ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಲಾ ದೀಕ್ಷಿತ್ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು

Last Updated 8 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾಮನ್ವೆಲ್ತ್ ಕ್ರೀಡಾಕೂಟ ಕುರಿತ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯು ಸಂಸತ್ತಿನಲ್ಲಿ ಸೋಮವಾರ ಬಿರುಗಾಳಿ ಎಬ್ಬಿಸಿತು. ಈ ವರದಿ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ರಾಜೀನಾಮೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದು, ಗದ್ದಲ ಎಬ್ಬಿಸಿದ್ದರಿಂದ ಉಭಯ ಸದನಗಳ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಕ್ರೀಡಾಕೂಟದ ಯೋಜನೆಗಳಿಗೆ ಸಂಬಂಧಿಸಿದಂತೆ ಸಿಎಜಿ ದೆಹಲಿ ಸರ್ಕಾರದ ವಿರುದ್ಧ ಬೆಟ್ಟು ಮಾಡಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ ಪ್ರಶ್ನೋತ್ತರ ವೇಳೆ ರದ್ದು ಮಾಡಿ ಚರ್ಚೆಗೆ ಅವಕಾಶ ಕೊಡಬೇಕು ಎಂದು ಪ್ರಮುಖ ವಿರೋಧ ಪಕ್ಷ ಬಿಜೆಪಿ ಒತ್ತಾಯ ಮಾಡಿತು.  ಎಡ ಪಕ್ಷಗಳು ಗಮನ ಸೆಳೆಯುವ ಸೂಚನೆ ಮಂಡಿಸಿದವು.

ಬೆಳಿಗ್ಗೆ 11 ಗಂಟೆಗೆ ಲೋಕಸಭೆ ಸಮಾವೇಶಗೊಳ್ಳುತ್ತಿದ್ದಂತೆ ಸ್ಪೀಕರ್ ಮೀರಾ ಕುಮಾರ್, ಪ್ರಶ್ನೋತ್ತರ ಕಾರ್ಯಕ್ರಮಗಳನ್ನು ಎತ್ತಿಕೊಳ್ಳಲು ಮುಂದಾದರು. ಪ್ರತಿಯಾಗಿ ಬಿಜೆಪಿ ಒಳಗೊಂಡ ಎನ್‌ಡಿಎ ಸದಸ್ಯರು ಸಿಎಜಿ ವರದಿಯಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಮೇಲೆ ಆರೋಪ ಮಾಡಲಾಗಿದ್ದು ತಕ್ಷಣ ಅವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಪ್ರಶ್ನೋತ್ತರ ಕಲಾಪ ಮುಂದುವರಿದಾಗ ವಿರೋಧ ಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಸ್ಪೀಕರ್ ಮುಂದಿನ ಆವರಣಕ್ಕೆ ಬಂದರು.
 
~ಪ್ರಶ್ನೋತ್ತರಕ್ಕೆ ಅಡ್ಡಿ ಮಾಡಬೇಡಿ. ದಯವಿಟ್ಟು ನಿಮ್ಮ ಸ್ಥಾನಗಳಿಗೆ ಹಿಂತಿರುಗಿ~ ಎಂದು ಸ್ಪೀಕರ್ ಮೇಲಿಂದ ಮೇಲೆ ಮಾಡಿದ ಮನವಿಗೆ ವಿರೋಧಿ ಸದಸ್ಯರು ಕಿವಿಗೊಡಲಿಲ್ಲ. ಸದನದಲ್ಲಿ ಗದ್ದಲ ಮುಂದುವರಿದಿದ್ದರಿಂದ ಸದನವನ್ನು ಮುಂದಕ್ಕೆ ಹಾಕಲಾಯಿತು. 

ಶೀಲಾ ದೀಕ್ಷಿತ್ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದು, ತಕ್ಷಣ ರಾಜೀನಾಮೆ ಕೊಡಬೇಕು ಎಂದು ಘೋಷಣೆಗಳನ್ನು ಕೂಗಿದರು. ಮಧ್ಯಾಹ್ನ ಸದನ ಮತ್ತೆ ಸೇರಿದಾಗಲೂ ಗದ್ದಲ ಮುಂದುವರಿದಿದ್ದರಿಂದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಇದರ ನಡುವೆ ಸಮಾಜವಾದಿ ಸದಸ್ಯರು, ಅತಿ ಹೆಚ್ಚು ನಕಲಿ ಎನ್‌ಕೌಂಟರ್‌ಗಳನ್ನು ನಡೆಸಿರುವ ಉತ್ತರ ಪ್ರದೇಶದ ಮಾಯಾವತಿ ಸರ್ಕಾರವನ್ನು ವಜಾ ಮಾಡಬೇಕೆಂದು ಒತ್ತಾಯ ಮಾಡಿದರು. ಸಮಾಜವಾದಿ ಪಕ್ಷದ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಆವರಣಕ್ಕೆ ಧಾವಿಸಿ ಬಂದು ಉಳಿದ ಸದಸ್ಯರನ್ನು ಸೇರಿಕೊಂಡರು. ಪ್ರತಿಯಾಗಿ ಬಿಎಸ್‌ಪಿ ಸದಸ್ಯರು ಘೋಷಣೆಗಳನ್ನು ಕೂಗಿದರು.

ಸದನದಲ್ಲಿ ಗದ್ದಲ ಜೋರಾದ್ದರಿಂದ, ಕಲಾಪ ನಡೆಸುವುದು ಅಸಾಧ್ಯವಾಗಿ, ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಾಧ್ಯಕ್ಷ ಕರಿಯ ಮುಂಡ ಸದನವನ್ನು ಮಂಗಳವಾರಕ್ಕೆ ಮುಂದಕ್ಕೆ ಹಾಕಿದರು. ರಾಜ್ಯಸಭೆಯಲ್ಲೂ ಬೆಳಿಗ್ಗೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಸದಸ್ಯರು ಶೀಲಾ ದೀಕ್ಷಿತ್ ರಾಜೀನಾಮೆಗೆ ಪಟ್ಟುಹಿಡಿದು ಸಭಾಪತಿ ಪೀಠದ ಮುಂದಿನ ಆವರಣಕ್ಕೆ ಬಂದರು.

 ಎಡ ಪಕ್ಷಗಳು ಮತ್ತು ಎಐಡಿಎಂಕೆ ಸದಸ್ಯರು ಇವರನ್ನು ಹಿಂಬಾಲಿಸಿದರು. ಸದಸ್ಯರ ಗದ್ದಲ ನಿಯಂತ್ರಿಸುವುದು ಕಷ್ಟವಾದಾಗ ಉಪ ಸಭಾಪತಿ ಕೆ.ರೆಹಮಾನ್ ಖಾನ್ ಸದನವನ್ನು ನಾಳೆಗೆ ಮುಂದೂಡಿದರು.

ಸಂಸತ್ತಿನಲ್ಲಿ ಶುಕ್ರವಾರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಸಿಎಜಿ ವರದಿ ಮಂಡನೆಯಾಗಿದ್ದು, ಗುತ್ತಿಗೆ ನೀಡುವಾಗ ಪಾರದರ್ಶಕ ನಿಯಮಗಳನ್ನು ಪಾಲಿಸಿಲ್ಲ. ಸ್ವಜನ ಪಕ್ಷಪಾತ ಮಾಡಲಾಗಿದೆ. ನ್ಯಾಯಸಮ್ಮತವಲ್ಲದ ದರಗಳನ್ನು ಮಂಜೂರು ಮಾಡಲಾಗಿದೆ ಎಂಬುದು ಸೇರಿದಂತೆ ಹಲವಾರು ಆರೋಪಗಳನ್ನು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT