ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಲ ಶಂಕಿಸಿ ಪತ್ನಿಯ ಮುಖಕ್ಕೆ ಆ್ಯಸಿಡ್ ಎರಚಿ ಪರಾರಿ

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶೀಲದ ಬಗ್ಗೆ ಶಂಕೆ ಹೊಂದಿದ್ದ ಪತಿ ಪತ್ನಿಯ ಮುಖಕ್ಕೆ ಆಸಿಡ್ ಎರಚಿ ಪರಾರಿಯಾದ ಘಟನೆ ಸುಬ್ರಹ್ಮಣ್ಯಪುರದ ಮುನೇಶ್ವರನಗರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಸೈಯದ್ ರೆಹಮತ್ ಉನ್ನೀಸಾ (34) ಆಸಿಡ್ ದಾಳಿಗೊಳಗಾದವರು. ಅವರ ಪತಿ ಆರೋಪಿ ಅಬ್ದುಲ್ ವಕೀಲ್ ಪರಾರಿಯಾಗಿದ್ದಾನೆ. ಬಿಇ ಪದವೀಧರೆಯಾದ ಉನ್ನೀಸಾ ಅವರು ಖಾಸಗಿ ಕಂಪೆನಿಯಲ್ಲಿ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಾರೆ. ಅಬ್ದುಲ್ ಇಂದಿರಾನಗರದಲ್ಲಿ ಎಂ.ಕೆ.ಗ್ಲೋಬಲ್ ಫೈನಾನ್ಸ್ ಎಂಬ ಕಂಪೆನಿ ನಡೆಸುತ್ತಿದ್ದಾನೆ. ಅವರು ಪರಸ್ಪರ ಪ್ರೀತಿಸಿ ಹದಿಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಸೋಫಿಯಾ ಮತ್ತು ಅಫ್ರಿನ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯ ಶೀಲದ ಬಗ್ಗೆ ಶಂಕೆ ಹೊಂದಿದ್ದ ಅಬ್ದುಲ್, ಉನ್ನೀಸಾ ಅವರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. ಈ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು. ಈ ವಿಷಯ ಗೊತ್ತಾದ ನಂತರ ಎರಡೂ ಮನೆಯ ಪೋಷಕರು ಇಬ್ಬರನ್ನೂ ಒಟ್ಟಿಗೆ ಕೂರಿಸಿ ರಾಜಿ ಪಂಚಾಯಿತಿ ಮಾಡಿದ್ದರು. ನಾಲ್ಕು ತಿಂಗಳ ಕಾಲ ಒಟ್ಟಿಗೆ ಜೀವನ ಮಾಡಿ, ಒಟ್ಟಿಗೆ ಬದುಕುವುದು ಸಾಧ್ಯವಿಲ್ಲ ಎನಿಸಿದರೆ ವಿಚ್ಛೇದನ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದರು.

ವರ್ತನೆ ಬದಲಿಸಿಕೊಳ್ಳದ ಪತಿಯ ಜತೆ ಬದುಕುವುದು ಕಷ್ಟ ಎಂದುಕೊಂಡಿದ್ದ ಉನ್ನೀಸಾ ಅವರು ವಿಚ್ಛೇದನ ಪಡೆಯುವ ತೀರ್ಮಾನ ಮಾಡಿದ್ದರು. ಪತಿ ಜತೆ ಜಗಳವಾದಾಗ ವಿಚ್ಛೇದನ ಪಡೆದುಕೊಳ್ಳುವುದಾಗಿ ಆತನಿಗೆ ತಿಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಅಬ್ದುಲ್ ಪತ್ನಿ ಮೇಲೆ ದೌರ್ಜನ್ಯ ನಡೆಸುತ್ತಿದ್ದ.

ಉನ್ನೀಸಾ ಅವರು ಮಕ್ಕಳನ್ನು ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಶಾಲೆಗೆ ಕಳುಹಿಸಿ ಸ್ನಾನಕ್ಕೆ ಹೋಗುತ್ತಿದ್ದಾಗ ಅಬ್ದುಲ್ ಅವರ ಜತೆ ಜಗಳವಾಡಿ ಮುಖಕ್ಕೆ ಆಸಿಡ್ ಎರಚಿದ್ದಾನೆ. ಬಲ ಭಾಗದ ಕೆನ್ನೆ, ಗದ್ದ ಮತ್ತು ಎದೆಯ ಭಾಗಕ್ಕೆ ಆಸಿಡ್ ಬಿದ್ದ ಪರಿಣಾಮ ತೀವ್ರ ಸುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಪದ್ಮನಾಭನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಅವರಿಗೆ ಶೇ.40ರಷ್ಟು ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಘಟನೆಯ ಬಗ್ಗೆ ಹೇಳಿಕೆಯನ್ನೂ ನೀಡಿದ್ದಾರೆ. ಅಬ್ದುಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಇನ್‌ಸ್ಪೆಕ್ಟರ್ ಎಸ್.ಪಾಂಡುರಂಗ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT