ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರಿನ ನಿರೀಕ್ಷೆಯಲ್ಲಿ ತೌಡೂರು ಗ್ರಾಮ

Last Updated 16 ಫೆಬ್ರುವರಿ 2012, 7:25 IST
ಅಕ್ಷರ ಗಾತ್ರ

ಈ ಪುಟ್ಟ ಗ್ರಾಮದಲ್ಲಿ `ಅಭಿವೃದ್ಧಿ~ ಎಂಬುದು ಅರೆಬರೆಯಾದರೂ ಇದು ಸ್ವಾವಲಂಬಿಗಳ ಊರು. ಇಲ್ಲಿನ ಬಹುತೇಕ ಜನರು ಸರ್ಕಾರದ ಅನುದಾನಗಳಿಗೆ ಕಾಯದೆ ನಮ್ಮ ದಿನನಿತ್ಯದ ಕಾಯದಲ್ಲಿ ನಿರತರಾಗುತ್ತಾರೆ. ಪ್ರಯೋಗಶೀಲ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಭಿವೃದ್ಧಿ ಕಡೆ ಮುಖ ಮಾಡಿದ್ದಾರೆ.

ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ `ತೌಡೂರು~ ಸುಮಾರು 2,500 ಜನಸಂಖ್ಯೆ ಇರುವ ಪುಟ್ಟ ಊರು. 1,200 ಮತದಾರರು ಇದ್ದಾರೆ. ಹರಪನಹಳ್ಳಿ ತಾಲ್ಲೂಕು ಕೇಂದ್ರದಿಂದ 24 ಕಿ.ಮೀ. ದೂರದಲ್ಲಿದೆ. ಇಲ್ಲಿ ಮುಸ್ಲಿಂ ಸಮುದಾಯವನ್ನು ಹೊರತುಪಡಿಸಿ ಲಿಂಗಾಯತ, ಕುರುಬ, ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿದಂತೆ ಬಹುತೇಕ ಎಲ್ಲಾ ಜನಾಂಗದವರು ಜೀವನ ನಡೆಸುತ್ತಿದ್ದಾರೆ.

ಹೆಸರಿನಲ್ಲಿದೆ ಸ್ವಾರಸ್ಯ
`ತೌಡೂರು~ ಎಂಬ ಹೆಸರಿನಲ್ಲೇ ಕುತೂಹಲವಿದೆ. ಈ ಹೆಸರು ಹೇಗೆ ಬಂದಿತು ಎನ್ನುವುದಕ್ಕೆ ಯಾರ ಬಳಿಯೂ ಸ್ಪಷ್ಟ ಉತ್ತರವಿಲ್ಲ. ಇದಕ್ಕೆ ಇತಿಹಾಸದಲ್ಲಿ ಸ್ಪಷ್ಟವಾದ ದಾಖಲೆಗಳು ಲಭ್ಯವಿಲ್ಲ. ಆದರೆ, ಜನರ ಬಾಯಿಯಲ್ಲಿ ಹಲವು ಸ್ವಾರಸ್ಯಕರ ಕತೆಗಳು ಹರಿದಾಡುತ್ತಿವೆ.

ಬ್ರಿಟಿಷರ ಕಾಲದಲ್ಲಿ ಶತ್ರುಗಳು ಗ್ರಾಮದ ಮೇಲೆ ದಾಳಿ ನಡೆಸಲು ಬಂದಾಗ ಇಲ್ಲಿನ ಜನ ಗ್ರಾಮದ ಮುಂದೆ ನಿರ್ಮಿಸಲಾಗಿರುವ ಹೊಂಡದ ನೀರಿನ ಮೇಲೆ ನವಣೆ `ತವಡು~ ಹಾಕಿ ಶತ್ರುಗಳು ಅದರಲ್ಲಿ ಬೀಳುವಂತೆ ಮಾಡುತ್ತಿದ್ದರು. ಇದರಿಂದ ಕ್ರಮೇಣ ಈ ಗ್ರಾಮಕ್ಕೆ `ತೌಡೂರು~ ಎಂಬ ಹೆಸರು ಬಂದಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ರೈತರ ಜೇಬು ತುಂಬಿಸುವ `ಚಿಲ್ಲಿ~ ಸೀಡ್ಸ್
ಇಲ್ಲಿ ಇರುವುದು ಬಹುತೇಕ ಮಳೆಯಾಶ್ರಿತ ಕೃಷಿ ಪ್ರದೇಶ. ಜೋಳ, ಮೆಕ್ಕೆಜೋಳ ಇಲ್ಲಿನ ಪ್ರಮುಖ ಬೆಳೆಯಾಗಿದ್ದು, ಕೊಳವೆಬಾವಿ ಆಶ್ರಯಿಸಿ ನೀರಾವರಿ ಮಾಡುತ್ತಿರುವ ರೈತರು, ಈಗ ಮೆಣಸಿನಕಾಯಿ ಸೀಡ್ಸ್‌ನಂತಹ ಪರ್ಯಾಯ ಬೆಳೆ ಕಂಡುಕೊಂಡಿದ್ದಾರೆ. ಒಂದು ಬೆಳೆಗೆ ರೂ. 30 ಸಾವಿರದಿಂದ 40 ಸಾವಿರ ಖರ್ಚು ಮಾಡಿದರೆ ಲಕ್ಷಾಂತರ ರೂಪಾಯಿ ಲಾಭ ಪಡೆಯಬಹುದು. ಇದರಿಂದ ಅಭಿವೃದ್ಧಿ ಹೊಂದಿರುವ ಅನೇಕ ರೈತರು ಇಲ್ಲಿದ್ದಾರೆ. ಉಳಿದಂತೆ ಸರ್ಕಾರದ ಅನೇಕ ಸೌಲಭ್ಯಗಳು ಇಲ್ಲಿನ ರೈತರಿಗೆ ದೊರೆತಿಲ್ಲ.

ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂಬುದು ಗ್ರಾಮಸ್ಥರ ಅಭಿಪ್ರಾಯ. ಇನ್ನು `ಸಮಗ್ರ ಜಲಾನಯನ ನಿರ್ವಹಣೆ ಯೋಜನೆ ಅಡಿ ಕೆರೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದಕ್ಕಾಗಿ ಕೆರೆ ಅಭಿವೃದ್ಧಿ ಸಂಘ ಕೆಲಸ ಮಾಡುತ್ತಿದೆ~ ಎಂದು ಎ.ಎಂ. ಅಜ್ಜಯ್ಯಸ್ವಾಮಿ ಮಾಹಿತಿ ನೀಡಿದರು.

ಫ್ಲೋರೈಡ್ ನೀರಿಗೆ ನಲುಗಿದ ಜನ
ಜಿಲ್ಲೆಯ ವಿವಿಧ ಭಾಗಗಳಲ್ಲಿ ಇರುವಂತೆ ಫ್ಲೋರೈಡ್ ಸಮಸ್ಯೆ ಈ ಗ್ರಾಮಸ್ಥರನ್ನೂ ಕಾಡುತ್ತಿದೆ. ನೀರಿನ ಸಮಸ್ಯೆ ನೀಗಿಸಲು ಕೊಳವೆಬಾವಿ ಕೊರೆಸಲಾಗಿದ್ದು, ನೀರಿನಲ್ಲಿ ಫ್ಲೋರೈಡ್ ಅಂಶ ಇರುವುದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಸಂಚಕಾರ ಎದುರಾಗಿದೆ. ಫ್ಲೋರೈಡ್ ಪರಿಣಾಮವಾಗಿ ಗ್ರಾಮಸ್ಥರಿಗೆ ಕೀಲುನೋವು, ಮಂಡಿನೋವಿನ ಸಮಸ್ಯೆ ಸಾಮಾನ್ಯವಾಗಿದೆ.

ಇಡೀ ಗ್ರಾಮಕ್ಕೆ ಶುದ್ಧ ನೀರಿನ ಸಮಸ್ಯೆ ಎದುರಾಗಿದ್ದು, ಜನರು ಅನೇಕ ಕಾಯಿಲೆಗಳಿಂದ ಬಳಲುವಂತಾಗಿದೆ. ಈ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಇಲ್ಲದಂತಾಗಿದೆ. ಇನ್ನೂ ಇದೇ ನೀರಿಗೆ ಜನ ಪರಿತಪಿಸುವಂತಾಗಿದೆ ಎಂದು ಎಂ. ಲಕ್ಷ್ಯಪ್ಪ ತಮ್ಮೂರಿನ ನೀರಿನ ಸಮಸ್ಯೆಯ ಕುರಿತು ವಿವರಿಸಿದರು.

ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ, ಗ್ರಂಥಾಲಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ ಇವೆ. ಆದರೆ, ಗ್ರಾಮ ಪಂಚಾಯ್ತಿ ಕೇಂದ್ರವಾಗಿರುವ ಈ ಊರಿನಲ್ಲಿ ಆಸ್ಪತ್ರೆಯದ್ದೇ ಸಮಸ್ಯೆ.
 
ಆರೋಗ್ಯ ಸಮಸ್ಯೆ ಎದುರಾದಾಗ ಪಕ್ಕದ ಅರಸೀಕೆರೆ, ಇಲ್ಲವೇ ದಾವಣಗೆರೆ ಹೋಗಬೇಕು. ಇನ್ನು ಜಾನುವಾರುಗಳ ಆಸ್ಪತ್ರೆಯ ಮಾತು ದೂರ. ಜಾನುವಾರು ಪರೀಕ್ಷಿಸಲು ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಪಶು ವೈದ್ಯರಿಗೆ ಗ್ರಾಮಸ್ಥರೇ ನಿರ್ಮಿಸಿರುವ `ಟ್ರೆವಿಸ್~ ಒಂದನ್ನು ಬಿಟ್ಟರೆ ಬೇರೆ ಗತಿ ಇಲ್ಲ.

ವೈಭವದ ಆಂಜನೇಯ ಸ್ವಾಮಿ ರಥೋತ್ಸವ
ಪ್ರತಿವರ್ಷ ರಾಮನವಮಿಯಂದು ಆಂಜನೇಯ ಸ್ವಾಮಿ ರಥೋತ್ಸವ ವೈಭವದಿಂದ ನಡೆಯುತ್ತದೆ. ಸುತ್ತಮುತ್ತ ಅನೇಕ ಹಳ್ಳಿಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ರಥೋತ್ಸವದ ವಿಶೇಷವೆಂದರೆ ಎಲ್ಲಾ ಜನಾಂಗದ ಜನರು ಸಾಮರಸ್ಯದಿಂದ ಉತ್ಸವದಲ್ಲಿ ತೊಡಗುತ್ತಾರೆ.

ಉಡುಸಲಾಂಬಿಕಾ ದೇವಿ ಜಾತ್ರೆ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುತ್ತದೆ. ಗ್ರಾಮದಲ್ಲಿ ಅನೇಕ ದೇವಾಲಯಗಳು ಇವೆ. ಬಸವೇಶ್ವರ ದೇವಸ್ಥಾನ, ಆಂಜನೇಯ ದೇವಸ್ಥಾನ, ಕಲ್ಲೇಶ್ವರ, ಚೌಡಮ್ಮ ದೇವಸ್ಥಾನಗಳು ಇವೆ ಎಂದು ಪ್ರಾಥಮಿಕ ಕೃಷಿ ಪತ್ತನ ಸಹಕಾರ ಸಂಘದ ನಿರ್ದೇಶಕ  ಪಾಟೇಲ್ ಶಿವಾನಂದಗೌಡ ಅವರು ತಿಳಿಸುತ್ತಾರೆ.

ಬಸ್‌ನಿಲ್ದಾಣದ ಕೊರತೆ
ಗ್ರಾಮಕ್ಕೆ ಖಾಸಗಿ ಬಸ್‌ಗಳ ಅನುಕೂಲವಿದೆ. ಆದರೆ, ಸಮರ್ಪಕ ಬಸ್ ನಿಲ್ದಾಣದ ವ್ಯವಸ್ಥೆ ಇಲ್ಲ. ಪಕ್ಕದ ಅನೇಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮಕ್ಕೆ ಬಸ್ ನಿಲ್ದಾಣದ ಆವಶ್ಯಕತೆ ಹೆಚ್ಚಿದೆ.

ಮೂಲಸೌಲಭ್ಯಗಳಿಲ್ಲದೇ ಬಳಲುತ್ತಿರುವ ತೌಡೂರು ಗ್ರಾಮದಲ್ಲಿ ರಸ್ತೆ ಕೆಟ್ಟದಾಗಿದೆ. `ಗ್ರಾಮದ ಒಳಗೆ ರಸ್ತೆ ನಿರ್ಮಾಣ ಸಮರ್ಪಕವಾಗಿಲ್ಲ. ಚರಂಡಿಗಳು ಕಿತ್ತು ಹೋಗಿವೆ. ಅವುಗಳ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಸರ್ಕಾರದವರು ಯಾವಾಗಲೋ ಒಮ್ಮೆ ಸ್ವಚ್ಛತೆ ಕೆಲಸ ಮಾಡುತ್ತಾರೆ.
 
ಆದರೆ, ಮತ್ತೆ ಅದೇ ರೀತಿ ಹಾಳಾಗುತ್ತದೆ. ಮೊದಲು ರೋಡ್ ಮತ್ತು ಚರಂಡಿ ರಿಪೇರಿ ಆಗಬೇಕು. ಜತೆಗೆ ಊರ ಮುಂದೆ ಇರುವ ಹೊಂಡಕ್ಕೆ ತಡೆಗೋಡೆ ನಿರ್ಮಿಸಬೇಕು. ಅದರ ಸಮರ್ಪಕ ನಿರ್ವವಹಣೆ ಆಗಬೇಕು~ ಎಂದು ಗ್ರಾಮದ ಯುವಕ ಕೆ.ಎಂ. ಹರೀಶ್ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT