ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀನಾ ಬೋರಾ ಕೊಲೆ ನಡೆದಿದ್ದು ಹೇಗೆ?

Last Updated 21 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಮುಂಬೈ: ತ್ರೀ ಬಿಎಚ್‌ಕೆ ಫ್ಲಾಟ್ ಶೀನಾ ಕೊ ಮಿಲ್‌ಗಯಾ ಹೈ...
ಇದು ಇಂದ್ರಾಣಿ ಮುಖರ್ಜಿ ಅವರು ತನ್ನ ಮಗಳು ಶೀನಾಳನ್ನು ಹತ್ಯೆ ಮಾಡಿದ ಕೂಡಲೇ ಹೇಳಿದ ಮೊದಲ ಮಾತು.

ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿ, ಸಂಜೀವ್ ಖನ್ನಾ, ಶಾಮ್‌ವರ್ ರಾಯ್ ವಿರುದ್ಧ  ಸಿಬಿಐ ಸಲ್ಲಿಸಿರುವ ಸಾವಿರ ಪುಟಗಳ ದೋಷಾರೋಪ ಪಟ್ಟಿಯಲ್ಲಿ ಮೇಲಿನ ಸಂಭಾಷಣೆಯನ್ನು ದಾಖಲಿ ಸಲಾಗಿದೆ. ಇಂದ್ರಾಣಿ ದೆಹಲಿಯಲ್ಲಿ ಇದ್ದ ಫ್ಲಾಟ್ ಮಾರಿ ಬಂದ ಹಣದಿಂದ ಶೀನಾ ಮುಂಬೈಯಲ್ಲಿ ಖರೀದಿಸಲಿರುವ ಫ್ಲಾಟ್ ಬಗ್ಗೆ ನಡೆದ ಮಾತುಕತೆಯನ್ನು ದೋಷಾರೋಪ ಪಟ್ಟಿಯಲ್ಲಿ  ಸೇರಿಸಲಾಗಿದೆ.

2012ರ ಏಪ್ರಿಲ್ 24 ಮತ್ತು 25ರಂದು ಶೀನಾ ಕೊಲೆಯಾಗಿ, ದೇಹವನ್ನು ಅರಣ್ಯದಲ್ಲಿ ಎಸೆದ ಸಂದರ್ಭದಲ್ಲಿ ನಡೆದ ಮಾತುಕತೆಗಳು, ಇತರ ಸಾಕ್ಷಿಗಳನ್ನು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಸೇರಿಸಿದೆ.

ಏಪ್ರಿಲ್ 24ರಂದು ಸಂಜೆ 6.40ಕ್ಕೆ ಕಾರಿನಲ್ಲಿ ಬಂದ ರಾಹುಲ್, ಶೀನಾಳನ್ನು ಅಮರಸನ್ ಶೋರೂಂ ಬಳಿ ಬಿಟ್ಟು ಹೋದ ನಂತರ ತಾಯಿ ಇಂದ್ರಾಣಿ ಮಗಳಿಗೆ ಮಾದಕ ವಸ್ತುಗಳನ್ನು ಬೆರೆಸಿದ ನೀರು ಕುಡಿಸಿ ಕಾರಿನಲ್ಲಿ ಕರೆದುಕೊಂಡು ಹೋದ ಸನ್ನಿವೇಶಗಳನ್ನು ವಿವರಿಸಲಾಗಿದೆ. ಕಾರಿನಲ್ಲಿ ಪಾಲಿ ಹಿಲ್‌ ಕಡೆ ಕರೆದುಕೊಂಡು ಹೋಗಿ ಅರೆಪ್ರಜ್ಞಾ ವಸ್ಥೆಯಲ್ಲಿ ಇದ್ದ ಶೀನಾಳ ಕುತ್ತಿಗೆ ಬಿಗಿದು
ಕೊಲೆ ಮಾಡಿದ ವಿವರಗಳನ್ನು ನೀಡಲಾಗಿದೆ.

ಆರಂಭದಲ್ಲಿ ಶೀನಾ ಸ್ವಲ್ಪ ಪ್ರತಿಭಟಿಸಿ ರಾಯ್ ಬೆರಳನ್ನು ಕಚ್ಚುತ್ತಾಳೆ. ಖನ್ನಾ ಶೀನಾಳ ಕೂದಲು ಹಿಡಿದುಕೊಂಡ ಸಂದರ್ಭದಲ್ಲಿ ಇಂದ್ರಾಣಿ ಕುತ್ತಿಗೆಗೆ ಬಟ್ಟೆ ಬಿಗಿದು ಕೊಲೆ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ.

ಪೊಲೀಸರ ನಿರ್ಲಕ್ಷ್ಯ; ಹೊಸ ವರದಿಗೆ ಆದೇಶ: ಅರಣ್ಯದಲ್ಲಿ ಶೀನಾ ಬೋರಾ ಶವ ಪತ್ತೆಯಾದಾಗ ಸೂಕ್ತ ಕ್ರಮ ತೆಗೆದುಕೊಳ್ಳದ ರಾಯಗಡ ಪೊಲೀಸರ ಕ್ರಮದ ಬಗ್ಗೆ ಹೊಸದಾಗಿ ವರದಿ ನೀಡುವಂತೆ ನೂತನ ಡಿಜಿಪಿ ಪ್ರವಿಣ್ ದೀಕ್ಷಿತ್ ಅವರಿಗೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.

ಅರಣ್ಯದಲ್ಲಿ ಶವ ಪತ್ತೆಯಾದಾಗ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ಮತ್ತು ಎಫ್ಐಆರ್ ದಾಖಲಿಸದೆ ಲೋಪವೆಸಗಿದ್ದಾರೆ. ಹಿಂದಿನ ಡಿಜಿಪಿ ಸಂಜೀವ್ ದಯಾಳ್‌ ಸಲ್ಲಿಸಿರುವ ಒಂದು ಪುಟದ ವರದಿ ತೃಪ್ತಿ ತಂದಿಲ್ಲ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಪಿ. ಬಕ್ಸಿ ತಿಳಿಸಿದರು.

ಅಗತ್ಯ ದಾಖಲೆಗಳ ಸಹಿತ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಪೀಟರ್ ವಿರುದ್ಧ ಆಪಾದನೆ ಸುಳ್ಳು– ರಾಹುಲ್: ‘ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ತಂದೆ ಪೀಟರ್ ಮುಖರ್ಜಿ ವಿರುದ್ಧ ಮಾಡಿರುವ ಆಪಾದನೆ ಸುಳ್ಳು ಹಾಗೂ ಅನ್ಯಾಯದಿಂದ ಕೂಡಿದ್ದಾಗಿದೆ’ ಎಂದು ರಾಹುಲ್ ಮುಖರ್ಜಿ ಹೇಳಿದರು.

ಜೀವ ಬೆದರಿಕೆ ಇದ್ದ ಕಾರಣ ಸಿಬಿಐ ಕಚೇರಿಯಲ್ಲಿ ರಾತ್ರಿ ಇಡೀ ಕಳೆದು ಹೊರಬಂದ ರಾಹುಲ್, ತಂದೆಯ ವಿರುದ್ಧ ಮಾಡಲಾದ ಆಪಾದನೆಗಳನ್ನು ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT