ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಂಠಿಗೆ ರೋಗ ಬಾಧೆ: ರೈತರಿಗೆ ಆತಂಕ

Last Updated 7 ಅಕ್ಟೋಬರ್ 2011, 4:45 IST
ಅಕ್ಷರ ಗಾತ್ರ

ಹಳೇಬೀಡು: ಸುತ್ತಮುತ್ತಲಿನ ಭಾಗದಲ್ಲಿ ಶುಂಠಿ ಬೆಳೆಗೆ ವಿವಿಧ ರೋಗಗಳು ಕಾಣಿಸಿಕೊಂಡು ರೈತರನ್ನುಆತಂಕ ಊಂಟು ಮಾಡಿದೆ.

ಶುಂಠಿಗೆ ತಗುಲಿರುವ ರೋಗ ನಿಯಂತ್ರಿಸುವುದು ಬೆಳೆಗಾರರಿಗೆ ಸವಲಾಗಿದ್ದು, ಔಷಧ ಸಿಂಪಡಣೆಗೆ ಹಾಕಿದ ಬಂಡವಾಳ ಪಡೆಯುವುದು ಕಷ್ಟವಾಗಿದೆ. ಗೆಡ್ಡೆ ಕಟ್ಟಿದ ಶುಂಠಿಯ ಮುಂದಿನ ಬೆಳೆವಣಿಗೆಗೆ ರೋಗಗಳು ಅಡ್ಡಿಯಾಗಿವೆ.

ದಿನದಿಂದ ದಿನಕ್ಕೆ ರೋಗ ಹೆಚ್ಚಾಗುತ್ತಿದ್ದು, ಈಗ ಬೆಳೆಯನ್ನು ಹೊಲದಲ್ಲಿ ಬಿಟ್ಟರೂ ನಷ್ಟ, ಕಟಾವು ಮಾಡಿದರೂ ನಷ್ಟ ಎಂಬುದು ರೈತರಿಗೆ ಖಚಿತವಾಗಿದೆ. ದುಪ್ಪಟ್ಟು ಆದಾಯದ ಕನಸುಕಂಡು ರೈತರು ಹಾಕಿದ ಬಂಡವಾಳಕ್ಕೆ ಸಂಚಕಾರ ಬಂದಿದೆ.

ಒಂದು ರೋಗ ಬಂದಿದ್ದರೆ ಹೇಗಾದರೂ ನಿಯಂತ್ರಿಸಬಹುದಾಗಿತ್ತು. ನಾಲ್ಕಾರು ರೋಗಗಳು ಬೆಳಿಗ್ಗೆ ಲಗ್ಗೆ ಹಾಕಿ ಬೆಳೆಗಾರರ ನಿದ್ದೆಗೆಡಿಸಿವೆ. ಕಳೆದ ವರ್ಷ ಕೊಳೆ ರೋಗ, ಬಿಳಿಸುಳಿ ರೋಗ ಆವರಿಸಿತ್ತು. ಕೆಲವು ಕಡೆ ಮಾತ್ರ ಬಿಳಿ ಚುಕ್ಕೆ ರೋಗ ಕಣಿಸಿಕೊಂಡಿತ್ತು.

ಈ ವರ್ಷ ರೋಗದ ಪ್ರಮಾಣ ಹೆಚ್ಚಾಗಿದ್ದು, ಹೊಸ ರೋಗಗಳು ಸಹ ಕಾಣಿಸಿಕೊಂಡಿವೆ. ತರಕಾರಿ ಬೆಳೆಗಳಿಗೆ ಹೆಚ್ಚು ತಗುಲುವ ಬೆಂಕಿ ರೋಗ ಶುಂಠಿ ಬೆಳೆಗೂ ವ್ಯಾಪಕವಾಗಿ ಹರಡುತ್ತಿದೆ.

ಕೊಳೆರೋಗ: `ರೋಗ ಕಾಣಿಸಿಕೊಂಡ ಶುಂಠಿ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿ ನಂತರ ಸಂಪೂರ್ಣವಾಗಿ ಒಣಗುತ್ತಿದೆ. ಗೆಡ್ಡೆ ಬೆಳವಣಿಗೆಯಾಗದೆ ಗೆಡ್ಡೆ ಕೊಳೆಯುತ್ತಿದೆ. ಈ ರೋಗ ಗಿಡದಿಂದ ಗಿಡಕ್ಕೆ ಮಾತ್ರಲ್ಲದೆ ಸುತ್ತಮುತ್ತಲಿನ ಜಮೀನಿಗೂ ಪಸರಿಸುತ್ತದೆ.

`ಕೊಳೆ ರೋಗ ಕಾಣಿಸಿಕೊಂಡ ತಕ್ಷಣ ಅಂತಹ ಗಿಡವನ್ನು ಗೆಡ್ಡೆ ಸಮೇತ ತೆಗೆದು ಬೆಂಕಿಯಲ್ಲಿ ಸುಟ್ಟು ನಾಶ ಪಡಿಸಬೇಕು. ಗಿಡ ಬೆಳೆದ ಸ್ಥಳದಲ್ಲಿನ ಮಣ್ಣಿಗೂ ಔಷದ ಸಿಂಪಡಿಸಬೇಕು~ ಎನ್ನುತ್ತಾರೆ ತಜ್ಞರು.

ಕಳೆದ ವರ್ಷದ ಮಳೆ ಅರ್ಭಟಕ್ಕೆ ತಗ್ಗು ಪ್ರದೇಶದಲ್ಲಿ ರೋಗ ಕಾಣಿಸಿಕೊಂಡಿತ್ತು. ಈ ವರ್ಷ ಮಳೆ ಕಡಿಮೆಯಾದರೂ ಕೊಳೆರೋಗ ಶುಂಠಿಯನ್ನು ಬೆನ್ನು ಬಿಡದೆ ಕಾಡುತ್ತಿದೆ.

ಬಿಳಿ ಚುಕ್ಕೆ ರೋಗ:ಗಿಡದ ಎಲೆಗಳಲ್ಲಿ ಬಿಳಿ ಚುಕ್ಕೆ ಕಾಣಿಸಿಕೊಂಡು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಪಸರಿಸುತ್ತದೆ. ಗಿಡದ ಬೆಳವಣಿಗೆ ಕುಂಠಿತವಾಗುವುದಲ್ಲದೆ, ಗೆಡ್ಡೆಯ ಬೆಳವಣಿಗೆಗೂ ಅಡ್ಡಿಯಾಗುತ್ತಿದೆ.

ಬಿಳಿ ಸುಳಿ ರೋಗ: ಎಲೆಯ ಸುಳಿಯಿಂದ ಆರಂಭವಾಗಿ ಸಂಪೂರ್ಣ ಗಿಡ ಬಿಳಿಚಿಕೊಳ್ಳುತ್ತಿದೆ. ಮಳೆ ಇಲ್ಲದೆ ಉಷ್ಣಾಂಶ ಹೆಚ್ಚಾಗಿರುವುದರಿಂದ ರೋಗ ಬಂದಿದೆ. ಬಿಳಿ ಸುಳಿ ರೋಗವಲ್ಲ ಮಳೆ ಬಂದು ಭೂಮಿ ತಂಪಾದರೆ ಸರಿಹೋಗುತ್ತದೆ ಎನ್ನುತ್ತಾರೆ ಬೆಳೆಗಾರರು.

ಬೆಂಕಿ ರೋಗ: ತರಕಾರಿ ಬೆಳೆಯಲ್ಲಿ ಕಾಣಿಸುವ ಬೆಂಕಿ ರೋಗ ಈ ವರ್ಷ ಶುಂಠಿಯತ್ತ ಪಾದ ಬೆಳೆಸಿದೆ. ಎಲೆ ತುದಿಯಿಂದ ಗಿಡ ಒಣಗಲಾರಂಭಿಸಿ ನಂತರ ಸಂಪೂರ್ಣ ಗಿಡ ತರಗಿನಂತಾಗುತ್ತಿದೆ. ದುಪ್ಪಟ್ಟು ವೆಚ್ಚದ ಔಷಧ ಸಿಂಪಡಣೆ ಮಾಡಿದರೂ ರೋಗ ತಹಬದಿಗೆ ಬರುತ್ತಿಲ್ಲ.

ಬೆಲ್ಲದ ರೋಗ: ಈ ರೋಗ ಕಟಾವು ಮಾಡಿದಾಗ ಮಾತ್ರ ಕಂಡು ಬರುತ್ತದೆ. ಶುಂಠಿ ಆಕಾರ ಇದ್ದರೂ ಮುರಿದಾಗ ಕಪ್ಪು ಬೆಲ್ಲದಂತೆ ಕಾಣುತ್ತದೆ. ಕೊಳೆ ರೋಗ ತಗುಲಿದ ಬೆಳೆಯಲ್ಲಿ ಉಳಿದ ಗೆಡ್ಡೆ ಬೆಲ್ಲದಂತಾಗುತ್ತದೆ. ಇದು ಸಹ ಕೊಳೆ ರೋಗ ಎನ್ನುತ್ತಾರೆ ಬೆಳೆಗಾರರು.

ರೋಗಗಳ ಹಾವಳಿ ತಪ್ಪಿಸಲು ಸಾಧ್ಯವಾಗದೆ ಅವಧಿಗೆ ಮುಂಚಿತವಾಗಿ ಕಟಾವು ಮಾಡಲಾಗುತ್ತಿದೆ. ಕಡಿಮೆ ಫಸಲಿನೊಂದಿಗೆ ಧಾರಣೆ ಕಡಿಮೆಯಾಗಿದ್ದು, ಬೆಳೆಗಾರರನ್ನು ಕಂಗೆಡಿಸಿದೆ.

ಕೇರಳ ಬೆಳೆಗಾರರು ಶುಂಠಿ ಬೆಳೆಯ ಪರಿಣಿತಿ ಹೊಂದಿದ್ದಾರೆ. ಅವರು ಮಾಡಿದ ಬೆಳೆಯತ್ತ ರೋಗ ಸುಳಿಯುವುದಿಲ್ಲ ಎನ್ನುತ್ತಿದ್ದರು ಸ್ಥಳೀಯ ರೈತರು. ಈಗ ಕೆರಳ ಬೆಳೆಗಾರರಿಗೂ ರೋಗಗಳು ಸವಲಾಗಿವೆ.
`ಶೀಘ್ರದಲ್ಲಿಯೇ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಶುಂಠಿ ಬೆಳೆ ಸಮಿಕ್ಷೆ ನಡೆಸಿ, ಬೆಳೆಗೆ ತಗುಲಿದ ರೋಗ ನಿಯಂತ್ರಣಕ್ಕೆ ಸಲಹೆ ನೀಡಬೇಕು~ ಎಂಬುದು ರೈತರ ಒತ್ತಾಯ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT