ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ಇಂಧನ ಯೋಜನೆ

ಸುದ್ದಿ ಹಿನ್ನೆಲೆ
Last Updated 9 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಜಾಗತಿಕ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು ತಮ್ಮ ಆಡಳಿತದ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಕಳೆದ ವಾರ ಪ್ರಕಟಿಸಿದ್ದಾರೆ. ಅಮೆರಿಕದಲ್ಲಿನ ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್‌ ಉತ್ಪಾದಿಸುವ ಸ್ಥಾವರಗಳ ಕಾರ್ಬನ್‌ ಡೈಆಕ್ಸೈಡ್‌ (co2) ಹೊರಸೂಸುವಿಕೆಯನ್ನು 2035ರ ಹೊತ್ತಿಗೆ ಶೇ 32ರಷ್ಟು ತಗ್ಗಿಸುವುದು ಅಂದರೆ 2005ರ ಮಟ್ಟಕ್ಕೆ ಇಳಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. 

ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಪ್ಯಾರಿಸ್‌ನಲ್ಲಿ ನವೆಂಬರ್‌ 30ರಿಂದ ಡಿಸೆಂಬರ್‌ 11ರವರೆಗೆ ನಡೆಯಲಿರುವ 196 ದೇಶಗಳ ಶೃಂಗ ಸಮಾವೇಶಕ್ಕೆ ಮುನ್ನವೇ ಒಬಾಮ ಅವರು ಈ ಯೋಜನೆ ಪ್ರಕಟಿಸಿದ್ದಾರೆ. ಪರಿಸರ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ತಾನು ಎಲ್ಲರಿಗಿಂತ ಮುಂಚೂಣಿಯಲ್ಲಿ ಇರುವುದನ್ನು ವಿಶ್ವಕ್ಕೆ ಮನದಟ್ಟು ಮಾಡಿಕೊಡುವುದೂ ಒಬಾಮ ಅವರ ಆಲೋಚನೆ ಇದ್ದಂತಿದೆ. ಮನುಕುಲದ ಇತಿಹಾಸದಲ್ಲಿಯೇ ಅತ್ಯಂತ ಮಹತ್ವಾಕಾಂಕ್ಷೆಯ ಅಂತರರಾಷ್ಟ್ರೀಯ ಹವಾಮಾನ ಒಪ್ಪಂದ  ಮಾಡಿಕೊಳ್ಳಲು ಪ್ಯಾರಿಸ್‌ ಸಮ್ಮೇಳನದಲ್ಲಿ ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಅಮೆರಿಕದಲ್ಲಿ ವಿದ್ಯುತ್‌ ಸ್ಥಾವರಗಳು, ಕಾರ್ಬನ್‌ ಮಾಲಿನ್ಯಕ್ಕೆ ಅತಿ ದೊಡ್ಡ ಕೊಡುಗೆ ನೀಡುತ್ತಿವೆ. ಇವುಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ಅಮೆರಿಕದ ರಾಜ್ಯಗಳು  ತಮ್ಮ ಇಂಧನ ಬಳಕೆ ಆಧರಿಸಿ ಕಾರ್ಬನ್‌ ಮಾಲಿನ್ಯ ತಗ್ಗಿಸುವ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಹಸಿರು ಮನೆ ಅನಿಲ ಪರಿಣಾಮವನ್ನು ತಗ್ಗಿಸುವುದೂ ಈ ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ.

ಮಾನವ ಚಟುವಟಿಕೆಗಳಿಂದ ಹೊರ ಸೂಸುವ ಹಸಿರುಮನೆ ಅನಿಲಗಳಲ್ಲಿ ಕಾರ್ಬನ್‌ ಡೈಆಕ್ಸೈಡ್‌ ಪ್ರಮುಖವಾಗಿದೆ. ಭೂಮಿಯ ವಾತಾವರಣದಲ್ಲಿ ಇದು ನೈಸರ್ಗಿಕವಾಗಿಯೇ ಇರುತ್ತದೆ. ಮಾನವ ಚಟುವಟಿಕೆಗಳಾದ ವಿದ್ಯುತ್, ಸಾರಿಗೆ ಮತ್ತಿತರ ಕಾರಣಗಳಿಗೆ ವಾತಾವರಣಕ್ಕೆ ಗರಿಷ್ಠ ಪ್ರಮಾಣದಲ್ಲಿ ಸೇರ್ಪಡೆಯಾಗುತ್ತಿದೆ.

ಮಹತ್ವ : ಶಾಖೋತ್ಪನ್ನ ಮತ್ತು ನೈಸರ್ಗಿಕ ಅನಿಲ ವಿದ್ಯುತ್‌ ಸ್ಥಾವರಗಳ ಮಾಲಿನ್ಯ ಮಟ್ಟ ಕಡಿಮೆ ಮಾಡುವುದರಿಂದ  870 ದಶಲಕ್ಷ ಟನ್‌ಗಳಷ್ಟು ಕಾರ್ಬನ್‌ ಡೈಆಕ್ಸೈಡ್‌ ವಾತಾವರಣಕ್ಕೆ ಸೇರುವುದನ್ನು ತಡೆಗಟ್ಟಬಹುದಾಗಿದೆ. ಶುದ್ಧ ಇಂಧನ ಮತ್ತು ಇಂಧನ ದಕ್ಷತೆಯ ಈ ಯೋಜನೆ ಕಾರ್ಯಗತಗೊಂಡರೆ ಅದರಿಂದ 17 ಕೋಟಿಗಳಷ್ಟು ಕಾರುಗಳು ರಸ್ತೆಗೆ ಇಳಿಯದಂತೆ ನೋಡಿಕೊಳ್ಳುವುದು ಎಂದರ್ಥ. ಇದರಿಂದ 3,600ರಷ್ಟು ಅಕಾಲಿಕ ಸಾವುಗಳನ್ನು ಮತ್ತು 90 ಸಾವಿರ ಮಕ್ಕಳಲ್ಲಿ ಆಸ್ಥಮಾ ಲಕ್ಷಣಗಳನ್ನೂ ತಪ್ಪಿಸಬಹುದು.

ವಿಶ್ವದ ದೊಡ್ಡಣ್ಣ ಸಾಗಿದ ದಾರಿಯಲ್ಲಿ ಇತರ ದೇಶಗಳೂ ಹೆಜ್ಜೆ ಹಾಕಿದರೆ ಜಾಗತಿಕ ಪರಿಸರ ಮಾಲಿನ್ಯ ಮಟ್ಟವನ್ನು ಗಮನಾರ್ಹವಾಗಿ ನಿಯಂತ್ರಿಸಲು ಸಾಧ್ಯವಾಗಲಿದೆ. ಈ ವಿಷಯದಲ್ಲಿ ಚೀನಾ, ಭಾರತ ಮತ್ತು ಬ್ರೆಜಿಲ್‌ಗಳ ಕೊಡುಗೆಯೂ ಸಾಕಷ್ಟು ಇರಲಿದೆ. ಪುನರ್‌ಬಳಕೆ ಇಂಧನ ಅಳವಡಿಕೆ ವಿಷಯದಲ್ಲಿ ಭಾರತವೂ ಈಗಾಗಲೇ ತನ್ನ  ಬದ್ಧತೆ ಪ್ರದರ್ಶಿಸಿದೆ.

ಬೆದರಿಕೆ: ಹವಾಮಾನ ಬದಲಾವಣೆಯು ಪ್ರತಿಯೊಂದು ದೇಶದ ಆರ್ಥಿಕತೆ, ಜನರ ಆರೋಗ್ಯದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತಿದೆ.
*

* ಹವಾಮಾನ ಬದಲಾವಣೆಯಿಂದ ಧ್ರುವ ಪ್ರದೇಶದ ಹಿಮ ಕರಡಿ, ಸಮುದ್ರದ ಆಮೆಗಳು, ಸೇರಿದಂತೆ ಅನೇಕ ಪ್ರಾಣಿಗಳ ಸಂತತಿ ವಿನಾಶದ ಅಂಚಿನಲ್ಲಿವೆ.
*1979ರಲ್ಲಿ ಜಿನಿವಾದಲ್ಲಿ ವಿಶ್ವದ ಮೊಟ್ಟ ಮೊದಲ ಹವಾಮಾನ ಬದಲಾವಣೆ ಸಮ್ಮೇಳನ ನಡೆದಿತ್ತು.
* 2005ರಲ್ಲಿ ಹಸಿರುಮನೆ ಅನಿಲಗಳ ಮಾಲಿನ್ಯವನ್ನು 2008ರಿಂದ 2012ರ ಅವಧಿಯಲ್ಲಿ 1990ರಲ್ಲಿದ್ದ ಮಟ್ಟಕ್ಕೆ ತಗ್ಗಿಸುವ ಗುರಿ ನಿಗದಿಪಡಿಸಲಾಗಿತ್ತು.

*
ನಮ್ಮ ಭವಿಷ್ಯಕ್ಕೆ ಮತ್ತು ಭವಿಷ್ಯದ ಪೀಳಿಗೆಗೆ ಹವಾಮಾನ ಬದಲಾವಣೆಗಿಂತ ದೊಡ್ಡ ಬೆದರಿಕೆ ಬೇರೊಂದಿಲ್ಲ
– ಬರಾಕ್‌ ಒಬಾಮ,
ಅಮೆರಿಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT