ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀರೂರು ಮಠ: ದೀಪಾವಳಿ ಸಂಭ್ರಮ 25ರಿಂದ

Last Updated 21 ಅಕ್ಟೋಬರ್ 2011, 9:25 IST
ಅಕ್ಷರ ಗಾತ್ರ

ಉಡುಪಿ: ದೀಪಾವಳಿ ಸಂಭ್ರಮವನ್ನು ಪ್ರತಿಬಿಂಬಿಸುವ ಹಾಗೂ ಧಾರ್ಮಿಕ ಮಹತ್ವವನ್ನು ಹೊಂದಿರುವ ಗೂಡುದೀಪ ರಚನೆಯ ಹವ್ಯಾಸ ಮತ್ತು ಕಲೆಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಪರ್ಯಾಯ ಶೀರೂರು ಮಠದ ವತಿಯಿಂದ ರಾಜ್ಯಮಟ್ಟದ ಗೂಡುದೀಪ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಶೀರೂರುಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಪರ್ಯಾಯ ಶೀರೂರು ಮಠದ ಲಕ್ಷ್ಮಿವರ ತೀರ್ಥ ಸ್ವಾಮೀಜಿ, `ನಶಿಸುತ್ತಿರುವ ಗೂಡುದೀಪಗಳ ಕಲಾತ್ಮಕ ರಚನೆಯನ್ನು ನೆನಪಿಸಿಕೊಡುವ ನಿಟ್ಟಿನಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಸಾಂಪ್ರದಾಯಿಕ ಗೂಡುದೀಪ ಹಾಗೂ ವಿಶಿಷ್ಟ ವಿನ್ಯಾಸದ ಬೃಹತ್ ಗಾತ್ರದ ಕಲಾತ್ಮಕ ಗೂಡುದೀಪ ವಿಭಾಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗದಲ್ಲಿಯೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೂ ನಗದು ಸಹಿತ ಬಹುಮಾನಗಳಿವೆ~ ಎಂದರು.

`ಸಾಂಪ್ರದಾಯಿಕ ಗೂಡುದೀಪಗಳಲ್ಲಿ ಅಷ್ಟಪಟ್ಟಿ, ಮಂಟಪ, ಸುರುಳಿ ಹಾಗೂ ತಿರುಗಣೆ ಗೂಡುದೀಪಗಳಿಗೆ ಪ್ರಥಮ ಪ್ರಾಶಸ್ತ್ಯ. ವಿನೂತನ ವಿನ್ಯಾಸದ ಕಲಾತ್ಮಕ ಗೂಡುದೀಪಗಳ ವಿನ್ಯಾಸ ಕನಕ ಗೋಪುರ, ಕೃಷ್ಣಮಠದ ಉತ್ತರ ಮುಖದ್ವಾರದ ಗೋಪುರ, ಉಡುಪಿಯ ರಥಗಳು, ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ದೇವಾಲಗಳ ವಿನ್ಯಾಸದಲ್ಲಿರಬೇಕು. ಕಲಾತ್ಮಕ ವಿಭಾಗದಲ್ಲಿ  ಪ್ರಥಮ ಬಹುಮಾನ ರೂ.8008, ದ್ವಿತೀಯ ರೂ.5005 ಹಾಗೂ ತೃತೀಯ ರೂ.3003 ಜತೆಗೆ ಪಾರಿತೋಷಕ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ~ ಎಂದರು.

`ಸಾಂಪ್ರದಾಯಿಕ ವಿಭಾಗದಲ್ಲಿ ಪ್ರಥಮ ಬಹುಮಾನ ರೂ.5005, ದ್ವಿತೀಯ ರೂ.3003 ಹಾಗೂ ತೃತೀಯ ಬಹುಮಾನ ರೂ.1001, ಪಾರಿತೋಷಕ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ. ಇವೆಲ್ಲವುಗಳ ಜತೆಗೆ ಅತೀ ಚಿಕ್ಕದಾದ ಹಾಗೂ ಬೃಹತ್ ಗಾತ್ರದ ಗೂಡುದೀಪಗಳಿಗೂ ವಿಶೇಷ ಬಹುಮಾನವಿದೆ~ ಎಂದರು.

`ರೆಡಿಮೇಡ್~ ಗೂಡುದೀಪ ತರುವಂತಿಲ್ಲ: `ಸ್ಪರ್ಧಾಳುಗಳು ರೆಡಿಮೇಡ್ ಗೂಡುದೀಪಗಳನ್ನು ಸ್ಪರ್ಧೆಗೆ ತರುವಂತಿಲ್ಲ. ನ.5ರೊಳಗೆ ಸ್ವರ್ಧಿಗಳು ಸ್ವರಚಿತ ಗೂಡುದೀಪಗಳನ್ನು ಕೃಷ್ಣಮಠದ ಆಡಳಿತ ಕಚೇರಿಗೆ ನೀಡಿ ಹೆಸರನ್ನು ನೊಂದಾಯಿಸಬೇಕು.

ಸ್ಪರ್ಧೆಗೆ ಬಂದ ಎಲ್ಲ ಗೂಡುದೀಪಗಳನ್ನು ನ.7ರಂದು ಉತ್ಥಾನ ದ್ವಾದಶಿ ಮೊದಲ್ಗೊಂಡು ಲಕ್ಷದೀಪೋತ್ಸವ ಕೊನೆಗೊಳ್ಳುವ ನ.10ರವರೆಗೆ  ಉತ್ಸವ ಸಂದರ್ಭದಲ್ಲಿ ರಥಬೀದಿಯಲ್ಲಿ ಪ್ರದರ್ಶಿಸಲಾಗುವುದು. ಈ ಗೂಡುದೀಪಕ್ಕೆ ಸ್ಪರ್ಧಾರ್ಥಿಗಳೇ ಬಲ್ಬ್ ಮತ್ತು ವೈಯರ್‌ಗಳನ್ನು ಜೋಡಿಸಿ ತರಬೇಕು. ನ.12ರಂದು ಸಂಜೆ 5 ಗಂಟೆಗೆ ವಿಜೇತರಿಗೆ ಬಹುಮಾನ ವಿತರಿಸಲಾಗುವುದು~ ಎಂದರು.

ಮಕ್ಕಳಿಗೆ ಉಡುಗೊರೆ: `ಇವೆಲ್ಲವುಗಳ ಜತೆಗೆ ನಾಲ್ಕು ದಿನ ನಡೆಯುವ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಪುಟಾಣಿಗಳಿಗೆ ನಕ್ಷತ್ರ ಕಡ್ಡಿ, ಹೂಬಾಣ, ಪೆನ್ಸಿಲ್, ನೆಲಚಕ್ರಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ~ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಠದ ದಿವಾಣ ಲಾತವ್ಯ ಆಚಾರ್ಯ ಇದ್ದರು.

ಕೃಷ್ಣ ಮಠದಲ್ಲೂ ಮಂಗಳವಾರದಿಂದ ದೀಪಗಳ ಹಬ್ಬ
ಕೃಷ್ಣಮಠದಲ್ಲಿ ಇದೇ 25ರಂದು ಸಂಜೆ ನರಕ ಚತುರ್ದಶಿ, ನೀರು ತುಂಬುವ ಹಬ್ಬ ಆಚರಿಸಲಾಗುತ್ತದೆ. 26ರಂದು ಸೂರ್ಯೋದಯಕ್ಕೆ ಮುನ್ನ ಚಂದ್ರೋದಯ ಕಾಲದಲ್ಲಿ ಬೆ. 5.33ಕ್ಕೆ ಚಂದ್ರಶಾಲೆಯಲ್ಲಿ ಅಷ್ಟಮಠದ ಯತಿಗಳು ಎಣ್ಣೆ ಶಾಸ್ತ್ರದ ಬಳಿಕ ತೈಲಾಭ್ಯಂಗ ಹಾಗೂ ದೀಪಾವಳಿ ಆಚರಿಸಲಾಗುತ್ತದೆ. ರಾತ್ರಿ 7.30ಕ್ಕೆ ಬಲೀಂದ್ರ ಪೂಜೆಯು ರಥಬೀದಿಯ ಕನಕಗೋಪುರದ ಮುಂಭಾಗದಲ್ಲಿ ನೆರವೇರಲಿದೆ.
 
27ರಂದು ಬಲಿಪಾಡ್ಯದ ದಿನ ಬೆ.10ಕ್ಕೆ ರಥಬೀದಿಯಲ್ಲಿ ಗೋಪೂಜೆ ನಡೆಯಲಿದೆ. ಸಂಜೆ 6.30ಕ್ಕೆ ಕೃಷ್ಣ ಪೂಜೆಯ ಬಳಿಕ ತುಳಸಿ ಪೂಜೆ ಪ್ರಾರಂಭವಾಗಲಿದೆ. ಪೂಜೆಯ ನಂತರ ಕಾರ್ತಿಕ ಮಾಸದ ತುಳಸಿ ಸಂಕೀರ್ತನೆ ನಡೆಯಲಿದೆ. ತುಳಸಿ ಪೂಜೆ ಹಾಗೂ ಸಂಕೀರ್ತನೆ ಉತ್ಥಾನ ದ್ವಾದಶಿವರೆಗೆ (ನ.7) ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT