ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಚಿ, ರುಚಿ ಎರಡೂ ಮುಖ್ಯ

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನಗರೀಕರಣದ ವೇಗ ಹೆಚ್ಚಿದಂತೆ ಬೀದಿ ಬದಿಯ ತಿನಿಸುಗಳ ಜನಪ್ರಿಯತೆಯೂ ಹೆಚ್ಚಾಗುತ್ತಿದೆ. ಈ ಬೆಳವಣಿಗೆ ಸಹಜವಾಗಿಯೇ ಬೀದಿ ಬದಿಯ ತಿನಿಸಿನ ಗುಣಮಟ್ಟ ನಿಯಂತ್ರಣ ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಕಾರಣವಾಗುತ್ತಿದೆ. ಕೆಲವು ಅಂದಾಜುಗಳಂತೆ ಶೇಕಡಾ 80ರಷ್ಟು ಜನರು ಬೀದಿಬದಿಯ ಆಹಾರವನ್ನು ಒಂದಲ್ಲಾ ಒಂದು ಸಂದರ್ಭದಲ್ಲಿ ತಿಂದಿರು­ತ್ತಾರೆ. ಒಂದು ಕಾಲದಲ್ಲಿ ಮಹಾನಗರಗಳಿಗೆ ಸೀಮಿತವಾಗಿದ್ದ ಬೀದಿಬದಿಯ ತಿನಿಸುಗಳು ಈಗ ಸಣ್ಣ ಪಟ್ಟಣಗಳಿಗೂ ವ್ಯಾಪಿಸಿವೆ.
ಖಾದ್ಯಗಳನ್ನು ತಯಾರಿಸುವ ವಿಧಾನದಲ್ಲಿ ಮತ್ತು ಸೌಕರ್ಯಗಳಲ್ಲಿ ಆಗಿರುವ ಬದಲಾವಣೆ­ಯೂ ಇದಕ್ಕೊಂದು ಕಾರಣ.

ಸಾಂಪ್ರದಾಯಿಕ ಆಹಾರ ಪದ್ಧತಿಯೇ ಇಂದಿಗೂ ಹೆಚ್ಚು ವ್ಯಾಪಕವಾಗಿದೆ. ಆದರೆ ರುಚಿಯ ಭಿನ್ನ ಆಯ್ಕೆಯ ಸಾಧ್ಯತೆ­ಗಳು ಈಗ ಹಿಂದೆಂದಿಗಿಂತಲೂ ಹೆಚ್ಚಾಗಿವೆ. ಪರಿಣಾಮವಾಗಿ ಆಹಾರ ಪದ್ಧತಿಯಲ್ಲೂ ಬದಲಾವಣೆಗಳು ಕಂಡುಬರುತ್ತಿವೆ. ಹೊಸ ಕಾಲದ ಈ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಆಹಾರ ಸುರಕ್ಷೆ  ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ), ಬೀದಿಬದಿಯಲ್ಲಿ ಮಾರಾಟವಾಗುವ ಖಾದ್ಯಗಳ ಗುಣಮಟ್ಟ ಕುರಿತಂತೆ ವ್ಯಾಪಕ ಅಧ್ಯಯನ ನಡೆಸಲು ಹೊರಟಿದೆ.

ಆರೋಗ್ಯ ಇಲಾಖೆ, ದೇಶದ ಹದಿನಾರು ನಗರಗಳಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಬೀದಿಬದಿಯ ಆಹಾರಗಳಲ್ಲಿ ಶೇಕಡಾ 90ರಷ್ಟು ಸೇವನೆಗೆ ಯೋಗ್ಯವಲ್ಲ. ಎಫ್ಎಸ್ಎಸ್ಎಐ ಈಗಾಗಲೇ ಕೋಲ್ಕತ್ತದಲ್ಲಿ ನಡೆಸಿದ ಅಧ್ಯಯನ ಹೇಳುತ್ತಿರುವಂತೆ ಅಲ್ಲಿನ ಬೀದಿ ಬದಿಯ ಆಹಾರಗಳ ಬೆಲೆ ಕಡಿಮೆ. ಕ್ಯಾಲರಿ ದೃಷ್ಟಿಯಿಂದ ಪೌಷ್ಟಿಕತೆಯನ್ನೂ ಒದಗಿಸುತ್ತವೆ. ಆದರೆ ನೈರ್ಮಲ್ಯ ಅತೃಪ್ತಿಕರ. ಬಳಸುವ ನೀರು, ಅಡುಗೆ ತಯಾರಿ, ತಿನಿಸುಗಳ ಪ್ರದರ್ಶನ, ತ್ಯಾಜ್ಯ ನಿರ್ವಹಣೆ ಯಾವುವೂ ಅಗತ್ಯವಿರುವ ಮಟ್ಟದಲ್ಲಿಲ್ಲ.

ಎಫ್ಎಸ್ಎಸ್ಎಐ ಮುಂದಿನ ದಿನಗಳಲ್ಲಿ ಲಖನೌ, ವಾರಣಾಸಿಯಲ್ಲೂ ಮಾದರಿ ಸಮೀಕ್ಷೆ ನಡೆಸಲು ಉದ್ದೇಶಿಸಿದೆ. ಇದರ ಫಲಿತಾಂಶವನ್ನು ಆಧಾರವಾಗಿಟ್ಟುಕೊಂಡು ಎಂಟು ನಗರಗಳಲ್ಲಿ ಮಾದರಿ ಸುರಕ್ಷಿತ ಆಹಾರ ವಲಯಗಳನ್ನು ಸೃಷ್ಟಿಸುವ ಪ್ರಸ್ತಾವವೊಂದನ್ನು ಮುಂದಿಟ್ಟಿದೆ.  ಇದೊಂದು ಶ್ಲಾಘನಾರ್ಹ ಕೆಲಸ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಸಮೀಕ್ಷೆಗಳು ಅಂದಾಜಿಸಿರುವಂತೆ ಬೀದಿ ಬದಿಯಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ಸಂಖ್ಯೆ ಸುಮಾರು ಕೋಟಿಯಷ್ಟಿದೆ.

ಈ ಸಂಖ್ಯೆಯೇ ಬೀದಿ ಬದಿಯ ಆಹಾರ ಮಾರಾಟದ ಬೃಹತ್ ಸ್ವರೂಪವನ್ನೂ ಅದನ್ನು ಅವಲಂಬಿಸಿರುವವರ ಪ್ರಮಾಣವನ್ನೂ ಸೂಚಿಸುತ್ತಿದೆ. ಈ ಕ್ಷೇತ್ರದಲ್ಲಿ ಗುಣಮಟ್ಟ ನಿಯಂತ್ರಣ ಎಂಬುದು ಬಡವರ ಬದುಕು, ತಿನ್ನುವವರ ರುಚಿಯ ಆಯ್ಕೆಯ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ಆರೋಗ್ಯ ಮೂರನ್ನೂ ಸರಿದೂಗಿಸುವ ಕೆಲಸ. ಇದು ಸುಲಭಸಾಧ್ಯವಲ್ಲ. ಆದರೆ ಇದಕ್ಕೊಂದು ಆರಂಭ ಆಗಲೇಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT