ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಚಿತ್ವದ ಪಾಠ ಹೇಳುವವರಿಗೆ...

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ, ಮೂತ್ರ ವಿಸರ್ಜನೆ ಮಾಡುವವರಿಗೆ, ಕಸ ಸುರಿಯುವವರಿಗೆ ಇತ್ಯಾದಿ ‘ತಪ್ಪೆಸಗುವವರಿಗೆ’ ದಂಡ ವಿಧಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ, ಇಂಥದೊಂದು ನಿಯಮ ಜಾರಿಗೆ ತರುವ ಮುನ್ನ ಆಡಳಿತ ಯಂತ್ರವು ಮಾಡಬೇಕಾದ ಕಾರ್ಯಗಳು ಒಂದಷ್ಟು ಇವೆ.

ನಾನು ವಾಸವಾಗಿರುವ ವಿದ್ಯಾರಣ್ಯಪುರ ಬಡಾವಣೆಯೂ ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ಉದ್ದದ, ಜನನಿಬಿಡ ರಸ್ತೆಗಳಲ್ಲಿ ಸಾರ್ವಜನಿಕ ಮೂತ್ರಾಲಯಗಳೇ ಇಲ್ಲ. ದಾರಿಹೋಕರು ಮೂತ್ರಶಂಕೆ ನಿವಾರಿಸಿಕೊಳ್ಳಲು ರಸ್ತೆಬದಿಯನ್ನೇ ಬಳಸಿಕೊಳ್ಳುವ ಪರಿಸ್ಥಿತಿ ಅನಿವಾರ್ಯವಾಗಿಬಿಟ್ಟಿದೆ. ಮೊದಲು ಆಡಳಿತ ಯಂತ್ರವು ಇಡೀ ನಗರದಲ್ಲಿ ಅಲ್ಲಲ್ಲಿ ಮೂತ್ರಾಲಯಗಳನ್ನು ಕಟ್ಟಿಸಲಿ.

ಉಚಿತ ಮೂತ್ರಾಲಯ ಮತ್ತು ಹಣ ತೆತ್ತು ಉಪಯೋಗಿಸಬೇಕಾದ ಮೂತ್ರಾಲಯ ಇವೆರಡೂ ಸ್ಥಳಗಳೂ ನೀರಿನ ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಗಬ್ಬು ನಾರುವುದನ್ನು ತಡೆಗಟ್ಟಲಿ. ಅನಂತರವೂ ರಸ್ತೆಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಿದರೆಂದರೆ ಆಗ ಅಂಥವರಿಗೆ ದಂಡ ವಿಧಿಸಲಿ.

ರಾಜಧಾನಿಯ ಕಸ ವಿಲೇವಾರಿಯ ವೈಫಲ್ಯವಂತೂ ಜಗಜ್ಜಾಹೀರಾಗಿದೆ. ನಿವಾಸಿಗಳ ತಪ್ಪಿಗಿಂತ ಹೆಚ್ಚಾಗಿ, ಆಡಳಿತ ಯಂತ್ರದ ಅಸಾಮರ್ಥ್ಯದಿಂದಾಗಿಯೇ ಬೆಂಗಳೂರು ಇಂದು ತ್ಯಾಜ್ಯ ವಸ್ತುಗಳ ಕೂಪವಾಗಿದೆ. ರಸ್ತೆ ಬದಿಗಳಲ್ಲಿ, ಮೋರಿಗಳಲ್ಲಿ, ಬಯಲು ಪ್ರದೇಶಗಳಲ್ಲಿ ಮತ್ತು ಖಾಲಿ ನಿವೇಶನಗಳಲ್ಲಿ ವರ್ಷಗಳಿಂದಲೂ ಕೊಳೆತು ನಾರುತ್ತಿರುವ ಕಸವನ್ನಾಗಲೀ ಪಾರ್ಥೇನಿಯಂನಂತಹ ಅಪಾಯಕರ ಗಿಡಗಂಟೆಗಳನ್ನಾಗಲೀ ತೆರವುಗೊಳಿಸಲು ಮಹಾನಗರಪಾಲಿಕೆಯ ಕೈಲಾಗುತ್ತಿಲ್ಲ.

ವಿದ್ಯಾರಣ್ಯಪುರ ಬಡಾವಣೆಯ ಖಾಲಿ ನಿವೇಶನವೊಂದರಲ್ಲಿ ವರ್ಷಗಳಿಂದ ಕಸ ಮತ್ತು ಕಳೆಗಿಡಗಳು ತುಂಬಿಕೊಂಡಿದ್ದು ಮೂತ್ರ ವಿಸರ್ಜನೆ ಮತ್ತು ತ್ಯಾಜ್ಯ ಹೇರಲು ಬಳಕೆಯಾಗುತ್ತಿದೆ. ಹತ್ತಿರದಲ್ಲೆಲ್ಲೂ ಮೂತ್ರಾಲಯ ಇಲ್ಲದಿರುವುದು ಅವರಿಗೆ ವರದಾನವಾಗಿದ್ದರೆ ಅಕ್ಕಪಕ್ಕದ ನಿವಾಸಿಗಳಿಗೆ ನಿತ್ಯದ ಹಿಂಸೆ.

ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಾವು ಕಾರ್ಪೊರೇಟರ್‌ ನಂದಿನಿ ಶ್ರೀನಿವಾಸ್‌, ಪಾಲಿಕೆ ಆಯುಕ್ತರು, ಸಹಾಯಕ ಆಯುಕ್ತರಿಗಷ್ಟೇ ಅಲ್ಲದೆ ಶಾಸಕರಿಗೂ ಲಿಖಿತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಿದ್ಯಾರಣ್ಯಪುರದ ಕೆರೆ ಬಯಲು ಶೌಚಾಲಯವಾಗಿದೆ.
ಈ ಪರಿಸ್ಥಿತಿ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಇದೆ. ಇದನ್ನೆಲ್ಲ ಸರಿಮಾಡದೆ ನಾಗರಿಕರಿಗೆ ದಂಡ ವಿಧಿಸಲು ಹೊರಟರೆ ಯಾವ ಪ್ರಯೋಜನವೂ ಇಲ್ಲ. ಖಾಲಿ ನಿವೇಶನ  ಮಾಲೀಕರಿಗೆ ನಾವು ಹೇಳಿದರೆ ಬೆಲೆ ಇಲ್ಲ. ಮಹಾನಗರಪಾಲಿಕೆಯು ನಿವೇಶನ ಸ್ವಚ್ಛಗೊಳಿಸಿ ಮಾಲೀಕರಿಂದ ದಂಡ ಸಹಿತ ಶುಲ್ಕ ವಸೂಲು ಮಾಡಲು ಅಧಿಕಾರ ಹೊಂದಿದೆ. ಆದರೆ ಆ ಕೆಲಸವನ್ನು ಅದು ಮಾಡುತ್ತಿಲ್ಲ.

ಅಂದಹಾಗೆ, ಕಸ, ಮೂತ್ರಕ್ಕಿಂತ ಅಪಾಯಕಾರಿ, ಬೀಡಿ–ಸಿಗರೇಟ್‌ಗಳ ಹೊಗೆ. ಸಾರ್ವಜನಿಕ ಸ್ಥಳಗಳಲ್ಲಿ ಯಥೇಚ್ಛ ಧೂಮಪಾನ ಮಾಡುತ್ತ ಇತರರ ಶ್ವಾಸಕೋಶಗಳನ್ನು ಬಲಿ ತೆಗೆದುಕೊಳ್ಳತ್ತಿರುವ ಬಹುತೇಕ ವಿದ್ಯಾವಂತ (ಅ)ನಾಗರಿಕರ ಮೇಲೆ ಆಡಳಿತ ಯಂತ್ರವು ಕಾನೂನಿನ ಗದಾಪ್ರಹಾರ ಮಾಡಲಿ. ಮೂತ್ರದ ವಾಸನೆ, ಕಸದ ದುರ್ನಾತ, ವಾಯುಮಾಲಿನ್ಯ, ಬೀಡಿ–ಸಿಗರೇಟ್‌ಗಳ ಹೊಗೆಯನ್ನು ಸಹಿಸಲಾರದೆ ಗಂಟಲು ಶುದ್ಧ ಮಾಡಿಕೊಳ್ಳಲು ರಸ್ತೆಯಲ್ಲಿ ಉಗುಳುವ ಅಸಹಾಯಕರ ವಿರುದ್ಧ ಕ್ರಮ ಕೈಗೊಳ್ಳುವುದು ಆಮೇಲಿನ ಮಾತು.

–ಎಚ್‌. ಆನಂದರಾಮ ಶಾಸ್ತ್ರಿ, ನಾಲ್ಕನೇ ಎ ಮುಖ್ಯರಸ್ತೆ, ಮೂರನೇ ಹಂತ,  ಬಿಇಎಲ್ ಬಡಾವಣೆ, ವಿದ್ಯಾರಣ್ಯಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT