಡಿಯುವ ನೀರು ನೀಡುವುದೂ ಸಹ ಪ್ರಶ್ನೆಯಾಗಿದ್ದ ಸಮಯದಲ್ಲಿ ಶುದ್ಧ ನೀರು ಯೋಜನೆ ಆರಂಭವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶುದ್ಧೀಕರಣ ಕೇಂದ್ರ ಸ್ಥಾಪಿಸುತ್ತಿರುವ ಸಂಸ್ಥೆಯ ಸಿಬ್ಬಂದಿ ಸಾಯಿರಾಂ ಸೋಮವಾರ ನೀಡಿದ ಮಾಹಿತಿ ಪ್ರಕಾರ ಕೇಂದ್ರದಿಂದ ಪ್ರತಿದಿನ 21 ಸಾವಿರ ಲೀಟರ್ ಕುಡಿಯುವ ನೀರು ಲಭ್ಯವಾಗಲಿದೆ. 20 ಲೀಟರ್ ನೀರಿನ ಕ್ಯಾನ್ ಪಡೆಯಲು ಗ್ರಾಹಕರು ್ಙ 7 ಪಾವತಿ ಮಾಡಬೇಕಿದೆ. ಪ್ರತಿ ಕ್ಯಾನ್‌ಗೆ ಠೇವಣಿ ಹಣವಾಗಿ ್ಙ125 ಪಾವತಿ ಮಾಡಬೇಕಿದೆ. ಕೇಂದ್ರಕ್ಕೆ ಐಎಸ್‌ಐ ಗುಣಮಟ್ಟ ನೀಡಲಾಗಿದೆ. ತಾಲ್ಲೂಕಿನ ಬೇರೆ ಗ್ರಾಮಪಂಚಾಯ್ತಿ ಕೇಂದ್ರಗಳಲ್ಲಿಯೂ ಇಂತಹ ಕೇಂದ್ರ ಸ್ಥಾಪನೆ ಮಾಡಲು ಸಂಸ್ಥೆ ಇಚ್ಛಿಸಿದೆ ಎಂದು ಹೇಳಿದರು.

ಈಗಾಗಲೇ ಕೇಂದ್ರ ಸ್ಥಾಪನೆಗೆ ಅಗತ್ಯ ಕಾರ್ಯಗಳು ನಡೆಯುತ್ತಿದೆ. ಗ್ರಾ.ಪಂ. ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಶೀಘ್ರ ಕ್ರಮ ಕೈಗೊಂಡಲ್ಲಿ 30 ಅಥವಾ 45 ದಿನಗಳ ಒಳಗಾಗಿ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದು ಸಾಯಿರಾಂ ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT