ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ಆಹಾರ ಸೇವಿಸಲು ಸಲಹೆ

Last Updated 23 ಏಪ್ರಿಲ್ 2013, 9:11 IST
ಅಕ್ಷರ ಗಾತ್ರ

ಧಾರವಾಡ : `ನಮ್ಮ ಜೀವನದ ಶೈಲಿಯಲ್ಲಿ ನಾವು ತೆಗೆದುಕೊಳ್ಳುವ ಆಹಾರ ವಿಷಯುಕ್ತವಾಗಿದೆ. ಕರಿದ ಹಾಗೂ ಬೇಕರಿ ಪದಾರ್ಥಗಳು ಕಣ್ಣಿಗೆ ಚೆನ್ನಾಗಿ ಕಂಡರೂ ಅವುಗಳನ್ನು ಸೇವಿಸಿದಾಗ ಆರೋಗ್ಯಕ್ಕೆ ಹಾನಿಯಾಗುವುದು ಖಂಡಿತ. ಆದ್ದರಿಂದ ಮಕ್ಕಳು ಮನೆಯ ಶುದ್ಧವಾದ ಆಹಾರವನ್ನು ಸೇವಿಸಿ ಆರೋಗ್ಯವಾಗಿರುವದನ್ನು ರೂಢಿಸಿಕೊಳ್ಳಬೇಕು' ಎಂದು ಜೆಎಸ್‌ಎಸ್ ಕಾಲೇಜಿನ ಉಪನ್ಯಾಸಕಿ ಪ್ರೊ.ಸುಕನ್ಯಾ ಮಾರುತಿ ಸಲಹೆ ನೀಡಿದರು.

ಇಲ್ಲಿಯ ರಂಗಾಯಣದಲ್ಲಿ ಹಮ್ಮಿಕೊಂಡಿರುವ ಮಕ್ಕಳ ವಿಶೇಷ ಬೇಸಿಗೆ ಶಿಬಿರದ ಚಿಣ್ಣರ ಮೇಳದಲ್ಲಿ, ಗ್ರೀನ್ ಆರ್ಮಿಯ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು ಅವರು, `ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ, ಸುತ್ತಮುತ್ತಲಿನವರಿಗೆ ಪರಿಸರದ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಇಂದಿನ ಮಕ್ಕಳು ಮಾಡಬೇಕು' ಎಂದರು.

ಎಲ್‌ಸಿಪಿಎಸ್ ಶಾಲೆಯ ಸಂಸ್ಥಾಪಕ ಉದಯಕುಮಾರ ಕೊಳ್ಳಿಮಠ ಮಾತನಾಡಿ, `ಇಂದು ಹೆಚ್ಚಾಗುತ್ತಿರುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಲ್ಲದಿದ್ದರೆ ಅದರಿಂದ ಮಾನವ ಕುಲದ ವಿನಾಶ ಕಟ್ಟಿಟ್ಟ ಬುತ್ತಿ. ಪ್ರತಿಯೊಬ್ಬರು ಗಿಡಗಳನ್ನು ಕಡಿಯದೆ ಗಿಡಗಳನ್ನು ಬೆಳೆಸುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಅಲ್ಲದೇ ಕೆರೆ ಕಟ್ಟೆಗಳನ್ನು ಉಳಿಸುವ ಎಲ್ಲ ವಿಷಯಗಳನ್ನು ಮಕ್ಕಳು ಈಗಿನಿಂದಲೇ ರೂಢಿಸಿಕೊಳ್ಳಬೇಕು' ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣದ ನಿರ್ದೇಶಕ ಸುಭಾಸ ನರೇಂದ್ರ, `ಇಂದು ನಮ್ಮನ್ನು ಹೊತ್ತು ನಿಂತ ಈ ಭೂಮಿ ತಾಯಿಯ ಋಣವನ್ನು ತೀರಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ. ಅವಳ ಋಣವನ್ನು ತೀರಿಸಬೇಕಾದರೆ ಪರಿಸರ ಮಾಲಿನ್ಯ ಮಾಡದೇ, ಗಿಡಗಳನ್ನು ಕಡಿಯದೇ ಗಿಡಗಳನ್ನು ಬೆಳೆಸಿ, ಭೂಮಿಯ ಮೇಲಿರುವ ಪಂಚಭೂತಗಳನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲ ಜಾಗೃತರಾಗಬೇಕಿದೆ' ಎಂದರು.

ರಂಗಾಯಣದ ಆಡಳಿತಾಧಿಕಾರಿ ಕೆ.ಎಚ್.ಚೆನ್ನೂರ, ವಿಜಯ ದೊಡಮನಿ, ಅನಿಲ ಅಳ್ಳೊಳ್ಳಿ, ಪ್ರಕಾಶ ಮುತ್ತಗಿ, ಮಂಜುನಾಥ ಗದಗಕರ, ಮಂಜುನಾಥ ಮದ್ನೂರ, ಡಿ.ನಾಗೇಶ ಹಾಗೂ ವೆಂಕಟೇಶ ಇದ್ದರು. ಗ್ರೀನ್ ಆರ್ಮಿ ಅಧ್ಯಕ್ಷ ಪ್ರಕಾಶ ಗೌಡರ ಮಾತನಾಡಿದರು. ಶಿಬಿರದ ಸಂಚಾಲಕ ಕೆ.ಜಗುಚಂದ್ರ ಪ್ರಾರ್ಥಿಸಿದರು. ಮಲ್ಲಪ್ಪ ಹೊಂಗಲ್ ಸ್ವಾಗತಿಸಿದರು. ವಿ.ಎನ್.ಕೀರ್ತಿವತಿ ನಿರೂಪಿಸಿದರು. ನಂದೀಶ ಕಡಕೋಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT